ಹರಮಂದಿರ್ ಸಾಹೀಬ- ಸ್ವರ್ಣ ಮಂದಿರ

WD
ದರ್ಬಾರ್ ಸಾಹೀಬ ಅಥವಾ ಸ್ವರ್ಣ ಮಂದಿರ ಎಂದೂ ಕರೆಯಲಾಗುವ ಶ್ರೀ ಹರ್ಮಂದಿರ್ ಸಾಹೀಬ ವಿಶ್ವ ವಿಖ್ಯಾತ. ತನ್ನ ಸ್ವರ್ಣ ಲೇಪನ ಮತ್ತು ಸೌಂದರ್ಯಭರಿತ ನೋಟದಿಂದಲೇ ಅದು ಗಮನ ಸೆಳೆಯುತ್ತದೆ. ವಿಶ್ವಾದ್ಯಂತ ಹರಡಿಕೊಂಡಿರುವ ಪ್ರತಿಯೊಬ್ಬ ಸಿಖ್ ಕೂಡ, ಅಮೃತಸರದಲ್ಲಿರುವ ಈ ಅದ್ಭುತ, ದೈವೀಕ ಮಂದಿರವನ್ನು ನೋಡುವ ಮತ್ತು ಶ್ರೀ ಹರಮಂದಿರ್ ಸಾಹೀಬದಲ್ಲಿ ಅರ್ದಾಸ್ (ಪ್ರಾರ್ಥನೆ) ಸಲ್ಲಿಸುವ ಅಭಿಲಾಷೆ ಇಟ್ಟುಕೊಂಡಿರುತ್ತಾನೆ.

ಐದನೇ ಸಿಖ್ ಗುರುವಾದ ಗುರು ಅರ್ಜನ್ ಸಾಹೀಬ್ ಅವರು ಸಿಖ್ಖರಿಗೆ ಪೂಜಿಸಲು ಒಂದು ತಾಣ ಬೇಕು ಎಂಬುದನ್ನು ಮನಗಂಡು, ಅವರೇ ಈ ಮಂದಿರದ ರೂಪುರೇಷೆ ಸಿದ್ಧಪಡಿಸಿದ್ದರು. ಪವಿತ್ರ ತೀರ್ಥವಾದ ಅಮೃತ ಸರ ಅಥವಾ ಅಮೃತ ಸರೋವರವನ್ನು ಉತ್ಖನನ ಮಾಡುವ ಯೋಜನೆ ಮೂರನೇ ಸಿಖ್ ಗುರುವಾದ ಗುರು ಅಮರದಾಸ ಸಾಹೀಬ ಅವರದ್ದಾಗಿತ್ತು.

ಆದರೆ ಅದನ್ನು ಬಾಬಾ ಬುದ್ಧಜೀ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಗತಗೊಳಿಸಿದವರು ಗುರು ರಾಮದಾಸ ಸಾಹೀಬ. ಆ ಪ್ರದೇಶದ ಜಮೀನುದಾರರಿಗೆ ಹಣ ನೀಡಿ ಅಥವಾ ದಾನ ರೂಪದಲ್ಲಿ ಹಿಂದಿನ ಗುರು ಸಾಹೀಬರು ಭೂಮಿಯನ್ನು ಅದಾಗಲೇ ಪಡೆದುಕೊಂಡಿದ್ದರು. ಅಲ್ಲೇ ಒಂದು ಪಟ್ಟಣವನ್ನು ರೂಪಿಸುವ ಕಾರ್ಯಕ್ಕೂ ಯೋಜನೆ ರೂಪಿಸಲಾಯಿತು.
WD
ಇದರೊಂದಿಗೆ ಪಟ್ಟಣ ಮತ್ತು ಸರೋವರದ ನಿರ್ಮಾಣ ಕಾರ್ಯವು 1570ರಲ್ಲಿ ಏಕಕಾಲಕ್ಕೆ ಆರಂಭವಾಯಿತು.ಎರಡೂ ಯೋಜನೆಗಳು ಪೂರ್ಣಗೊಂಡದ್ದು ಕ್ರಿ.ಶ. 1577ರಲ್ಲಿ.

