ಪುನೀತ್ ರಾಜ್‌ಕುಮಾರ್ 'ಕನ್ನಡದ ಕೋಟ್ಯಧಿಪತಿ' ಇನ್ನಿಲ್ಲ

PR
ಹೆಚ್ಚು ಕಡಿಮೆ ಐದು ತಿಂಗಳ ಕಾಲ, ವಾರದಲ್ಲಿ ನಾಲ್ಕು ದಿನ ಆರು ಕೋಟಿ ಕನ್ನಡಿಗರನ್ನು ಒಂದೂವರೆ ಗಂಟೆ ಆಚೀಚೆ ನೋಡದಂತೆ ಮಾಡುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿದ್ದ 'ಕನ್ನಡದ ಕೋಟ್ಯಧಿಪತಿ' ಇದೇ ವಾರ ಮುಗಿಯುತ್ತಿದೆ.

ನಿರೀಕ್ಷೆಗೂ ಮೀರಿ ಯಶಸ್ಸು ಕಂಡ 'ಕನ್ನಡದ ಕೋಟ್ಯಧಿಪತಿ' ಗೇಮ್ ಶೋ ಮೊದಲ ಸೀಸನ್ ಅಷ್ಟೇ ಮುಕ್ತಾಯ ಕಾಣುತ್ತಿದೆ. ಒಂದಷ್ಟು ಸಮಯದ ನಂತರ ಮತ್ತೆ ಎರಡನೇ ಸೀಸನ್ ಆರಂಭವಾಗುವ ನಿರೀಕ್ಷೆಗಳಿವೆ. ಅಂತೂ ಈ ಕಾರ್ಯಕ್ರಮದ ಗೀಳು ಹತ್ತಿಸಿಕೊಂಡವರಿಗೆ ಇನ್ನು ಪುನೀತ್ ಖಂಡಿತಾ ಮಿಸ್. ಹಾಗಾಗಿ ಉಳಿದಿರುವ ಕಂತುಗಳನ್ನು ಮಿಸ್ ಮಾಡ್ಕೋಬೇಡಿ.

ಕೋಟ್ಯಧಿಪತಿಯ ಮುಖ್ಯಾಂಶಗಳು:
* ಪ್ರಸಾರವಾದ ಚಾನೆಲ್ - ಸುವರ್ಣ
* ನಿರೂಪಕ - ಪುನೀತ್ ರಾಜ್‌ಕುಮಾರ್
* ಸಂಭಾಷಣೆಕಾರ - ಗುರುಪ್ರಸಾದ್
* ಆರಂಭ - ಮಾರ್ಚ್ 12, 2012
* ಮುಕ್ತಾಯ - ಜುಲೈ 26, 2012
* ಪ್ರಸಾರದ ಅವಧಿ - 90 ನಿಮಿಷ
* ಒಟ್ಟು ಕಂತುಗಳು - 80
* ಗರಿಷ್ಠ ಮೊತ್ತ ಗೆದ್ದವರು - ಪಂಪಣ್ಣ ಮಾಸ್ತರ್, 50 ಲಕ್ಷ
* ಭಾಗವಹಿಸಿದ ಸೆಲೆಬ್ರಿಟಿಗಳು - ರಮ್ಯಾ, ಲಕ್ಷ್ಮಿ, ರವಿಚಂದ್ರನ್, ಅನಿಲ್ ಕುಂಬ್ಳೆ

ಕೊನೆಯ ದಿನಗಳ ವಿಶೇಷ...
ಕನ್ನಡದ ಕೋಟ್ಯಧಿಪತಿಯಲ್ಲಿ ತನ್ನದೇ ಆದ ಶೈಲಿಯಿಂದ ವೀಕ್ಷಕರ ಮನ ಗೆದ್ದ ಪುನೀತ್, ಕೊನೆಯ ಎರಡು ಸಂಚಿಕೆಗಳಲ್ಲಿ ಅಂದರೆ ಜುಲೈ 25 ಮತ್ತು 26ರಂದು ಪ್ರಸಾರವಾಗುವ ಕಂತುಗಳಲ್ಲಿ ವಿಶೇಷವಾಗಿ ಗಮನ ಸೆಳೆಯಲಿದ್ದಾರೆ. ಅದರಲ್ಲೂ, ಇದುವರೆಗೆ ಹಾಟ್ ಸೀಟ್‌ಗೆ ಬಂದ ಎಲ್ಲಾ ಸ್ಪರ್ಧಿಗಳನ್ನೂ ಈ ಎರಡು ಎಪಿಸೋಡ್‌ಗಳಲ್ಲಿ ಗ್ಯಾಲರಿಯಲ್ಲಿ ಕಾಣಬಹುದಾಗಿದೆ. ಅವರೊಂದಿಗೆ ಪುನೀತ್ ತನ್ನ ಅನುಭವಗಳನ್ನು ಮೆಲುಕು ಹಾಕುತ್ತಾ, ಮುಕ್ತಾಯವನ್ನು ಸ್ಮರಣಾರ್ಹವನ್ನಾಗಿಸಲಿದ್ದಾರೆ.

