'ಪಂಚರಂಗಿ ಪೋಂ ಪೋಂ'ನಲ್ಲಿ ದೇವರಿಗೆ ಅವಮಾನ?

PR
ಭೂಲೋಕಕ್ಕೆ ಬರುವ ಇಂದ್ರ, ಆತನ ಜತೆ ರಂಭೆ, ಊರ್ವಶಿ, ಮೇನಕೆ. ಎಲ್ಲರದ್ದೂ ಡಬ್ಬಲ್ ಮೀನಿಂಗ್ ಅಶ್ಲೀಲ ಸಂಭಾಷಣೆ. ತ್ರಿಲೋಕ ಸುಂದರಿಯರಿಗೆ ಜೀನ್ಸ್ ಪ್ಯಾಂಟು, ಟೀ-ಶರ್ಟು. ಮಾನವರೊಂದಿಗೆ ಡೇಟಿಂಗು -- ಇದು ಸುವರ್ಣ ಮನರಂಜನಾ ವಾಹಿನಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಪ್ರಸಾರವಾದ 'ಪಂಚರಂಗಿ ಪೋಂ ಪೋಂ' ಧಾರಾವಾಹಿಯ ಒಂದು ಕಂತು.

ಕಮಂಗಿಯಂತಿರೋ ಮೀನನಾಥ ಎಂಬ ಪಾತ್ರಧಾರಿಗೆ ಕನಸು ಕಾಣುತ್ತಲೇ ಈ ಪ್ರಸಂಗ ಶುರುವಾಗುತ್ತದೆ. ಇಂದ್ರ ತನ್ನ ಆಸ್ಥಾನದ ಮೂವರು ನರ್ತಕಿಯರಾದ ರಂಭೆ, ಊರ್ವಶಿ, ಮೇನಕೆಯೊಂದಿಗೆ ಭೂಮಿಗೆ ಬರುತ್ತಾನೆ. ಆ ಮೂವರ ಜತೆ ಚಕ್ಕಂದ ಶುರು ಹಚ್ಚಿಕೊಳ್ಳುವವನೇ ಮೀನನಾಥ.

ನಂತರ ಅದೇ ರಂಭೆ, ಊರ್ವಶಿ, ಮೇನಕೆಯರು ತುಂಡು ಬಟ್ಟೆ ತೊಡುತ್ತಾರೆ, ಜೀನ್ಸ್ ಪ್ಯಾಂಟು, ಟೀ ಶರ್ಟುಧಾರಿಗಳಾಗುತ್ತಾರೆ. ಮೀನನಾಥನ ಜತೆ ಡುಯೆಟ್ ಹಾಡುತ್ತಾರೆ.

ಇಂದ್ರನ ಜತೆಗಿನ ರಂಭೆ, ಊರ್ವಶಿ, ಮೇನಕೆಯರ ಸಂಬಂಧವನ್ನು ಲಿವಿಂಗ್ ಟುಗೆದರ್‌ಗೆ ಹೋಲಿಸಲಾಗುತ್ತದೆ. ಅಲ್ಲಲ್ಲಿ ಅಶ್ಲೀಲ ಸಂಭಾಷಣೆ, ಮೂವರನ್ನೂ ಒಬ್ಬನೇ ಮದುವೆಯಾಗಬೇಕೆಂದು ಒತ್ತಾಯಿಸುವ ತ್ರಿಲೋಕ ಸುಂದರಿಯರು. ಹೀಗೆ ಸಾಕಷ್ಟು ಅಧ್ವಾನಗಳೊಂದಿಗೆ ಸಾಗುತ್ತದೆ ಈ ಹಾಸ್ಯ ಧಾರಾವಾಹಿ. ಇದು ಕಳೆದ ಶುಕ್ರವಾರ (ಆಗಸ್ಟ್ 10) ಪ್ರಸಾರವಾಗಿತ್ತು.

ಎಲ್ಲಿ ಹೋದರು ಸ್ವಾಮೀಜಿಗಳು?
ಇತ್ತೀಚೆಗಷ್ಟೇ 'ಕಠಾರಿ ವೀರ ಸುರಸುಂದರಾಂಗಿ' ಬಿಡುಗಡೆಯಾದಾಗ ಭಾರೀ ಪ್ರತಿಭಟನೆ ನಡೆಸಿದ್ದವರು, ಹಿಂದೂ ದೇವಾನುದೇವತೆಗಳನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದವರು, ಇನ್ನೆಂದೂ ಇಂತಹ ಪ್ರಸಂಗ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿಕೊಂಡಿದ್ದವರಿಂದ ಇದಕ್ಕೆ ಯಾವುದೇ ವಿರೋಧ ವ್ಯಕ್ತವಾದಂತಿಲ್ಲ.

ಇದುವರೆಗೆ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಹಿಂದೂ ದೇವತೆಗಳನ್ನು ಹಾಸ್ಯದ ಹೆಸರಿನಲ್ಲಿ ಅಪಹಾಸ್ಯ ಮಾಡಲಾಗುತ್ತಿತ್ತು. ಆದರೆ ಇನ್ನು ನಾವು ಬಿಡುವುದಿಲ್ಲ. ಯಾವುದೇ ರೀತಿಯಲ್ಲಿ ಅಪಚಾರವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಆಗ ಪ್ರತಿಭಟನಾಕಾರರು ಹೇಳಿಕೊಂಡಿದ್ದರು.

ಅವರಿಗೆ 'ಪಂಚರಂಗಿ ಪೋಂ ಪೋಂ' ಧಾರಾವಾಹಿಯ ಈ ಕಂತು ಕಣ್ಣಿಗೆ ಬಿದ್ದಿಲ್ಲವೋ?

ವೆಬ್ದುನಿಯಾವನ್ನು ಓದಿ