ಮರಾಠ ದೊರೆ ಛತ್ರಪತಿ ಶಿವಾಜಿ ಕುಟುಂಬ ದೇವತೆಯಾಗಿ ಆರಾಧಿಸುತ್ತಿದ್ದ ಮಾತೆ ತುಳಜಾ ಭವಾನಿ ದೇವಾಲಯವು ಮಹಾರಾಷ್ಟ್ರದ ಒಸ್ಮನಾಬಾದ್ ಜಿಲ್ಲೆಯ ತುಳಜಾಪುರದಲ್ಲಿದೆ.
ಶಿವಾಜಿ ಸಂತತಿಯಲ್ಲದೆ ಈ ದೇವಿಯನ್ನು ಮಹಾರಾಷ್ಟ್ರ ಹಾಗೂ ಹೊರಗಿನ ಇತರ ಕುಟುಂಬಗಳು ಆರಾಧಿಸಿಕೊಂಡು ಬಂದಿವೆ. ಮಹಾರಾಷ್ಟ್ರದ ಮೂರುವರೆ ಶಕ್ತಿಪೀಠಗಳು ಮತ್ತು ಭಾರತದ ಐವತ್ತೊಂದು ಶಕ್ತಿಪೀಠಗಳಲ್ಲಿ ತುಳಜಾಭವಾನಿ ಒಂದಾಗಿದೆ.
ಪ್ರಾಚೀನ ಭಾರತದಲ್ಲಿ ನೈಮಿಶ್ಯ ಅರಣ್ಯ ಹಾಗೂ ದಂಡಕಾರಣ್ಯ ಪ್ರಮುಖ ಪರ್ವತಗಳಾಗಿದ್ದವು. ಮಹಾರಾಷ್ಟ್ರದ ಅಂಗವಾಗಿದ್ದ ಮರಾಠಾವಾಡವು ಪ್ರಾಚೀನ ದಂಡಕಾರಣ್ಯದಲ್ಲಿ ನೆಲೆಸಿದೆ. ಇದನ್ನು ಯುಮುನಶಾಲಾ ಪರ್ವತ ಅಲಿಯಾಸ್ ಬಾಲಘಾಟ್ ಎಂದು ಕರೆಯಲಾಗುತ್ತದೆ. ತುಳಜಾಪುರವು ಯಮುನಶಾಲದ ಗುಡ್ಡದಲ್ಲಿ ನೆಲೆಸಿದೆ. ಈ ಪ್ರದೇಶದಲ್ಲಿ ತುಳಜಾಭವಾನಿಯ ಸಾಲಿಗ್ರಾಮದ ಸ್ವಯಂಬು ಮೂರ್ತಿ ಇದೆ.
ಇತರೆ ದೇವಾಲಯಗಳಿಗೆ ಹೋಲಿಸಿದರೆ ತುಳಜಾಭವಾನಿ ಮೂರ್ತಿಯ ಸ್ಥಾಪನೆ ಸ್ಥಿರವಲ್ಲ ಬದಲಿಗೆ ಚರ. ಇತರ ದೇವಾಲಯಗಳಲ್ಲಿ ದೇವರ ಮೂರ್ತಿಯನ್ನು ಶಾಶ್ವತವಾಗಿ
WD
WD
ಸ್ಥಿರಪಡಿಸಿದ್ದರೆ, ಇಲ್ಲಿಯ ಮೂರ್ತಿಯನ್ನು ಅತ್ತಿತ್ತ ಚಲಿಸಬಹುದಾಗಿದೆ. ಶ್ರೀಯಂತ್ರದಲ್ಲಿ ಆದಿ ಶಂಕರಾಚಾರ್ಯರು ಈ ಮೂರ್ತಿಯನ್ನು ಸ್ಥಾಪಿಸಿದರು ಎಂಬುದಾಗಿ ಚರಿತ್ರೆ ಹೇಳುತ್ತದೆ.