ಗುರು ಅರ್ಜನ್ ಸಾಹೀಬರು ಮಂದಿರದ ನಿರ್ಮಾಣಕ್ಕೆ 1588ರಲ್ಲಿ ಲಾಹೋರಿನ ಮುಸ್ಲಿಂ ಸಂತ ಹಜರತ್ ಮಿಯಾ ಮೀರ್ ಜಿ ಮೂಲಕ ಅಡಿಗಲ್ಲು ಹಾಕಿಸಿದರು. ನಿರ್ಮಾಣ ಕಾರ್ಯದ ಮೇಲ್ವಿಚಾರಣೆ ಗುರು ಅರ್ಜನ್ ಸಾಹೀಬರದೇ. ಇದಕ್ಕೆ ಪ್ರಮುಖ ಸಿಖ್ ಮುಂದಾಳುಗಳಾದ ಬಾಬಾ ಬುದ್ಧಜಿ, ಭಾಯಿ ಗುರುದಾಸ್‌ಜಿ, ಭಾಯಿ ಸಾಹ್ಲೋಜಿ ಮತ್ತಿತರರು ಹೆಗಲು ನೀಡಿದರು.

WD
ಇತರ ಹಿಂದೂ ಮಂದಿರಗಳಂತೆ ಈ ಮಂದಿರವು ಎತ್ತರದಲ್ಲಿ ನಿರ್ಮಾಣವಾಗುವುದರ ಬದಲು, ತಗ್ಗಿನಲ್ಲಿ ನಿರ್ಮಿಸಲಾಯಿತು. ಮಾತ್ರವಲ್ಲದೆ, ಬೇರೆ ಮಂದಿರಗಳಲ್ಲಿ ಕೇವಲ ಒಂದೇ ದ್ವಾರವಿರುತ್ತದೆ. ಆದರೆ ಇಲ್ಲಿ ಹಾಗಲ್ಲ, ನಾಲ್ಕೂ ಭಾಗಗಳಲ್ಲಿ ದ್ವಾರಗಳಿವೆ. ಈ ಮೂಲಕ ಹೊಸ ಸಿಖ್ ಪಂಥದ ಸಂಕೇತವನ್ನು ಅವರು ಸೃಷ್ಟಿಸಿದರು. ಯಾವುದೇ ಜಾತಿ, ಮತ, ಲಿಂಗ, ಧರ್ಮ ಭೇದವಿಲ್ಲದೆ ಎಲ್ಲರಿಗೂ ಈ ಮಂದಿರಕ್ಕೆ ಪ್ರವೇಶ ಕಲ್ಪಿಸಲಾಯಿತು.

ಮಂದಿರ ನಿರ್ಮಾಣ ಕಾರ್ಯವು ಕ್ರಿ.ಶ.1601ರಲ್ಲಿ ಪೂರ್ಣಗೊಂಡಿತು. ಗುರು ಅರ್ಜನ್ ಸಾಹೀಬ ಅವರು ಹರ್ಮಿಂದರ್ ಸಾಹೀಬದೊಳಗೆ ಹೊಸದಾಗಿ ರಚಿಸಿದ ಆದಿ ಗ್ರಂಥ ಸಾಹೀಬ (ಈಗ ಗುರು ಗ್ರಂಥ ಸಾಹೀಬ ಎಂದು ಕರೆಯಲಾಗುತ್ತದೆ)ವನ್ನು ಪ್ರತಿಷ್ಠಾಪಿಸಿದರು ಮತ್ತು ಬಾಬಾ ಬುದ್ಧಜೀ ಅವರನ್ನು ಅದರ ಮೊದಲ ಗ್ರಂಥಿ, ಅಂದರೆ ಗುರು ಗ್ರಂಥ ಸಾಹೀಬದ ವಾಚಕ, ಎಂದು ನೇಮಿಸಿದರು. ಈ ವಿಧಿಯ ನಂತರ ಅದು ಅಠ್ ಸಠ್ ತೀರ್ಥ ಎಂಬ ಪ್ರತಿಷ್ಠೆ ಪಡೆಯಿತು. ಇದೀಗ ಸಿಖ್ಖರಿಗೆ ತಮ್ಮದೇ ಆದ ತೀರ್ಥಯಾತ್ರಾ ಸ್ಥಳವೊಂದು ದೊರೆತಂತಾಯಿತು.

