ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ 'ಕೌನ್ ಬನೇಗಾ ಕರೋಡ್ಪತಿ' ಕಾರ್ಯಕ್ರಮದ ಕನ್ನಡ ಅವತರಣಿಕೆ 'ಕನ್ನಡದ ಕೋಟ್ಯಧಿಪತಿ' ರಿಯಾಲಿಟಿ ಶೋ ಆ ಪರಿ ಯಶಸ್ಸು ಕಾಣುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಹಾಗೆ ನೋಡಿದರೆ ತಮಿಳು, ತೆಲುಗು ಮತ್ತು ಮಲಯಾಳಂಗಳಲ್ಲಿ ಈ ಕಾರ್ಯಕ್ರಮಗಳು ಅಷ್ಟಾಗಿ ಮಿಂಚಿರಲಿಲ್ಲ.
ಇದನ್ನು ಮುಂಬೈ ಮಂದಿ ಗಂಭೀರವಾಗಿ ಪರಿಗಣಿಸಿದ್ದಾರೆ. ಕನ್ನಡದಲ್ಲಿ ರಿಯಾಲಿಟಿ ಶೋಗಳಿಗೆ ಬೇಡಿಕೆಯಿದೆ. ಹಾಗಾಗಿ ಇನ್ನೊಂದು ರಿಯಾಲಿಟಿ ಶೋವನ್ನು ಪರಿಚಯಿಸಿದರೆ ಹೇಗೆ ಎಂದು ಯೋಚಿಸಿ ಈಗ 'ಬಿಗ್ ಬಾಸ್' ಕನ್ನಡ ಅವತರಣಿಕೆಯನ್ನು ತರಲು ಸ್ಕೆಚ್ ಹಾಕಿದ್ದಾರೆ.
ಸದ್ಯ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಟ್ಟ ಬಿಗ್ ಬಾಸ್ ಕಾರ್ಯಕ್ರಮ ಕನ್ನಡದಲ್ಲಿ 'ಈಟಿವಿ ಕನ್ನಡ' ಚಾನೆಲ್ನಲ್ಲಿ ಪ್ರಸಾರವಾಗಲಿದೆ. ಕರ್ನಾಟಕದ ಸೆಲೆಬ್ರಿಟಿಗಳೇ (ಚಿತ್ರತಾರೆಯರು, ಕ್ರೀಡಾಪಟುಗಳು, ಫ್ಯಾಷನ್ ಲೋಕದವರು, ಜನಪ್ರಿಯರು) ಇರುತ್ತಾರೆ. ಆದರೆ ಯಾರೆಲ್ಲ ಇರುತ್ತಾರೆ, ಕಾರ್ಯಕ್ರಮವನ್ನು ನಡೆಸಿಕೊಡುವವರು ಯಾರು ಅನ್ನೋದು ಬಹಿರಂಗವಾಗಿಲ್ಲ.
ಮಾರ್ಚ್ ಹೊತ್ತಿಗೆ ಕಾರ್ಯಕ್ರಮ ಆರಂಭವಾಗಬಹುದು. ಶೀಘ್ರವೇ ಈ ಸಂಬಂಧ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಲಾಗುತ್ತದೆ. ಕನ್ನಡದ ದೊಡ್ಡ ಸ್ಟಾರ್ ನಟರೊಬ್ಬರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅವರು ಈ ಸಂಬಂಧ ಸಲ್ಮಾನ್ ಖಾನ್ರನ್ನು ಭೇಟಿಯಾಗಿ, ಮಾರ್ಗದರ್ಶನ ಪಡೆಯಲಿದ್ದಾರೆ ಎಂದು ಮೂಲವೊಂದು ಹೇಳಿದೆ.
ಕನ್ನಡದ ಟಾಪ್ ಸ್ಟಾರ್ ಎಂದರೆ ಯಾರು ಅನ್ನೋದು ಗೊತ್ತಾಗಿಲ್ಲ. ಆದರೆ ಅದು ಕಿಚ್ಚ ಸುದೀಪ್ ಅಥವಾ ರಮೇಶ್ ಅರವಿಂದ್ ಆಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಪ್ರೇಕ್ಷಕರಿಗೆ ಮಾತಿನಲ್ಲಿ ಹತ್ತಿರವಾಗಬೇಕಾದ ನಟನ ಅಗತ್ಯ ಇರುವುದರಿಂದ ಸದ್ಯದ ಮಟ್ಟಿಗೆ ಬೇರೆ ಯಾವುದೇ ನಾಯಕರು ಇಂತಹ ಕಾರ್ಯಕ್ರಮ ನಡೆಸಿಕೊಡುವುದು ಕಷ್ಟ.
ಅಂತೂ 'ಬಿಗ್ ಬಾಸ್' ಕನ್ನಡಕ್ಕೆ ಬರುತ್ತಿರುವುದು ಗ್ಯಾರಂಟಿಯಾಗಿದೆ. ಈಗಾಗಲೇ ತಯಾರಿ ಆರಂಭವಾಗಿದೆ. ಬಿಗ್ ಬಾಸ್ ಮನೆಯೊಳಗೆ ಬಂಧಿಯಾಗಲು ಬಯಸುವವರಿಗೆ ಆಹ್ವಾನವೂ ಹೋಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಪಟ್ಟಿ ಸಿದ್ಧವಾದ ನಂತರ ಕಾರ್ಯಕ್ರಮದ ಪೂರ್ತಿ ವಿವರ ಸಿಗಲಿದೆ.