ವರ್ಷದಲ್ಲಿ ಈ ಮೂರ್ತಿಯನ್ನು ಮೂರುಬಾರಿ ಪ್ರದಕ್ಷಿಣೆಗಾಗಿ ಹೊರತೆಗೆಯಲಾಗುತ್ತದೆ. ಶ್ರೀಯಂತ್ರ, ಮಹಾದೇವ ಮತ್ತು ಖಂಡೇರಾವ್ ಜತೆಗೆ ಪ್ರದಕ್ಷಿಣೆ ಮಾಡಲಾಗುತ್ತದೆ.
ಹೇಮದಪಂತಿ ವಾಸ್ತುಶೈಲಿಯಲ್ಲಿರುವ ತುಳಜಾ ಭವಾನಿ ದೇವಾಲಯದ ಪ್ರವೇಶ ಭಾಗದಲ್ಲಿ ಎರಡು ಮಹಾದ್ವಾರಗಳಿವೆ. ದೇವಾಲಯದ ಒಳಗೆ ಪ್ರವೇಶಿಸುತ್ತಿರುವಂತೆಯೇ 108 ತೀರ್ಥಗಳ ಕಲ್ಲೋಲ ತೀರ್ಥ ಕಣ್ಣಿಗೆ ಬೀಳುತ್ತದೆ. ಬಳಿಕ ಕೆಲವು ಮೆಟ್ಟಿಲುಗಳನ್ನು ಕೆಳಗಿಳಿದ ಬಳಿಕ ನಾವು ಗೋಮುಖ ತೀರ್ಥದ ಬಳಿ ಬರುತ್ತೇವೆ. ಇಲ್ಲಿ ನಿರಂತರ ನೀರು ಹರಿಯುತ್ತಿರುತ್ತದೆ. ಗೋಮುಖದಿಂದ ಮುಂದುಗಡೆ ಸಿದ್ಧಿವಿನಾಯಕ ಆಲಯವಿದೆ.
WD
WD
ಇಲ್ಲಿಂದ ಬಳಿಕ ಸರ್ದಾರ್ ನಿಂಬಾಳ್ಕರ್ ಅವರು ನಿರ್ಮಿಸಿರುವ ಸುಂದರ ವಿನ್ಯಾಸದ ಅಲಂಕೃತ ದ್ವಾರವನ್ನು ದಾಟುತ್ತೇವೆ. ಈ ದ್ವಾರವನ್ನು ದಾಟುತ್ತಿರುವಂತೆಯೇ ಎಡಬದಿಯಲ್ಲಿ ಋಷಿ ಮಾರ್ಖಾಂಡೇಯ ಅವರ ಮೂರ್ತಿ ಹಾಗೂ ಬಲಬದಿಯಲ್ಲಿ ದೊಡ್ಡದಾದ ನಗಾರಿಯೊಂದನ್ನು ಕಾಣುತ್ತೇವೆ.
ಗರ್ಭಗೃಹ ಪ್ರವೇಶಿಸಿದಾಗ ಮಾತೆ ತುಳಜಾಭವಾನಿಯ ಸ್ವಯಂಭೂ ಮೂರ್ತಿಯ ದರ್ಶನವಾಗುತ್ತದೆ. ಅಲಂಕೃತ ಪೀಠದ ಮೇಲೆ ಸ್ಥಾಪಿತವಾಗಿರುವ ಈ ಭವ್ಯ ಮೂರ್ತಿ ನೋಡುಗರ ಮನದಲ್ಲಿ ಭಕ್ತಿಯುಕ್ಕಿಸುತ್ತದೆ. ಗರ್ಭಗೃಹದ ಸಮೀದಲ್ಲಿ ಪಲ್ಲಂಗವೊಂದಿದ್ದು ಅಲ್ಲಿ ದೇವಿ ನಿದ್ರಿಸುತ್ತಾಳೆ ಎಂಬ ಪ್ರತೀತಿ ಇದೆ. ಪಲ್ಲಂಗದ ಎದುರುಗಡೆ ಶಿವಲಿಂಗವಿದೆ. ಭವಾನಿ ಮಾತೆ ಮತ್ತು ಭಗವಾನ್ ಶಂಕರ ಎದುರುಬದುರಾಗಿ ಕುಳಿತಿರುವುದನ್ನು ಕಾಣಬಹುದು.
