ಶಬರಿಮಲೆ ದೇವಳದಲ್ಲಿ ವಿರಾಜಮಾನವಾಗಿರುವ ಭಗವಾನ್ ಅಯ್ಯಪ್ಪ ಪಂದಳ ರಾಜನ ಪುತ್ರನಾಗಿದ್ದನೆಂದು ಪ್ರತೀತಿಯಿದೆ. ಅಚೆನ್‌ಕೊವಿಲ್ ನದಿ ದಂಡೆಯ ಮೇಲೆ ತನ್ನ ಅರಮನೆಗೆ ಸಮೀಪದಲ್ಲಿ ಪಂದಳ ರಾಜ ಶಬರಿಮಲೆ ಮಂದಿರದ ಮಾದರಿಯಲ್ಲಿ ದೇವಸ್ಥಾನ ಕಟ್ಟಿಸಿದ್ದು, ಅದು ಈಗಿನ ವಲಿಯ ಕೊಯಿಕಲ್ ದೇವಸ್ಥಾನವಾಗಿದೆ.ಅಯ್ಯಪ್ಪ ಇಲ್ಲಿ ತನ್ನ ಯೌವನದ ದಿನಗಳನ್ನು ಕಳೆದಿದ್ದರಿಂದ ಇಂದಿಗೂ ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ವಿವಿಧ ರಾಜ್ಯಗಳಿಂದ ಪಂದಳ ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.
ಮಕರವಿಳಕ್ಕು ದಿನದಂದು ಶಬರಿಮಲೆ ಅಯ್ಯಪ್ಪನ ಮೂರ್ತಿಯನ್ನು ಅಲಂಕರಿಸುವ ಅಯ್ಯಪ್ಪ ದೇವರ ಪವಿತ್ರ ಒಡವೆಗಳನ್ನು ಪಂದಳ ಅರಮನೆಯಲ್ಲಿ ಇಡಲಾಗುತ್ತದೆ. ಮಕರವಿಳಕ್ಕುಗೆ 2 ತಿಂಗಳ ಮುಂಚೆ ಈ ಒಡವೆಗಳ ಪೆಟ್ಟಿಗೆಯನ್ನು ಭಕ್ತಾದಿಗಳ ಪೂಜೆ ಸಲುವಾಗಿ ತೆರೆಯಲಾಗುತ್ತದೆ. ಮಕರವಿಳಕ್ಕು ಆರಂಭಕ್ಕೆ ಮೂರು ದಿನಗಳು ಮುಂಚಿತವಾಗಿ ಒಡವೆಗಳನ್ನು ಪಂಡಲಂನಿಂದ ಶಬರಿಮಲೆಗೆ ಮೆರವಣಿಗೆಯಲ್ಲಿ ತೆಗೆದುಕೊಂಡುಹೋಗಲಾಗುತ್ತದೆ. ಆಕಾಶದಿಂದ ಹದ್ದೊಂದು ಪ್ರತ್ಯಕ್ಷವಾಗಿ ಮೆರವಣಿಗೆಗೆ ಬೆಂಗಾವಲಾಗಿರುತ್ತದೆ. ಶಬರಿಮಲೆ ಭಕ್ತರು ಇದನ್ನು ದೇವರ ಪವಾಡವೆಂದು ಭಾವಿಸಿದ್ದಾರೆ.
ಪಂದಳ ರಾಜಮನೆತನದ ಹಿರಿಯ ಸದಸ್ಯ ಒಡವೆಗಳ ಮೆರವಣಿಗೆಗೆ ಬೆಂಗಾವಲಾಗಿರುತ್ತಾರೆ.
WD
ಪಂದಳ ವಲಿಯ ಕೊಯ್ಕಲ್ ಸಾಸ್ಥಾ ಮಂದಿರದಿಂದ ಜ.12ಕ್ಕೆ ಮಧ್ಯಾಹ್ನ 1 ಗಂಟೆಗೆ ಆರಂಭವಾಗುವ ತಿರುವಾಭರಣಂ ಮೆರವಣಿಗೆ ಬೆಂಗಾವಲಿಗೆ ತಿರುವಾತಿರಾನಲ್ ರಾಘವ ವರ್ಮಾ ರಾಜಾ ಅವರು ರಾಜಮನೆತನದ ಪ್ರತಿನಿಧಿಯಾಗಿರುತ್ತಾರೆ.