ಗರಿಷ್ಠ ದಾಖಲೆ 50 ಲಕ್ಷ ರೂ...
ಕನ್ನಡದ ಕೋಟ್ಯಧಿಪತಿಯಲ್ಲಿ ಕೋಟಿ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಕೊನೆಗೂ ಹುಸಿಯಾಗಿದೆ. ಇದುವರೆಗೂ ಯಾರೊಬ್ಬರೂ ಕೋಟಿ ರೂಪಾಯಿ ಗೆದ್ದಿಲ್ಲ. ಗರಿಷ್ಠ ಮೊತ್ತವನ್ನು ಜೇಬಿಗಿಳಿಸಿಕೊಂಡಿರುವುದು ರಾಯಚೂರಿನ ಪಂಪಣ್ಣ ಮಾಸ್ತರ್. ಜೂನ್ 28ರಂದು ಪ್ರಸಾರವಾದ ಸಂಚಿಕೆಯಲ್ಲಿ ಅವರು 50 ಲಕ್ಷ ರೂಪಾಯಿಗಳನ್ನು ಗೆದ್ದಿದ್ದರು.

ಕಡು ಬಡತನದಿಂದ ಬಂದಿದ್ದ ಪಂಪಣ್ಣ, ಕೊನೆಯ ಪ್ರಶ್ನೆಗೆ ಉತ್ತರಿಸುತ್ತಿದ್ದರೆ ಕೋಟ್ಯಧಿಪತಿಯಾಗುತ್ತಿದ್ದರು. ಆದರೆ ಗೊಂದಲಕ್ಕೆ ಬಿದ್ದು ಕೋಟಿ ಮಿಸ್ ಮಾಡಿಕೊಂಡಿದ್ದರು. ಈಗ ಕೋಟ್ಯಧಿಪತಿ ಮುಕ್ತಾಯದ ಹಂತಕ್ಕೆ ಬಂದಿದೆ. ಹಾಗಾಗಿ ಗರಿಷ್ಠ ಮೊತ್ತ ಸಂಪಾದಿಸಿದ ಗೌರವ ಪಂಪಣ್ಣನ ಹೆಸರಿನಲ್ಲೇ ಉಳಿದುಕೊಂಡಿದೆ.

ಆ ಜಾಗಕ್ಕೆ ಮೂರು ಸೀರಿಯಲ್‌ಗಳು...
ಕನ್ನಡದ ಕೋಟ್ಯಧಿಪತಿಯ 90 ನಿಮಿಷಗಳಲ್ಲಿ ಸುವರ್ಣ ಚಾನೆಲ್ ಕೋಟ್ಯಂತರ ವೀಕ್ಷಕರನ್ನು ಪಡೆದುಕೊಂಡಿದೆ. ಗೇಮ್ ಶೋ ಮುಗಿದರೂ ವೀಕ್ಷಕರನ್ನು ತನ್ನಲ್ಲೇ ಇಟ್ಟುಕೊಳ್ಳುವತ್ತ ಗಂಭೀರವಾಗಿ ಹೆಜ್ಜೆ ಇಟ್ಟಿರುವ ಚಾನೆಲ್, ಆ ಜಾಗಕ್ಕೀಗ ಮೂರು ಧಾರಾವಾಹಿಗಳನ್ನು ಪರಿಚಯಿಸುತ್ತಿದೆ.

* ರಾತ್ರಿ 8.00ಕ್ಕೆ: ಆಕಾಶದೀಪ
* ರಾತ್ರಿ 8.30ಕ್ಕೆ: ಕೆಳದಿ ಚೆನ್ನಮ್ಮ
* ರಾತ್ರಿ 9.00ಕ್ಕೆ: ಭಾಗ್ಯವಂತರು

ಸ್ಟಾರ್ ಪ್ಲಸ್‌ನ 'ದಿಯಾ ಔರ್ ಬತಿ ಹೂಂ'ನಿಂದ ಸ್ಫೂರ್ತಿ ಪಡೆದಿರುವ ಧಾರಾವಾಹಿ 'ಆಕಾಶದೀಪ'ವನ್ನು ನಿರ್ದೇಶಿಸುತ್ತಿರುವುದು ಸಕ್ಕರೆಬೈಲು ಶ್ರೀನಿವಾಸ್. ಇಲ್ಲಿ ಆಕಾಶ್ ಪಾತ್ರವನ್ನು ಗುರು ರಾಘವೇಂದ್ರ ಸ್ವಾಮಿ ಖ್ಯಾತಿಯ ಪರೀಕ್ಷಿತ್ ಮಾಡುತ್ತಿದ್ದಾರೆ.

ಇನ್ನು 'ಕೆಳದಿ ಚೆನ್ನಮ್ಮ' ಐತಿಹಾಸಿಕ ಧಾರಾವಾಹಿ ನಿರ್ದೇಶಿಸುತ್ತಿರುವುದು ಜನಪ್ರಿಯ ನಿರ್ದೇಶಕ ನಾಗಾಭರಣ. ತುಂಬಾ ರಿಸ್ಕ್ ತೆಗೆದುಕೊಂಡು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗಿರುವ ಈ ಧಾರಾವಾಹಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ನಿರೀಕ್ಷೆ ನಿರ್ದೇಶಕರದ್ದು.

ರಾತ್ರಿ 9 ಗಂಟೆಗೆ ಪ್ರಸಾರವಾಗುವ 'ಭಾಗ್ಯವಂತರು' ವಿಶೇಷ ಭಾರತಿ ವಿಷ್ಣುವರ್ಧನ್. ಮೊದಲ ಬಾರಿಗೆ ಅವರು ಕಿರುತೆರೆ ಪ್ರವೇಶಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಪತ್ನಿಯಾಗಿಯೇ ಧಾರಾವಾಹಿಯಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುದು ಇನ್ನೊಂದು ವಿಶೇಷ.

ವೆಬ್ದುನಿಯಾವನ್ನು ಓದಿ