ದೇವಾಲಯದ ಕಂಬವೊಂದರಲ್ಲಿ ಬೆಳ್ಳಿಯ ಉಂಗುರವೊಂದಿದೆ. ಈ ಕಂಬದ ಕುರಿತಂತೆ ನಂಬುಗೆಯೊಂದಿದೆ. ದೇಹದ ಯಾವುದೇ ಭಾಗದಲ್ಲಿ ಉಷ್ಣದಿಂದಾಗಿ ನೋವಿದ್ದರೆ ಈ ಉಂಗುರವನ್ನು ಏಳು ದಿನಗಳ ಕಾಲ ಸ್ಪರ್ಷಿಸಿದರೆ ನೋವು ಶಮನವಾಗುತ್ತದೆ ಎಂಬ ನಂಬುಗೆ ಭಕ್ತಾದಿಗಳದ್ದು.
ಇಲ್ಲೊಂದು ಶಕುನ್ವಂತಿ ಎಂಬ ಕಲ್ಲಿನ ಗೋಳವಿದೆ. ಇದು ಶಕುನ ಹೇಳುವ ಮಾಂತ್ರಿಕ ಚಿಂತಾಮಣಿ. ಈ ಕಲ್ಲಿನಮೇಲೆ ಮೆದುವಾಗಿ ಕೈಯಿರಿಸಿ ಮನದಲ್ಲಿ ನಿಮ್ಮ ಪ್ರಶ್ನೆಯನ್ನು ಕೇಳಿದಲ್ಲಿ ಈ ಕಲ್ಲು ತನ್ನ ಚಲನೆ ಮೂಲಕ ಹೌದು ಅಥವಾ ಇಲ್ಲ ಉತ್ತರ ನೀಡುತ್ತದೆ. ಉತ್ತರ ಹೌದೆಂಬುದಾದಲ್ಲಿ ಕಲ್ಲು ಬಲಕ್ಕೆ ತಿರುಗುತ್ತದೆ. ಇಲ್ಲವೆಂದಾದರೆ ಎಡಕ್ಕೆ ತಿರುಗುತ್ತದೆ. ಕಲ್ಲು ಚಲಿಸದೇ ನಿಂತಲ್ಲಿ ನಿಮ್ಮ ಇಚ್ಛಿತ ಕಾರ್ಯದಲ್ಲಿ ವಿಳಂಬವಾಗುತ್ತದೆ ಎಂಬರ್ಥವಂತೆ. ದೇವಿ ತುಳಜಾಭವಾನಿ ದರ್ಶನಕ್ಕೆ ಬರುತ್ತಿದ್ದ ಛತ್ರಪತಿ ಶಿವಾಜಿ ಯುದ್ಧಕ್ಕೆ ತೆರಳುವ ಮುನ್ನ ಈ ಚಿಂತಾಮಣಿಯಲ್ಲಿ ಪ್ರಶ್ನೆ ಕೇಳಿಯೇ ತೆರಳುತ್ತಿದ್ದರು ಎಂಬುದಾಗಿ ಹೇಳಲಾಗಿದೆ.
ಚಿಂತಾಮಣಿಯ ನಂತರದಲ್ಲಿ ಜಮಾದರ್ಕಣ(ಖಜಾನೆ) ಇದೆ. ದೇವಿಯ ಎಲ್ಲಾ ಆಭರಣಗಳನ್ನು ಈ ಜಮಾದರ್ಕಣದಲ್ಲಿ ಇರಿಸಲಾಗುತ್ತಿದೆ. ಹಬ್ಬದ ವೇಳೆಗೆ ಈ ಆಭರಣಗಳನ್ನು ದೇವಿಗೆ ತೊಡಿಸಲಾಗುತ್ತದೆ. ಛತ್ರಪತಿ ಶಿವಾಜಿ ದೇವಿಗೆ ಒಪ್ಪಿಸಿದ 108 ಪುತ್ತಲಿಗಳ ಚಿನ್ನದ ಹಾರವೊಂದು ಈ ಆಭರಣದಲ್ಲಿ ಸೇರಿದೆ.