ಪೌರಾಣಿಕ ಕಥೆ
ಅಯ್ಯಪ್ಪ ದೇವರ ಬಗ್ಗೆ ಅನೇಕ ಕಥೆಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಸ್ವೀಕಾರಾರ್ಹ ಕಥೆಯು ಅಯ್ಯಪ್ಪ ಮಾನವಸ್ವರೂಪಿಯಾಗಿ ಪಂಡಲಂ ರಾಜನ ಪುತ್ರನಾಗಿದ್ದನು ಎನ್ನುವುದು. ಆ ಕಾಲದಲ್ಲಿ ರಾಜಾ ರಾಜಶೇಖರ ಪಂದಳ ರಾಜ್ಯವನ್ನು ಆಳುತ್ತಿದ್ದನು,
WD
ಬೇಟೆಯಾಡಲು ಅವನು ಹೋಗಿದ್ದ ಸಂದರ್ಭದಲ್ಲಿ ಪಂಪಾ ನದಿಯ ದಂಡೆಯ ಮೇಲೆ ಮಗುವಿನ ಆಕ್ರಂದನದ ಧ್ವನಿ ಕೇಳಿ ತಬ್ಬಿಬ್ಬಾದ. ಮಗುವಿನ ಅಳುವಿನ ಧ್ವನಿ ಬಂದ ದಾರಿಯಲ್ಲೇ ಸಾಗಿದಾಗ ಕುತ್ತಿಗೆಯಲ್ಲಿ ಮಣಿಯ ಹಾರ ಧರಿಸಿರುವ ಕಾಂತಿಯುಕ್ತ ಮುಖದ ಸುಂದರ ಮಗು ಅವನಿಗೆ ಗೋಚರಿಸಿತು. ಪೌರಾಣಿಕ ಕಥೆಯ ಸಾರವೇನೆಂದರೆ ಮಣಿಕಂಠನ್‌ನೇ ಅಯ್ಯಪ್ಪನಾಗಿದ್ದು, ಹರಿ ಮತ್ತು ಹರನಿಗೆ ಜನ್ಮತಾಳಿದವನೆಂದು ಹೇಳಲಾಗಿದೆ.
ಮಕ್ಕಳಿರದ ತನ್ನ ಪ್ರಾರ್ಥನೆಗೆ ದೇವರು ಮೆಚ್ಚಿ ಈ ಮಗುವನ್ನು ಸಿಂಹಾಸನದ ಉತ್ತರಾಧಿಕಾರಿಯಾಗಿ ಕರುಣಿಸಿದ್ದಾನೆಂದು ರಾಜ ಭಾವಿಸಿ ಆ ಮಗುವನ್ನು ಸ್ವೀಕರಿಸಿದ. ಮಣಿಕಂಠನ್‌ಗೆ ಸೂಕ್ತ ಶಿಕ್ಷಣ ಮತ್ತು ತರಬೇತಿ ನೀಡಿ, ಅವನು ಶಿಕ್ಷಣ ಮತ್ತು ಸಮರಕಲೆಯಲ್ಲಿ ಪರಿಣತನಾಗಿ ಬೆಳೆದ.
ಏತನ್ಮಧ್ಯೆ ರಾಣಿ ಕೂಡ ಗುಂಡು ಮಗುವಿಗೆ ಜನ್ಮ ನೀಡಿದಳು, ಮಣಿಕಂಠನ್‌ನನ್ನು ಹಿರಿಯ ಮಗನೆಂದು ರಾಜ ಪರಿಗಣಿಸಿ ಯುವರಾಜನಾಗಿ ಪಟ್ಟ ಕಟ್ಟಲು ನಿರ್ಧರಿಸಿದ. ಆದರೆ ಮಣಿಕಂಠನ್ ಬಗ್ಗೆ ತೀವ್ರ ಉಪೇಕ್ಷೆ ಹೊಂದಿರುವ ರಾಜನ ಭ್ರಷ್ಟ ಸಚಿವ ಮಣಿಕಂಠನ್‌ಗೆ ಯುವರಾಜ ಪಟ್ಟ ಕಟ್ಟಿದರೆ ದುರಾದೃಷ್ಟ ಆವರಿಸುತ್ತದೆ ಎಂದು ಮುಗ್ಧ ರಾಣಿಯನ್ನು ನಂಬಿಸಿದನಲ್ಲದೇ ರಾಜ್ಯಾಧಿಕಾರವು ವಾಸ್ತವವಾಗಿ ಆಕೆಯ ಸ್ವಂತ ಮಗನಿಗೆ ಸೇರಬೇಕೆಂದು ನಂಬಿಸಿದ. ಮಣಿಕಂಠನ್ ಯುವರಾಜನಾಗದಂತೆ ಸಂಚು ಹೂಡಿದ ಅವರಿಬ್ಬರು ರಾಜಮನೆತನದ ವೈದ್ಯನಿಗೆ ಲಂಚ ನೀಡಿ ತಮ್ಮ ಕಡೆ ಸೆಳೆದುಕೊಂಡರು.
