ಸೆನ್ಸೆಕ್ಸ್: ಭರ್ಜರಿ ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ

ಸೋಮವಾರ, 11 ಜುಲೈ 2016 (12:42 IST)
ಏಷ್ಯಾ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 464 ಪಾಯಿಂಟ್‌ಗಳ ಏರಿಕೆ ಕಂಡಿದೆ. 
 
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 74.59 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 464.09 ಪಾಯಿಂಟ್‌ಗಳ ಚೇತರಿಕೆ ಕಂಡು 27,590.99 ಅಂಕಗಳಿಗೆ ತಲುಪಿದೆ.
 
ಬಂಡವಾಳ ವಸ್ತುಗಳು, ಬ್ಯಾಂಕಿಂಗ್, ಉಕ್ಕು ಮತ್ತು ರಿಯಲ್ಟಿ ಕ್ಷೇತ್ರಗಳ ಶೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರಿಸಿದ್ದರಿಂದ ಶೇರುಪೇಟೆಯ ಸೂಚ್ಯಂಕ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 127.30 ಪಾಯಿಂಟ್‌ಗಳ ಏರಿಕೆ ಕಂಡು 8,450.30 ಅಂಕಗಳಿಗೆ ತಲುಪಿದೆ.
 
ಜಪಾನ್‌ನ ನಿಕೈ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.3.55 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಕೂಡಾ ಶೇ.1.78 ರಷ್ಟು ಚೇತರಿಕೆ ಕಂಡಿದೆ.
 
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.1.40 ರಷ್ಟು ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