ಭವ್ಯ ಮೂರ್ತಿ ಸಾಲಿಗ್ರಾಮದ(ಕಪ್ಪುಕಲ್ಲಿನ) ಎಂಟು ಕೈಗಳ ದೇವಿಯ ಈ ಭವ್ಯಮೂರ್ತಿಯನ್ನು 'ದೇವಿಪಂಚಾಯತನ' ಮಾದರಿಯಲ್ಲಿ ಸ್ಥಾಪಿಸಲಾಗಿದೆ. ಒಂದು ಕೈಯಲ್ಲಿ ರಕ್ಕಸನ ಕೂದಲನ್ನು ಹಿಡಿದಿದ್ದರೆ, ಮತ್ತೊಂದು ಕೈಯಲ್ಲಿರುವ ತ್ರಿಶೂಲ ರಕ್ಕಸನ ಎದೆಯನ್ನು ಸೀಳಿದೆ. ಕಾಲಬುಡದಲ್ಲಿ ಬಿದ್ದಿರುವ ರಕ್ಕಸ ಮಹಿಶಾಸುರನ ಎದೆಗೆ ತ್ರಿಶೂಲ ಚುಚ್ಚಿದೆ. ಇದು ದೇವಿಯ ದುಷ್ಟ ಸಂಹಾರವನ್ನು ಸಂಕೇತಿಸುತ್ತದೆ. ಮೂರ್ತಿಯ ಬಲಭಾಗದಲ್ಲಿ ದೇವತೆಯ ವಾಹನ ಸಿಂಹವಿದೆ. ಮೂರ್ತಿಯ ಬಳಿಯಲ್ಲಿ ಪುರಾಣಗಳನ್ನ ಪಠಿಸುತ್ತಿರುವ ಋಷಿ ಮಾರ್ಕಾಂಡೇಯನ ವಿಗ್ರಹವಿದೆ. ದೇವಿಯ ಬಲಗೈಯಲ್ಲಿ ಸೂರ್ಯನ ಚಿತ್ರವಿದೆ. ದೇವಿಯ ಎಲ್ಲಾ ಕೈಗಳಲ್ಲೂ ಚಕ್ರ, ಗಧೆ, ತ್ರಿಶೂಲಸ ಅಂಕುಶ, ಧನು, ಪಾಶದಂತಹ ಆಯುಧಗಳಿವೆ. ಮೂರ್ತಿಯ ಪಕ್ಕದಲ್ಲಿ ಬ್ರಾಹ್ಮಣ ಕರ್ದಾಮನ ಪತ್ನಿ ಅನುಭೂತಿ ದೇವಿಯನ್ನು ಪೂಜಿಸುತ್ತಿರುವ ಮೂರ್ತಿ ಇದೆ. ದೇವಿಯ ಮೂರ್ತಿಯ ಮೇಲೆ ಭಗವಾನ್ ಮಹಾದೇವನ ಚಿಕ್ಕ ಮೂರ್ತಿ ಇದೆ.
ತುಳಜಾಭವಾನಿ ಚರಿತ್ರೆ ತುಳಜಾಭವಾನಿಯ ಕುರಿತು ಮಾರ್ಕಾಂಡೇಯ ಪುರಾಣದಲ್ಲಿ ಪ್ರಸ್ತಾಪವಿದೆ. ಸಂಸ್ಕೃತ ಗೃಂಥ 'ದುರ್ಗಾಸಪ್ತಶತಿ'ಯಲ್ಲಿ ದೇವಿಯ ಕುರಿತಾದ 13 ಅಧ್ಯಾಯಗಳು ಮತ್ತು 700 ಶ್ಲೋಕಗಳಿವೆ. ಈ ಗೃಂಥವು ಋಷಿ ಮಾರ್ಕಾಂಡೇಯ ವಿರಚಿತ ಮಾರ್ಕಾಂಡೇಯ ಪುರಾಣದ ಭಾಗವಾಗಿದೆ. ದೇವಿ ಭಾಗವತದಲ್ಲಿಯೂ ತುಳಜಾಭವಾನಿ
WD
WD
ಮಾತೆಯ ಪ್ರಸ್ತಾಪವಿದೆ.
