ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ ರಾಜ ಒಡೆಯರ್ 1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸಿದರು. ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದ್ದಲ್ಲದೆ, ಮೈಸೂರಿನಲ್ಲಿ ದಸರಾ ಆಚರಣೆಯನ್ನು ಮುಂದುವರಿಸಿದರು. ನಂತರದ ಕಾಲಾವಧಿಯಲ್ಲಿ ಇದು ತನ್ನದೇ ಆದ ವೈಭವ ಪಡೆಯುವುದರೊಂದಿಗೆ ವಿಶ್ವವಿಖ್ಯಾತ ಪಡೆದಿದ್ದು ಇತಿಹಾಸ.
ವೈಶಿಷ್ಟ್ಯವಿದು ಆಚರಣೆ
ಮೈಸೂರು ದಸರಾ ಸಂದರ್ಭ ನಡೆಯುವ ಆಚರಣೆಗಳಲ್ಲಿಯೂ ಹತ್ತು ಹಲವು ವೈಶಿಷ್ಟ್ಯಗಳು ಇರುವುದನ್ನು ನಾವು ಕಾಣಬಹುದು. ನವರಾತ್ರಿ ಆರಂಭದ ಒಂಭತ್ತು ದಿನಗಳ ಕಾಲ ಅಂದರೆ ಪಾಡ್ಯದಿಂದ ಬಿದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಹೀಗೆ ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಚಾಮುಂಡಿಬೆಟ್ಟ ಹಾಗೂ ಅಂಬಾವಿಲಾಸ ಅರಮನೆಯಲ್ಲಿ ನಡೆದರೆ, ಆ ನಂತರ ವಿಜಯದಶಮಿಯಂದು ಜಂಬೂ ಸವಾರಿಯೊಂದಿಗೆ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಮುಗಿದು ಬಿಡುತ್ತದೆ.
ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಲಾಗುತ್ತದೆ. ಬಳಿಕ ಪ್ರತಿದಿನವೂ ದಸರಾ ಸಂಗೀತೋತ್ಸವ, ದಸರಾ ನಾಟಕೋತ್ಸವ, ದಸರಾ ಜನಪದೋತ್ಸವ, ದಸರಾ ಕವಿಗೋಷ್ಠಿ, ದಸರಾ ಚಲನಚಿತ್ರೋತ್ಸವ, ದಸರಾ ಫಲಪುಷ್ಪ ಪ್ರದರ್ಶನ, ದಸರಾ ಕುಸ್ತಿ ಪ್ರದರ್ಶನ, ಬೊಂಬೆ ಪ್ರದರ್ಶನ, ದಸರಾ ಆಹಾರ ಮೇಳ, ಯುವದಸರಾ, ಹೀಗೆ ವಿವಿಧ ಕಾರ್ಯಕ್ರಮಗಳು ನಡೆದರೆ, ದಸರಾ ಪ್ರಯುಕ್ತ ಕೆಲವು ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುತ್ತವೆ.