ಸರೋವರ ಮಧ್ಯಭಾಗದಲ್ಲಿ 67 ಚದರಡಿ ತಳಪಾಯದಲ್ಲಿ ಶ್ರೀ ಹರಮಂದಿರ ಸಾಹೀಬ ನಿರ್ಮಾಣಗೊಂಡಿದೆ. ಮಂದಿರವೇ 40.5 ಚದರಡಿ ವಿಸ್ತೀರ್ಣ ಹೊಂದಿದೆ. ನಾಲ್ಕೂ ದಿಕ್ಕುಗಳಲ್ಲಿ ತಲಾ ಒಂದೊಂದು ಬಾಗಿಲು ಇದ್ದು, ಬಾಗಿಲುಗಳು ಆಕರ್ಷಕ ಕೆತ್ತನೆಯಿಂದ ಸಾಲಂಕೃತವಾಗಿವೆ. 202 ಅಡಿ ಉದ್ದ ಮತ್ತು 21 ಅಡಿ ಅಗಲದ ಸೇತುವೊಂದು ಈ ನಾಲ್ಕೂ ದ್ವಾರಗಳಿಂದ ಶ್ರೀ ಹರಮಂದಿರ ಸಾಹೀಬದ ಪ್ರಧಾನ ಕಟ್ಟಡವನ್ನು ಸಂಪರ್ಕಿಸುತ್ತದೆ.

WD
ಈ ಸೇತುವು 13 ಅಡಿ ಅಗಲದ ಪ್ರದಕ್ಷಿಣ ಪಥಕ್ಕೆ ಸಂಪರ್ಕಿಸುತ್ತದೆ. ಇದು ಮುಖ್ಯಮಂದಿರದ ಸುತ್ತಲೂ ಆವರಿಸುತ್ತದೆ ಮತ್ತು ಹರ್ ಕೀ ಪೌಡಿ (ದೇವರ ಹೆಜ್ಜೆ)ಯತ್ತ ಕರೆದೊಯ್ಯುತ್ತದೆ. ಹರ್ ಕೀ ಪೌಡಿಯ ಮೊದಲ ಮಹಡಿಯಲ್ಲಿ, ಗುರು ಗ್ರಂಥ ಸಾಹೀಬದ ನಿರಂತರ ಪಾರಾಯಣ ನಡೆಯುತ್ತದೆ.

ಶ್ರೀ ಹರಮಂದಿರ ಸಾಹೀಬದ ಮುಖ್ಯ ಕಟ್ಟಡವು ಕಾರ್ಯತಃ ಮತ್ತು ತಾಂತ್ರಿಕವಾಗಿ ಮೂರು ಮಹಡಿಗಳನ್ನು ಹೊಂದಿದೆ. ಸೇತುವಿನ ಎದುರು ಭಾಗದಲ್ಲಿ ಅರ್ಧಚಂದ್ರಾಕೃತಿಯ ಕಮಾನುಗಳು ಆಕರ್ಷಕವಾಗಿದ್ದರೆ, ಮೊದಲ ಮಹಡಿಯ ಚಾವಣಿಯು 26 ಅಡಿ 9 ಇಂಚು ಎತ್ತರದಲ್ಲಿದೆ.

ಮೊದಲ ಮಹಡಿಯ ತುತ್ತ ತುದಿಯಲ್ಲಿ ನಾಲ್ಕಡಿ ಎತ್ತರದ ದಿಡ್ಡಿಗೋಡೆಯಿದ್ದು, ನಾಲ್ಕೂ ಮೂಲೆಗಳಲ್ಲಿ ಮಿನಾರುಗಳಿವೆ. ಮುಖ್ಯ ಮಂದಿರದ ಮಧ್ಯಭಾಗದಿಂದ ಮೂರನೇ ಮಹಡಿ ಮೇಲೆದ್ದಿದೆ. ಅದು ಪುಟ್ಟ ಚೌಕಾಕಾರದ ಕೊಠಡಿಯಾಗಿದ್ದು, ಮೂರು ಗೇಟುಗಳಿವೆ. ಇಲ್ಲಿ ನಿರಂತರವಾಗಿ ಗುರು ಗ್ರಂಥ ಸಾಹೀಬದ ಪಾರಾಯಣ ನಡೆಯುತ್ತದೆ.

ಇದರ ವಾಸ್ತು ವಿನ್ಯಾಸವು ಮುಸ್ಲಿಂ ಮತ್ತು ಹಿಂದೂಗಳ ಶೈಲಿಗಳ ಮಿಶ್ರರೂಪವಾಗಿದೆ ಮತ್ತು ಜಗತ್ತಿನ ಅತ್ಯುತ್ತಮ ಶೈಲಿ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.

ತಲುಪುವುದು ಹೇಗೆ?: ಅಮೃತಸರವು ದೇಶ ಎಲ್ಲಾ ಭಾಗಗಳಿಂದಲೂ ರಸ್ತೆ, ರೈಲು ಮತ್ತು ವಿಮಾನ ಮಾರ್ಗಗಳ ಮೂಲಕ ಸಂಪರ್ಕಿತವಾಗಿದೆ.