ಮೈಸೂರು ದಸರೆಗೆ ಗೊಂಬೆಗಳದ್ದೇ ಸಂಭ್ರಮ. ಮೈಸೂರಲ್ಲಿ ಮೈ ಮನಗಳ ಸೂರು ಮಾಡುವಂತಹ ಗೊಂಬೆಗಳದ್ದೇ ದರ್ಬಾರು. ದಸರೆಯ ದಿನಗಳಲ್ಲಿ ಮೈಸೂರ ಮನೆಯ ಬಾಗಿಲುಗಳು ಹಸಿರ ತೋರಣದಲಿ ಮಿಂದರೆ ಹಜಾರಗಳು ಚೆಲುವಿನ ಚಿತ್ತಾರದ ಬೊಂಬೆಗಳಿಂದ ಕಂಗೊಳಿಸುತ್ತವೆ. ಅಟ್ಟದ ಮೇಲಿರುವ, ಡಬ್ಬಾಗಳಲ್ಲಿ ಅಡಗಿಕೊಂಡಿರುವ, ಅಂಗಡಿಗಳ ಷೋಕೇಸಿನಲ್ಲಿ ಕೂತ ಬೊಂಬೆಗಳು ದಸರೆಯುತ್ಸವದಲ್ಲಿ ಮೈದಳೆಯುತ್ತವೆ. ಪುಟಿದೆದ್ದ ಚಿನ್ನದಂತೆ ಚಿಣ್ಣರ ಕಣ್ಗಳ ಕನಸಿನ ಕೂಸಾಗಿ ಉಪ್ಪರಿಗೆ ಏರಿ ಮಾಯಾಲೋಕವನ್ನೇ ಸೃಷ್ಟಿ ಮಾಡುತ್ತವೆ.
ಈ ಲೋಕದಲ್ಲಿ ಬೊಂಬೆಗಳಿಗ್ಯಾವ ಭೇದವಿಲ್ಲ. ಕಿನ್ನರ ಲೋಕದ ಗಂಧರ್ವರಂತೆ ಕ್ರಿಕೆಟಿಗರಿಂದ ಹಿಡಿದು ದೇವ, ದಾನವರ ಜೊತೆಗೆ ರಾಷ್ಟ್ರದ ಹಿರಿಯ ಚೇತನಗಳು, ನೇತಾರರೂ ಸಹ ಇಲ್ಲಿ ಕಾಣಸಿಗುತ್ತಾರೆ. ಗೊಂಬೆಗಳಿಗೆ ಅಲಂಕರಿಸುವುದ ನೋಡುವ ಪರಿಯೇ ವಿಶಿಷ್ಟ. ಅವರವರ ಕಲಾತ್ಮಕ ಭಾವನೆಗಳು ಅಲಂಕಾರದ ಸಾಧನಗಳಾಗಿ, ಕನಸಿನ ಪುತ್ಥಳಿಗಳಾಗಿ ನೋಡುಗರ ಕಣ್ಮನ ಸೆಳೆಯುತ್ತವೆ. ಬೊಂಬೆಗಳನ್ನು ಅಲಂಕರಿಸುವ ಪರಿಪಾಠ ವಿಜಯನಗರದರಸರ ಕಾಲದಿಂದಲೂ ಬಂದಿದೆ. ಸನಾತನ ಸಂಪ್ರದಾಯವನ್ನು ಸವಿಯ ಬೇಕೆನ್ನಿಸಿದರೆ ನೀವು ಮೈಸೂರಿಗೆ ಬರಲೇ ಬೇಕು. ಇಲ್ಲಿನ ಬೀದಿ ಬೀದಿಗಳೂ, ಮನೆ ಮನೆಗಳೂ ಬೊಂಬೆಗಳ ಸಾಲಂಕೃತ. ಮೈಸೂರಲ್ಲಿ ನವರಾತ್ರಿ ಹಬ್ಬದಲ್ಲಿ ಸಿಂಗರಿಸಲಿಕ್ಕೆಂದೇ ಗೊಂಬೆಗಳನ್ನು ತಯಾರಿಸುತ್ತಾರೆ. ಪಕ್ಕದ ಪ್ರಾಂತ್ಯಗಳಾದ ಶ್ರೀರಂಗಪಟ್ಟಣ, ಚೆನ್ನಪಟ್ಟಣ, ರಾಮನಗರಂನಿಂದ ತಯಾರಿಸಿ ತಂದ ಸಾವಿರಾರು ಬೊಂಬೆಗಳು ಈ ದಿನಗಳಲ್ಲಿ ಇಲ್ಲಿ ಮಾರಾಟವಾಗುತ್ತವೆ.