ತುಳಜಾಭವಾನಿಯ ವೃತ್ತಾಂತ ಕೃತಯುಗದಲ್ಲಿ ಕರ್ದಾಮನೆಂಬ ಬ್ರಾಹ್ಮಣನಿದ್ದ. ಈ ಬ್ರಾಹ್ಮಣನ ಪತ್ನಿ ಅನುಭೂತಿ. ಈಕೆ ರತಿಯಂತ ಚೆಲವು ಹಾಗೂ ಸದ್ಗುಣಗಳಿಂದ ಕಂಗೊಳಿಸುತ್ತಿದ್ದಳು. ತನ್ನ ಪತಿ ಕರ್ದಾಮ ಸತ್ತಾಗ ಆಕೆ ತನ್ನ ಪತಿಯ ಚಿತೆಗೆ ಹಾರಿ ಸಹಗಮನಕ್ಕೆ ಸಿದ್ಧಳಾದಳು. ಅಷ್ಟರಲ್ಲಿ ಮಗುವಿರುವ ಹೆಂಗಸು ಸಹಗಮನ ಮಾಡಬಾರದೆಂಬ ಅಶರೀರವಾಣಿ ಕೇಳಿಸಿತು. ಈ ಹಿನ್ನೆಲೆಯಲ್ಲಿ ಮನ ಪರಿವರ್ತಿಸಿದ ಆಕೆ ಮಂದಾಕಿನ ನದಿಯ ಸುಂದರ ಪರಿಸರದಲ್ಲಿ ವಾಸ್ತವ್ಯ ಹೂಡಿ ದೇಹದಂಡನೆಯ ನಿರ್ಧಾರ ತೆಗೆದುಕೊಂಡಳು. ಅನುಭೂತಿ ಒಬ್ಬ ಯೋಗಿ. ಸುಂದರಿ ಅನುಭೂತಿಯು ಸಮಾಧಿ ಸ್ಥಿತಿಯಲ್ಲಿರುವಾಗ ಆಕೆಯ ಮೇಲೆ ರಾಕ್ಷಸರ ದೊರೆ ಕುಕಾರನ ದೃಷ್ಟಿ ಬಿತ್ತು. ಈಕೆಯನ್ನು ಕಂಡಾಗ ರಾಕ್ಷಸನ ಲಂಪಟನತನ ಜಾಗೃತಗೊಂಡಿದ್ದು, ಆಕೆಯನ್ನು ಒಲಿಸಿಕೊಳ್ಳಲು ಸಿಹಿಯಾದ ಮಾತುಗಳಿಂದ ಯತ್ನಿಸಿದ. ವಿಫಲವಾದಾಗ ಆಕೆಯನ್ನು ಕೆಡಿಸಲು ಮುಂದಾದ. ಅಷ್ಟರಲ್ಲಿ ದೇವಿಯನ್ನು ಪ್ರಾರ್ಥಿಸಿದ ಅನುಭೂತಿ ಸಹಾಯಕ್ಕಾಗಿ ಕೂಗಲಾರಂಭಿಸಿದಳು.