WD
ರಾಣಿಯು ಮಾರಕ ಹೊಟ್ಟೆ ನೋವಿನಿಂದ ನರಳುವಂತೆ ನಟಿಸಿದಾಗ ರಾಜವೈದ್ಯ ಅವಳ ಪರೀಕ್ಷೆ ಮಾಡಿ ಹೊಟ್ಟೆನೋವು ಶಮನಕ್ಕೆ ಹುಲಿಯ ಹಾಲೊಂದೇ ಮದ್ದು ಎಂದು ಹೇಳಿದರು. ರಾಜನು ತೀವ್ರ ಸಂಕಷ್ಟದಲ್ಲಿ ಸಿಲುಕಿದ. ಹುಲಿಯ ಹಾಲನ್ನು ತರುವ ಆತ್ಮಹತ್ಯಾಕಾರಿ ಕಾರ್ಯಾಚರಣೆಗೆ ಯಾರನ್ನು ನಿಯೋಜಿಸುವುದೆಂದು ತೋಚದೇ ಕಂಗಾಲಾದ. ಆದರೆ ಅಷ್ಟರಲ್ಲಿ ವೀರ ಯುವಕ ಮಣಿಕಂಠ ಹುಲಿಯ ಹಾಲನ್ನು ತರುವುದಾಗಿ ಸ್ವಯಂಪ್ರೇರಣೆಯಿಂದ ಮುಂದೆ ಬಂದ.
ಚಿಂತಾಕ್ರಾಂತನಾದ ತಂದೆ ಬೇಡವೆಂದು ಹೇಳಿದರೂ ದಟ್ಟವಾದ ಅರಣ್ಯಕ್ಕೆ ಅವನು ಪ್ರಯಾಣ ಆರಂಭಿಸಿದ. ಕೆಲವು ದಿನಗಳು ಕಳೆದ ಬಳಿಕ ಮಣಿಕಂಠನ್ ಹುಲಿಯ ಮೇಲೆ ಸವಾರಿ ಮಾಡುತ್ತಾ ಅದನ್ನು ಹಿಂಬಾಲಿಸಿ ಮರಿಗಳೊಂದಿಗೆ ಅರಮನೆಯ ಆವರಣದೊಳಗೆ ಪ್ರವೇಶಿಸಿದಾಗ ಸಂಚುಕೋರರು ತಮ್ಮ ಕ್ರೂರ ಸಂಚು ಬಯಲಾಗುವುದೆಂದು ಹೆದರಿದರು.
ಮಣಿಕಂಠನ್ ಸಾಮಾನ್ಯ ಮಾನವನಲ್ಲವೆಂಬುದು ಅವರೆಲ್ಲರಿಗೆ ಅರಿವಾಯಿತು.