ಒಂದು ಮದುಮಗನಂತೆ ಸಿಂಗರಿಸಿಕೊಂಡ ಗಂಡು ಬೊಂಬೆಯ ಬದಿಯಲ್ಲಿ ಮದುಮಗಳಂತೆ ಸಿಂಗರಿಸಿದ ಹೆಣ್ಣಿನ ಬೊಂಬೆಯನ್ನು ಇರಿಸಿ ಪಟ್ಟಕ್ಕೇರಿಸುತ್ತಾರೆ. ಪಟ್ಟಕ್ಕೆ ಕೂತ ಬೊಂಬೆಯ ಸುತ್ತಣ ಕಿನ್ನರ ಲೋಕವೇ ಸೃಷ್ಟಿಯಾಗುತ್ತದೆ. ಬೊಂಬೆಗಳಿಗೆ ಮತ್ತೂ ಮೆರುಗು ಕೊಡುವಂತೆ ಹಸಿರ ಲೋಕ, ಬಣ್ಣದ ಬೆಳಕಿನ ಲೋಕ, ಪುಟಿದೇಳುವ ನೀರ ಕಾರಂಜಿಯ ಲೋಕವೇ ಸೃಷ್ಟಿಯಾಗುತ್ತದೆ. ಮಂಗಳ ಸೂಚಕವಾಗಿ ಪಟ್ಟದ ಬೊಂಬೆಗಳ ಮುಂದೆ ಕಲಶವನ್ನು ಸ್ಥಾಪಿಸಿ ಹೂವು, ಪತ್ರೆಗಳೇರಿಸಿ ದೈವತ್ವದ ಭಾವನೆಯನ್ನು ಕಾಣುತ್ತಾರೆ. ಸಿಂಗರಿಸಿದ ಬೊಂಬೆಗಳಿಗೆ ಬೊಂಬೆ ಬಾಗಿನ ಮಾಡಿ, ಬೊಂಬೆಗಳ ಮುಂದಿರಿಸಿ ಬೊಂಬೆ ನೋಡಲು ಬರುವ ಚಿಣ್ಣರ ಪುಟ್ಟ ಕೈಗಳ ತುಂಬಾ ಬೊಂಬೆ ಬಾಗಿನದ ತಿಂಡಿಗಳನ್ನಿರಿಸಿ ಸಂತೋಷ ಪಡುತ್ತಾರೆ. ಬೊಂಬೆಗಳ ಹಬ್ಬ ಎಂದರೆ ಚಿಣ್ಣರ ಹಬ್ಬ ಎಂದೇ ರೂಢಿ.
ಆಳರಸರ ಕಾಲದಲ್ಲಿ ದಂತ, ಶ್ರೀಗಂಧ, ಹಿತ್ತಾಳೆ, ಬೆಳ್ಳಿ, ಕಂಚಿನ ಬೊಂಬೆಗಳಿದ್ದರೆ ಕಾಲಕ್ರಮೇಣ ಇಂದು ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರೀಸ್, ಪ್ಲಾಸ್ಟಿಕ್, ಪಿಂಗಾಣಿ, ಪೇಪರ್ ಪೇಸ್ಟಿನ ಬೊಂಬೆಗಳು ಕಾಣಬರುತ್ತವೆ. ಅಂದಿನ ಬೊಂಬೆಗಳು ಸಂಸ್ಕೃತಿಯ ಪ್ರತೀಕವಾಗಿದ್ದರೆ ಇಂದಿನ ಬೊಂಬೆಗಳು ಕೇವಲ ಪ್ರದರ್ಶನದ ವಸ್ತುಗಳಾಗಿವೆ.
