ರಚಿತಾ ರಾಮ್ ವಿರುದ್ಧ ಫಿಲಂ ಚೇಂಬರ್ ಗೆ ದೂರು: ದುಡ್ಡು ಬಂದ್ರೂ ಹೀಗೆ ಮಾಡಿದ್ರಾ ಬುಲ್ ಬುಲ್

Krishnaveni K

ಬುಧವಾರ, 18 ಜೂನ್ 2025 (09:40 IST)
ಬೆಂಗಳೂರು: ಸಂಜು ವೆಡ್ಸ್ ಗೀತಾ 2 ಚಿತ್ರತಂಡ ನಟಿ ರಚಿತಾ ರಾಮ್ ವಿರುದ್ಧ ತಿರುಗಿ ಬಿದ್ದಿದೆ. ಪ್ರಚಾರಕ್ಕೆ ಬಂದಿಲ್ಲ ಎಂದು ನಟಿ ವಿರುದ್ಧ ಫಿಲಂ ಚೇಂಬರ್ ಗೆ ದೂರು ನೀಡಿದ್ದು ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.

ನಟಿ ರಚಿತಾ ರಾಮ್ ಈಗ ಕನ್ನಡದ ಸೂಪರ್ ಸ್ಟಾರ್ ನಾಯಕಿ. ಬುಲ್ ಬುಲ್ ಸಿನಿಮಾದಿಂದ ಇಂದಿನವರೆಗೂ ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿ. ಕನ್ನಡದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕಿ ನಟಿ ಎಂಬ ಖ್ಯಾತಿಯೂ ಅವರದ್ದು.

ಅವರು ನಟಿಸಿರುವ ಸಂಜು ವೆಡ್ಸ್ ಗೀತಾ 2 ಸಿನಿಮಾ ಈ ಮೊದಲೊಮ್ಮೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಅಷ್ಟೊಂದು ದುಡ್ಡು ಮಾಡಿರಲಿಲ್ಲ. ಇದೀಗ ಚಿತ್ರತಂಡ ಮತ್ತೊಮ್ಮೆ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದೆ. ಕಳೆದ ಬಾರಿಯೂ ರಚಿತಾ ಪ್ರಚಾರಕ್ಕೆ ಬಂದಿದ್ದು ಅಷ್ಟಕ್ಕಷ್ಟೇ. ಈಗ ಫೋನ್ ಮಾಡಿ ಕರೆದರೂ ಒಮ್ಮೆಯೂ ಪ್ರಚಾರಕ್ಕೆ ಬಂದಿಲ್ಲ ಎನ್ನುವುದು ಚಿತ್ರತಂಡದ ಕೋಪ.

ಯಾರಿಂದ ಹೇಳಿಸಿದರೂ ರಚಿತಾ ಕ್ಯಾರೇ ಎಂದಿಲ್ಲ ಎನ್ನುವುದು ಚಿತ್ರತಂಡದ ಆರೋಪ. ರಚಿತಾ ರಾಮ್ ಸಂಭಾವನೆ ಪೂರ್ತಿಯಾಗಿ ಕೊಟ್ಟರಷ್ಟೇ ಡಬ್ಬಿಂಗ್ ಮಾಡೋದು. ನಾವು ಎಲ್ಲಾ  ಸಂಭಾವನೆ ಕೊಟ್ಟಾಗಿದೆ. ಆದರೂ ಅವರು ಪ್ರಚಾರಕ್ಕೆ ಬರುತ್ತಿಲ್ಲ. ಎಲ್ಲಾ ಕೊಟ್ಟ ಮೇಲೆಯೂ ಪ್ರಚಾರಕ್ಕೆ ಬರಲ್ಲ ಎಂದರೆ ನಿರ್ಮಾಪಕ ಎಲ್ಲಿಗೆ ಹೋಗಬೇಕು ಎನ್ನುವುದು ನಿರ್ದೇಶಕ ನಾಗಶೇಖರ್ ಆಕ್ರೋಶ. ಇದೇ ಕಾರಣಕ್ಕೆ ಈಗ ಫಿಲಂ ಚೇಂಬರ್ ಗೆ ದೂರು ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