ನಕಲಿ ಪಾಸ್‌ಪೋರ್ಟ್ ದಂಧೆ: TV9 ಶಿವಪ್ರಸಾದ್ ಬಂಧನ

PR
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ನಂ.1 ಸುದ್ದಿವಾಹಿನಿ ಟಿವಿ9 ಕನ್ನಡದ ಜನಪ್ರಿಯ ನಿರೂಪಕ ಟಿ.ಆರ್.ಶಿವಪ್ರಸಾದ್‌ರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಕಲಿ ಪಾಸ್‌ಪೋರ್ಟ್ ತಯಾರಿಸಿ ಕೊಡುವ ಜಾಲದಲ್ಲಿ ಸಕ್ರಿಯರಾಗಿರುವ ಗುರುತರ ಆರೋಪವನ್ನು ಶಿವಪ್ರಸಾದ್ ಮೇಲೆ ಹೊರಿಸಲಾಗಿದೆ!

ಈ ಪ್ರಕರಣ ಬಯಲಿಗೆ ಬಂದಿರುವುದು ಸ್ವತಃ ಟಿವಿ9 ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ. ಸ್ಟಿಂಗ್ ಆಪರೇಷನ್ ಹಿನ್ನೆಲೆಯಲ್ಲಿ ಟಿವಿ9 ವರದಿಗಾರರಿಗೆ ಬರುತ್ತಿದ್ದ ಕೊಲೆ ಬೆದರಿಕೆ ಜಾಡು ಹಿಡಿದ ಪೊಲೀಸರಿಗೆ ಅದೇ ವಾಹಿನಿಯ ಶಿವಪ್ರಸಾದ್ ವಿರೋಧಿ ತಂಡದಲ್ಲಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಪ್ರಸಾದ್ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಕಾರ್ಯಾಚರಣೆ ಹೀಗಿತ್ತು:
ಲಕ್ಷಗಟ್ಟಲೆ ಹಣ ಕೊಟ್ಟರೆ ನಕಲಿ ಪಾಸ್‌ಪೋರ್ಟ್ ತಯಾರಿಸಿ ಕೊಡಲಾಗುತ್ತದೆ ಎಂಬ ಮಾಹಿತಿ ಪಡೆದಿದ್ದ ಟಿವಿ9ನ ವರದಿಗಾರ ಶಂಕರ್ ಮತ್ತು ಇನ್ನೊಬ್ಬ ವರದಿಗಾರ ಕೆಲವು ತಿಂಗಳುಗಳ ಹಿಂದೆಯೇ ರಹಸ್ಯ ಕಾರ್ಯಾಚರಣೆ ನಡೆಸಿ, ನಕಲಿ ದಂಧೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಆದರೆ ಆ ವರದಿ ಪ್ರಸಾರ ಆಗುವ ಮೊದಲೇ ಅಪರಿಚಿತರಿಂದ ವರದಿಗಾರರಿಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿದವು. ವರದಿಯನ್ನು ಪ್ರಸಾರ ಮಾಡಿದರೆ ಸುಮ್ಮನಿರುವುದಿಲ್ಲ ಎಂಬ ಬೆದರಿಕೆ ಬಂತು.

ಇದರಿಂದ ಗಾಬರಿಗೊಂಡ ವರದಿಗಾರರು ಎಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದರು. ಅಲ್ಲಿಂದ ಪ್ರಕರಣ ಸಿಸಿಬಿಗೆ ವರ್ಗಾವಣೆಗೊಂಡಿತ್ತು. ವರದಿಗಾರರಿಗೆ ಬಂದ ಬೆದರಿಕೆ ಕರೆಗಳ ದಾಖಲೆ ಪರಿಶೀಲಿಸಿದಾಗ, ಶಿವಪ್ರಸಾದ್ ಮೊಬೈಲ್‌ನಿಂದ ಕರೆ ಹೋಗಿರುವುದು ಪತ್ತೆಯಾಯಿತು. ರಹಸ್ಯ ಕಾರ್ಯಾಚರಣೆ ಕುರಿತ ವರದಿ ಪ್ರಸಾರವಾಗುವ ಮೊದಲೇ ಈ ಕುರಿತು ದಂಧೆಯ ಮಂದಿಗೆ ಮಾಹಿತಿ ನೀಡಿದ್ದು ಶಿವಪ್ರಸಾದ್ ಎನ್ನುವುದು ಪೊಲೀಸರ ಆರೋಪ.

ಶಿವಪ್ರಸಾದ್ ಜತೆಗೆ ಟಿವಿ9 ಕನ್ನಡದ ಇನ್ನೊಬ್ಬ ಹಿರಿಯ ವರದಿಗಾರನೂ ನಕಲಿ ಪಾಸ್‌ಪೋರ್ಟ್ ತಯಾರಕರಿಗೆ ಬೆಂಬಲ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಈ ಇಬ್ಬರು ಪತ್ರಕರ್ತರು ಮತ್ತು ನಕಲಿ ಪಾಸ್‌ಪೋರ್ಟ್ ಜಾಲದ ಆರೋಪಿಗಳನ್ನು ಬಂಧಿಸಲಾಗಿದೆ.

ನಕಲಿ ಪಾಸ್‌ಪೋರ್ಟ್ ಜಾಲದಲ್ಲಿ ಪ್ರಮುಖರು ಭಾಗಿಯಾಗಿರುವ ಕಾರಣ, ಪ್ರಕರಣ ಸೂಕ್ಷ್ಮವೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ. ಅಲ್ಲದೆ, ಶಿವಪ್ರಸಾದ್ ಮತ್ತು ಇನ್ನೊಬ್ಬ ಪತ್ರಕರ್ತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ನಡೆಸುತ್ತಿದ್ದೇವೆ. ಇನ್ನೂ ಬಂಧಿಸಿಲ್ಲ. ಜಾಲದ ಪ್ರಮುಖ ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