ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಅಂತಿಮ ಹಂತಕ್ಕೆ ಬಂದಿದ್ದು, ಈ ಬಾರಿ ವಿಜೇತರು ಯಾರು ಎಂದು ಟಿವಿಗೆ ಮೊದಲೇ ಬಹಿರಂಗವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಸಾಮಾನ್ಯವಾಗಿ ಕಿಚ್ಚ ಸುದೀಪ್ ನಡೆಸಿಕೊಡುವ ಫೈನಲ್ ಸಮಾರಂಭಕ್ಕೆ ಸಾರ್ವಜನಿಕರೂ ಬರುತ್ತಾರೆ. ಆದರೆ ಈ ಬಾರಿ ಪ್ರೇಕ್ಷಕರಾಗಿ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಅವರೇ ಆಯ್ಕೆ ಮಾಡಿದ ಕೆಲವು ಪ್ರೇಕ್ಷಕರು ಮತ್ತು ಸ್ಪರ್ಧಿಗಳ ಕುಟುಂಬದವರು ಮಾತ್ರ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.
ಪ್ರತೀ ಬಾರಿ ಬಿಗ್ ಬಾಸ್ ಫೈನಲ್ ನಲ್ಲಿ ಭಾನುವಾರ ಟಿವಿಯಲ್ಲಿ ಫಲಿತಾಂಶ ಘೋಷಿಸಲಾಗುತ್ತದೆ. ಆದರೆ ಮೊದಲೇ ಶೂಟಿಂಗ್ ನಡೆಯುವುದರಿಂದ ಅದಕ್ಕೆ ಮೊದಲೇ ಅಲ್ಲಿ ಭಾಗಿಯಾಗಿದ್ದ ಪ್ರೇಕ್ಷಕರು ವಿಜೇತರು ಯಾರು ಎಂಬ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಹರಿಯಬಿಡುತ್ತಾರೆ.
ಇದರಿಂದಾಗಿ ಟಿವಿಯಲ್ಲಿ ವಿಜೇತರು ಯಾರು ಎಂದು ನೋಡುವ ಕುತೂಹಲವಿರುವುದಿಲ್ಲ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಫೇವರಿಟ್ ಸ್ಪರ್ಧಿಗಳ ಪರ ವೀಕ್ಷಕರು ಕಿತ್ತಾಡುವ ಪರಿಸ್ಥಿತಿಯಿರುತ್ತದೆ. ಈವತ್ತು ಮತ್ತು ನಾಳೆ ಬಿಗ್ ಬಾಸ್ ಫೈನಲ್ ಎಪಿಸೋಡ್ ಶೂಟಿಂಗ್ ನಡೆಯಲಿದೆ.
ಮನೆಯಲ್ಲಿ ಈಗ ಡ್ರೋಣ್ ಪ್ರತಾಪ್, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಮತ್ತು ವಿನಯ್ ಗೌಡ ಬಾಕಿ ಉಳಿದಿದ್ದಾರೆ. ಈ ಪೈಕಿ ಇಬ್ಬರು ಇಂದು ಎಲಿಮಿನೇಟ್ ಆಗಲಿದ್ದಾರೆ. ಅಂತಿಮವಾಗಿ ಬಿಗ್ ಬಾಸ್ ಗೆಲ್ಲುವವರು ಯಾರು ಎಂದು ನಾಳೆ ಗೊತ್ತಾಗಲಿದೆ. ಹೀಗಾಗಿ ಇದಕ್ಕೆ ಮೊದಲೇ ವಿನ್ನರ್ ಹೆಸರು ಬಹಿರಂಗವಾಗದಂತೆ ಕಲರ್ಸ್ ವಾಹಿನಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.