ಎರಡು ವರ್ಷದ ವಯಸ್ಸಿನ ಬಾಲಕಿಯರಿಗೆ ಕುಮಾರಿ, ಎರಡು ವರ್ಷಕ್ಕಿಂತ ಹೆಚ್ಚು ಮೂರು ವರ್ಷದೊಳಗಿನ ಬಾಲಕಿಯರನ್ನು ತ್ರಿಮೂರ್ತಿ, ಮೂರು ವರ್ಷಕ್ಕಿಂತ ಹೆಚ್ಚು ನಾಲ್ಕು ವರ್ಷದೊಳಗಿನ ಬಾಲಕಿಯರನ್ನು ಕಲ್ಯಾಣಿ, ನಾಲ್ಕು ವರ್ಷಕ್ಕಿಂತ ಹೆಚ್ಚು ಐದು ವರ್ಷದೊಳಗಿನ ಬಾಲಕಿಯರನ್ನು ರೋಹಿಣಿ, ಐದು ವರ್ಷಕ್ಕಿಂತ ಹೆಚ್ಚು ಆರು ವರ್ಷದೊಳಗಿನ ಬಾಲಕಿಯರನ್ನು ಕಾಲಿಕಾ, ಆರು ವರ್ಷಕ್ಕಿಂತ ಹೆಚ್ಚು ಏಳು ವರ್ಷದೊಳಗಿನ ಬಾಲಕಿಯರನ್ನು ಚಂಡಿಕಾ, ಏಳು ವರ್ಷಕ್ಕಿಂತ ಹೆಚ್ಚು ಎಂಟು ವರ್ಷಕ್ಕಿಂತ ಕಡಿಮೆ ಇರುವ ಬಾಲಕಿಯರನ್ನು ಶಾಂಭವಿ, ಎಂಟು ವರ್ಷಕ್ಕಿಂತ ಹೆಚ್ಚು ಒಂಬತ್ತು ವರ್ಷಕ್ಕಿಂತ ಕಡಿಮೆ ಇರುವ ಬಾಲಕಿಯರನ್ನು ದುರ್ಗಾ, ಒಂಬತ್ತು ವರ್ಷಕ್ಕಿಂತ ಹೆಚ್ಚು ಹತ್ತು ವರ್ಷದೊಳಗಿನ ಬಾಲಕಿಯರನ್ನು ಸುಭದ್ರಾ ಎಂದು ಅರ್ಚಿಸಲಾಗುತ್ತದೆ.
ಈ ವಯಸ್ಸಿನ ಬಾಲಕಿಯರನ್ನು ಅಹ್ವಾನಿಸಿ ಪಾದವನ್ನು ತೊಳೆದು ಪವಿತ್ರ ಸ್ಥಾನದಲ್ಲಿ ಕೂಡಿಸಿ, ಕುಮಾರಿಯ ಸಮ್ಮುಖದಲ್ಲಿ ತಮ್ಮ ಬೇಡಿಕೆಗಳನ್ನು ಉಚ್ಚರಿಸಬೇಕು. ತಮ್ಮ ಯೋಗ್ಯತೆಯ ಅನ್ವಯ ವಸ್ತ್ರ, ಅಲಂಕಾರ, ಪುಷ್ಪ, ಮಾಲೆ, ತೈಲ, ಚಂದನ, ಕುಂಕುಮ, ಕಾಡಿಗೆ, ಇವುಗಳನ್ನು ದೇವಿಯ ರೂಪದ ಕುಮಾರಿಗೆ ಅರ್ಪಣೆ ಮಾಡಬೇಕು. ನಂತರ ಕುಮಾರಿಗೆ ಸಂತೋಷದಿಂದ ಮೃಷ್ಟಾನ್ನ ಭೋಜನವನ್ನು ಬಡಿಸಬೇಕು.
ಕುಮಾರಿಯ ಭೋಜನ ಪೂರ್ಣವಾದ ನಂತರ ಕೈ ಬಾಯಿಗಳನ್ನು ತೊಳೆದು, ಕುಮಾರಿಗೆ ಫಲ ಆಹಾರಗಳನ್ನು ನೀಡಿ ಗೌರವಿಸಿ ಮನೆಯ ಮುಂಬಾಗಿಲಿನವರೆಗೆ ಬೀಳ್ಕೊಡಬೇಕಾಗುತ್ತದೆ. ಕುಮಾರಿಯ ಊಟವಾಗುವವರೆಗೂ ಧೂಪ ಅಥವಾ ದೀಪವನ್ನು ಹಚ್ಚಬೇಕು. ಉಟದ ಸಾಮಾನುಗಳನ್ನು ಸ್ವತಃ ತಂದು ಮೃಷ್ಟಾನ್ನವನ್ನು ಬಡಿಸಬೇಕಾಗುತ್ತದೆ. ಕುಮಾರಿಯ ಊಟದ ನಂತರ ಎಂಜಲು ತೆಗೆಯಬೇಕು. ಕುಮಾರಿಯ ಭೋಜನ ಒಂದು ಮಹಾಪೂಜೆಯಾಗಿದೆ.
ಮನದಲ್ಲಿ ಕುಮಾರಿಯ ಪೂಜೆಯ ಮಹತ್ವ ತಿಳಿದವರು ಮಾತ್ರ ಈ ಪೂಜೆಗೆ ಸಿದ್ಧರಾಗಬೇಕು. ಉದ್ವೇಗ, ಕೋಪಗಳನ್ನು ತ್ಯಜಿಸಬೇಕಾಗುವುದು. ಕುಮಾರಿಯ ಪೂಜೆಯಲ್ಲಿ ಪಾದವನ್ನು ಹೇಗೆ ತೊಳೆಯಬೇಕು, ಎಂಜಲು ಪಾತ್ರೆಯನ್ನು ಹೇಗೆ ತೆಗೆಯಬೇಕು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ದೇವಿಯ ಪೂಜೆಯಂದು ತಿಳಿದು ಕುಮಾರಿಯ ಪೂಜೆ ಮಾಡಿದರೆ ದೇವಿಯ ಪೂಜೆ ಪೂರ್ಣವಾಗುತ್ತದೆ.