WD
WD
ಆಕೆಯ ಮೊರೆ ಕೇಳಿದ ತಾಯಿ ತುಳಜಾಭವಾನಿ, ರಕ್ಕಸ ಸಂಹಾರಕ್ಕಾಗಿ ನಿರ್ಧರಿಸಿ ಅನುಭೂತಿಯ ಸಿದ್ಧಿಯೋಗದ ಸ್ಥಳಕ್ಕೆ ಆಗಮಿಸಿಳು. ದೇವಿಯು ಕುಕಾರನನ್ನು ಕೊಲ್ಲಲು ಅನುವಾಗುತ್ತಿರುವಂತೆ, ರಾಕ್ಷಸ ತನ್ನ ರೂಪವನ್ನು ಮಹಿಶ(ಕೋಣ) ರೂಪಕ್ಕೆ ಬದಲಿಸಿ ನರ್ತಿಸಲಾರಂಭಿಸಿದ. ಅಶ್ವಯುಜ 10ರಂದು ದೇವಿಯು ಕುಕಾರನನ್ನು ಸಂಹರಿಸಿದ್ದು, ಇದರ ಕುರುಹಾಗಿ ವಿಜಯ ದಶಮಿಯನ್ನು ಆಚರಿಸಲಾಗುತ್ತಿದೆ. ತನ್ನ ಭಕ್ತೆಯನ್ನು ಕಾಪಾಡಲು ದೇವಿಯು ತ್ವರಿತವಾಗಿ ಆಗಮಿಸಿರುವವುದಕ್ಕೆ ಆಕೆಯನ್ನು 'ತ್ವರಿತ' ಎಂಬುದಾಗಿ ಕರೆಯಲಾಗುತ್ತದೆ. ಮರಾಠಿ ಭಾಷೆಯಲ್ಲಿ ತುಳಜಾ ಅಂದರೆ ತ್ವರಿತ ಎಂದರ್ಥ. ತ್ವರಿತ ಮತ್ತು ದೇವಿ ಮರಾಠಿಯಲ್ಲಿ ತುಳಜಾ ಭವಾನಿ ಎಂದು ಕರೆಯಲ್ಪಡುತ್ತದೆ.ದೇವಾಲಯದ ಒಳನೋಟ,
ತುಳಜಾ ಭವಾನಿ ಪೂಜೆ ಮರಾಠ ಆಡಳಿತ ಕಾಲದಲ್ಲಿ ಈ ದೇವಾಲಯ ಸಮುಚ್ಛಯ ಪ್ರಾಮುಖ್ಯತೆ ಪಡೆದುಕೊಂಡಿತು. ತಾಯಿ ತುಳಜಾ ಮಾತೆಯು ಭೋಂಸ್ಲೆ ಪ್ರಭುಗಳ ಕುಟುಂಬ ದೈವವಾಗಿದ್ದಳು. ಛತ್ರಪತಿ ಶಿವಾಜಿ ದೇವಿಗೆ ವಂದಿಸಿಯೇ ತನ್ನೆಲ್ಲ ಕೆಲಸ ಕಾರ್ಯಗಳನ್ನು ಪೂರೈಸುತ್ತಿದ್ದರು. ಶಿವಾಜಿಗೆ ತುಳಜಾ ಭವಾನಿ ತಾಯಿಯ ರಕ್ಷೆ ಇತ್ತು ಎಂಬ ನಂಬುಗೆ ಇದೆ. ಮಹಾರಾಷ್ಟ್ರದ ಒಸ್ಮನಾಬಾದ್ ಜಿಲ್ಲೆಯ ತುಳಜಾಪುರ ಒಂದು ಪವಿತ್ರ ಕ್ಷೇತ್ರ. ಮರಾಠವಾಡ ಪ್ರದೇಶದಲ್ಲಿರುವ ಈ ದೇವಾಲಯವು ಸಮುದ್ರ ಮಟ್ಟದಿಂದ 270 ಮೀಟರ್ ಎತ್ತರಕ್ಕಿದ್ದು ಬಾಲಘಾಟ್ ಎಂದು ಇಲ್ಲಿಗೆ ಹೆಸರು. ಇಲ್ಲಿ ಹುಣಸೇ ಮರಗಳೇ ತುಂಬಿದ್ದರಿಂದ ಇಲ್ಲಿಗೆ 'ಚಿಂಚ್‌ಪುರ' ವೆಂಬ ಹೆಸರಿತ್ತು. ಆದರೆ ಕ್ರಮೇಣ ತುಳಜಾ ಭವಾನಿಯು ಇಲ್ಲಿ ನೆಲೆಸಿರುವ ಕಾರಣ ಇಲ್ಲಿಗೆ ತುಳಜಾಪುರ ಎಂಬ ಹೆಸರಾಯಿತು. ಇದನ್ನೀಗ ಭಾರತದ ಪ್ರಮುಖ ಪವಿತ್ರ ಸ್ಥಳಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ದೇಶಾದ್ಯಂತದಿಂದ ಲಕ್ಷಾಂತರ ಮಂದಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ನವರಾತ್ರಿಯ ವೇಳೆ ಇಲ್ಲಿ ವಿಶೇಷ ಪೂಜಾದಿ ಕಾರ್ಯಕ್ರಮಗಳು ಜರುಗುತ್ತವೆ. ಪಾಂಡವಪುರ ಮತ್ತು ಅಕ್ಕಲಕೋಟೆ ಇದರ ಸಮೀಪವಿರುವ ಇತರ ಧಾರ್ಮಿಕ ಕ್ಷೇತ್ರಗಳಾಗಿವೆ.