WD
ಮಣಿಕಂಠನ್‌ನ ದೈವಿಕ ಶಕ್ತಿ ಬಗ್ಗೆ ಮನವರಿಕೆಯಾಗಿ ತಮ್ಮ ಮೋಕ್ಷ ಸಾಧನೆಗೆ ಮತ್ತು ರಾಜ್ಯದ ಸುರಕ್ಷತೆ ಸಲುವಾಗಿ ತಮ್ಮ ಜತೆ ಉಳಿಯುವಂತೆ ಪ್ರಾರ್ಥಿಸಿದರು. ಮಣಿಕಂಠನ್ ಆ ಸ್ಥಳದಿಂದ ತೆರಳಲು ದೃಢಸಂಕಲ್ಪ ಮಾಡಿದ್ದ. ಸಂತೋಷ, ದುಃಖ, ಭಯ, ಆಶ್ಚರ್ಯ ಭಕ್ತಿ ಭಾವನೆಗಳಿಂದ ತೊಯ್ದ ರಾಜ ,ಮಣಿಕಂಠನ್ ಕರುಣೆ ಮತ್ತು ಆಶೀರ್ವಾದಕ್ಕೆ ಪ್ರಾರ್ಥಿಸಿದ. ಮಣಿಕಂಠನ್ ಬಳಿಕ ಮೋಕ್ಷ ಸಾಧನೆಯ ಮಾರ್ಗವನ್ನು ರಾಜನಿಗೆ ಬೋಧಿಸಿದ. ಪಂಪಾ ನದಿಯ ಉತ್ತರಕ್ಕೆ ಶಬರಿಮಲೆಯಲ್ಲಿ ದೇವಸ್ಥಾನವನ್ನು ಕಟ್ಟಿಸಿ ತನ್ನ ಮೂರ್ತಿಯನ್ನು ಪ್ರತಿಷ್ಠಾಪಿಸಬಹುದೆಂದು ಉಪದೇಶಿಸಿದನು, ಶಬರಿಮಲೆ ಯಾತ್ರೆಯನ್ನು ಹೇಗೆ ಕೈಗೊಳ್ಳಬಹುದೆಂದು ವಿವರಿಸಿ, ವೃತದ ಮಹತ್ವದ ಬಗ್ಗೆ ತಿಳಿಸಿ ತನ್ನ ದರ್ಶನದಿಂದ ಭಕ್ತರು ಪುನೀತರಾಗುತ್ತಾರೆಂದು ತಿಳಿಸಿದ.
ಮಕರವಿಳಕ್ಕು ಶಬರಿಮಲೆ ಯಾತ್ರೆಯ ಪಾರಾಕಾಷ್ಠೆ ಸ್ಥಿತಿ. ಪ್ರತಿ ವರ್ಷ ಜನವರಿ 14ರಂದು ಇದು ಸಂಭವಿಸುತ್ತದೆ. ಆ ದಿನದಂದು ಅಯ್ಯಪ್ಪ ದೇವರ ಮೂರ್ತಿಯನ್ನು ಚಿನ್ನದ ಆಭರಣಗಳಿಂದ ಅಲಂಕರಿಸಿ ಪಂಡಲಂನಿಂದ ಶಬರಿಮಲೆಗೆ ಪಾದಯಾತ್ರೆಯಲ್ಲಿ ತರಲಾಗುತ್ತದೆ. ಆದ್ದರಿಂದ ತಿರುವಾಂಭರಣ ಗೋಷಾಯಾತ್ರೆ ಮಹತ್ವ ಪಡೆದಿದೆ.
ಬಳಿಕ ಮಣಿಕಂಠನ್ ರಾಜನಿಗೆ ಸಾಂತ್ವನ ಹೇಳಿ ರಾಜನಿಗೆ ಮತ್ತು ಅಲ್ಲಿ ನೆರೆದಿದ್ದ ಎಲ್ಲರಿಗೂ ಆಶೀರ್ವದಿಸಿ ಮಾಯವಾದ. ರಾಜ ಮಣಿಕಂಠನ್ ಆದೇಶದಂತೆ ಶಬರಿಮಲೆಯಲ್ಲಿ ದೇವಸ್ಥಾನ ನಿರ್ಮಿಸಿದ.
ಪಂದಳ ನಗರಕ್ಕೆ ಒಂದು ಕಿಮೀ ದೂರದಲ್ಲಿ ಮುಖ್ಯ ಸೆಂಟ್ರಲ್ ರಸ್ತೆಯ ಪಕ್ಕದಲ್ಲಿ ವಲಿಯ ಕೋಯಿಕಲ್ ದೇವಸ್ಥಾನವಿದೆ. ಹತ್ತಿರದ ಬಸ್ ನಿಲ್ದಾಣ ಪಂದಳ ಮತ್ತು ಹತ್ತಿರದ ರೈಲ್ವೆ ನಿಲ್ದಾಣ ಚೆಂಗನೂರ್(14 ಕಿಮೀ). ಹತ್ತಿರದ ವಿಮಾನನಿಲ್ದಾಣ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನನಿಲ್ದಾಣ(ಸುಮಾರು 100 ಕಿಮೀ ದೂರ).