ಆ ದಿನಗಳಲ್ಲಿ ಬೊಂಬೆಗಳು ಒಂದು ಚರಿತ್ರೆಯನ್ನೇ ಹೇಳುತ್ತಿದ್ದವು ಆದರೆ ಈಗಿನ ದಿನಗಳಲ್ಲಿ ಅದೊಂದು ಸಾಂಪ್ರದಾಯಿಕ ಉತ್ಸವವಾಗಿದ್ದು ವೈವಿಧ್ಯಕ್ಕೆ, ಬಾಹ್ಯಾಡಂಬರಕ್ಕೇ ಹೆಚ್ಚಿನ ಒತ್ತು. ಬೊಂಬೆಗಳೋತ್ಸವದಲ್ಲಿ ವರ್ತಮಾನದ ಕಾಯಕಗಳನ್ನು ಪ್ರತಿಬಿಂಬಿಸುವುದಕ್ಕೇ ಮೊದಲ ಆದ್ಯತೆ. ಮೈಸೂರಲ್ಲಿ ಸುಮಾರು ನಲವತ್ತು, ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಬೊಂಬೆ ಕೂಡಿಸುವ ಪರಿಪಾಠ ಇಟ್ಟುಕೊಂಡಿರುವ ಹತ್ತಾರು ಮನೆಗಳನ್ನು ಹಳೇ ಮೈಸೂರು ಪ್ರಾಂತ್ಯದಲ್ಲಿ ನೋಡಬಹುದು. ಉದಾಹರಣೆಗೆ ಅಗ್ರಹಾರದ ಗಾಯತ್ರಿ ಶಂಕರ್‌ರವರು. ಮಹಾಭಾರತ, ರಾಮಾಯಣ, ಮಹಿಷಾಸುರ ಮರ್ದಿನಿ, ಭಾಗವತ ಹೀಗೆ ಹತ್ತು ಹಲವಾರು ಸನ್ನಿವೇಶಗಳು, ಕಥಾನಕಗಳು ಪಟ್ಟದ ಬೊಂಬೆಗಳ ಜೊತೆ ಕಲೆಯಲ್ಲೇ ಅರಳಿ ಬೊಂಬೆಗಳಾಗಿ ನಿಂತಾಗ ನೋಡುವುದೇ ಆನಂದ.
ಆಧುನಿಕ ಜಂಜಾಟದಲ್ಲಿ ಬೊಂಬೆಗಳು ತಮ್ಮ ಸ್ಥಾನ ಕಳೆದುಕೊಳ್ಳುತ್ತಿವೆ. ಬದಲಾದ ಪರಿಸ್ಥಿತಿಗನುಗುಣವಾಗಿ ಬೊಂಬೆಗಳ ಬೆಲೆಗಳೂ ಗಗನಕ್ಕೇರುತ್ತಿದೆ. ಕೊಳ್ಳುಗರು ಕಡಿಮೆಯಾದಂತೆ ಗೊಂಬೆಗಳ ತಯಾರಕರು ಚಿಂತಾಕ್ರಾಂತರಾಗುತ್ತಿದ್ದಾರೆ. ಮಾಡಿದ ಬೊಂಬೆಗಳ ಮಾರಾಟ ಮಾಡಲು ದಸರೆ ಆಸರೆಯಾದೀತೆ ಎಂದು ಆಗಸದತ್ತ ಕೈ ಚೆಲ್ಲಿ ಕೂತಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