ಬಸ್ಸು, ರೈಲು ಅಥವಾ ವಿಮಾನ ಯಾನದ ಮೂಲಕ ತುಳಜಾಪುರಕ್ಕೆ ಪ್ರಯಾಣ ಮಾಡಬಹುದಾಗಿದೆ.
ಬಸ್ಸಿನಲ್ಲಿ ಬರುವುದಾದರೆ- ರಾಷ್ಟ್ರದ ದಕ್ಷಿಣದ ಭಾಗದಿಂದ ಬರುವ ಯಾತ್ರಿಕರು, ನಲ್ದುರ್ಗಕ್ಕೆ ತಲುಪಿದರೆ ಮತ್ತೆ ಅಲ್ಲಿಂದ ತುಳಜಾಪುರಕ್ಕೆ 35 ಕಿ.ಮೀ ದೂರವಿದೆ. ಉತ್ತರ ಅಥವಾ ಪಶ್ಚಿಮ ಭಾಗದಿಂದ ಬರುವವರು ಸೋಲಾಪುರ ತಲುಪಿದರೆ, ಅಲ್ಲಿಂದ ಮತ್ತೆ ತುಳಜಾಪುರಕ್ಕೆ 44 ಕಿ.ಮೀ. ಇಲ್ಲವೆ ಯಾತ್ರಿಕರು ಒಸ್ಮಾನಾಬಾದ್ ತಲುಪಿದರೆ ಅಲ್ಲಿಂದ ಮತ್ತೆ 18 ಕಿ.ಮೀಗಳು ಮಾತ್ರ. ಪಶ್ಚಿಮದಿಂದ ಬರುವ ಯಾತ್ರಿಕರು ಲಾಥೂರ್ ತಲುಪಿದರೆ, ಅಲ್ಲಿಂದ ಮತ್ತೆ ತುಳಜಾಮಾತೆ ದರ್ಶನಕ್ಕೆ 75 ಕಿ.ಮೀ ಸಾಗಬೇಕು. ಸೋಲಾಪುರ, ಓಸ್ಮಾನಾಬಾದ್ ಮತ್ತು ನಲ್ದುರ್ಗದಿಂದ ತುಳಜಾಪುರಕ್ಕೆ ಪ್ರತೀ 10 ನಿಮಿಷಕ್ಕೊಂದು ಬಸ್ಸು ಹೊರಡುತ್ತದೆ.
ರೈಲು ಪ್ರಯಾಣಿಕರಿಗೆ- ತುಳಜಾಪುರಕ್ಕೆ ಬರಲಿಚ್ಚಿಸುವ ಯಾತ್ರಿಕರು ಸೋಲಾಪುರ ರೈಲ್ವೇ ನಿಲ್ದಾಣಕ್ಕೆ ಆಗಮಿಸಬೇಕು. ಇದು ತುಳಜಾಪುರಕ್ಕಿರುವ ಹತ್ತಿರದ ರೈಲ್ವೇ ನಿಲ್ದಾಣ. ಇಲ್ಲಿಂದ ತುಳಜಾಪುರ 44ಕಿ.ಮೀ ದೂರ.
ವಿಮಾನದಲ್ಲಿ ಬರಲಿಚ್ಚಿಸುವವರಿಗೆ- ತುಳಜಾಪುರದ ಹತ್ತಿರದ ವಿಮಾನ ನಿಲ್ದಾಣವೆಂದರೆ, ಪುಣೆ. ಅಥವಾ ಹೈದರಾಬಾದ್. ಇಲ್ಲಿಂದ ಪ್ರಯಾಣಿಕರು ರೈಲು ಇಲ್ಲವೇ ಬಸ್ ಮುಖಾಂತರ ತುಳಜಾಪುರವನ್ನು ತಲುಪಬೇಕು.