ಸದ್ದಿಲ್ಲದೇ ಕನ್ನಡ ಕಿರುತೆರೆಯನ್ನು ಆವರಿಸಿದೆ ಡಬ್ಬಿಂಗ್ ಸಿನಿಮಾಗಳು

ಗುರುವಾರ, 14 ಮೇ 2020 (09:10 IST)
ಬೆಂಗಳೂರು: ಹಿಂದೊಮ್ಮೆ ರಾಜ್ಯದಲ್ಲಿ ಬೇರೆ ಭಾಷೆಯ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ಥಿಯೇಟರ್ ನಲ್ಲಿ ಪ್ರದರ್ಶಿಸುವುದಕ್ಕೆ ಭಾರೀ ಪ್ರತಿಭಟನೆಗಳು ನಡೆದಿದ್ದವು. ಇಡೀ ಸ್ಯಾಂಡಲ್ ವುಡ್ ಈ ಡಬ್ಬಿಂಗ್ ಭೂತದ ವಿರುದ್ಧ ಸಿಡಿದೆದ್ದಿದ್ದವು.


ಆದರೆ ಈಗ ಕಾಲ ಬದಲಾಗಿದೆ. ಈಗ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಕಾನ್ಸೆಪ್ಟ್ ಬಂದ ಮೇಲೆ ಡಬ್ಬಿಂಗ್ ಸಿನಿಮಾ ಬಗ್ಗೆ ಅಂದು ವಿರೋಧಿಸಿದ್ದವರೇ ಇಂದು ಮೆತ್ತಗಾಗಿದ್ದಾರೆ. ಬೇರೆ ಭಾಷೆಯ ಸಿನಿಮಾಗಳು ಕನ್ನಡದಲ್ಲಿ, ಕನ್ನಡ ಸಿನಿಮಾಗಳು ಬೇರೆ ಭಾಷೆಯಲ್ಲಿ ಬಿಡುಗಡೆಯಾಗುವುದು ಸಾಮಾನ್ಯವಾಗಿದೆ.

ಆದರೆ ಈಗ ಲಾಕ್ ಡೌನ್ ಬಂದ ಬಳಿಕ ಡಬ್ಬಿಂಗ್ ಸಿನಿಮಾಗಳು ಕನ್ನಡ ಕಿರುತೆರೆಯಲ್ಲಿ ಹವಾ ಎಬ್ಬಿಸಿದೆ. ಟಿಆರ್ ಪಿಯಲ್ಲಿ ತೀರಾ ಹಿಂದಿದ್ದ ಉದಯ ವಾಹಿನಿ ಈಗ ನಂ.1 ಸ್ಥಾನಕ್ಕೆ ಮರಳಿ ಬರಲು ಕಾರಣವಾಗಿದ್ದೇ ಈ ಡಬ್ಬಿಂಗ್ ಸಿನಿಮಾಗಳು. ತಮಿಳು, ತೆಲುಗು ಭಾಷೆಯ ಸೂಪರ್ ಹಿಟ್ ಸಿನಿಮಾಗಳು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಬೇರೆ ವಾಹಿನಿಗಳೂ ಇದರಲ್ಲಿ ಹಿಂದೆ ಬಿದ್ದಿಲ್ಲ. ನಿಧಾನವಾಗಿ ಡಬ್ಬಿಂಗ್ ಸಿನಿಮಾಗಳು ಈಗ ಹಿರಿತೆರೆಯಲ್ಲಿ ಮಾಡಲಾಗದೇ ಇದ್ದಿದ್ದನ್ನು ಕಿರುತೆರೆಯಲ್ಲಿ ಮಾಡುತ್ತಿದೆ.

ಲಾಕ್ ಡೌನ್ ಮುಗಿದ ಬಳಿಕ ಈ ಪರಿಸ್ಥಿತಿ ಕೊಂಚ ಬದಲಾಗಬಹುದು. ಆದರೆ ಸದ್ಯಕ್ಕಂತೂ ಕನ್ನಡ ಕಿರುತೆರೆಯನ್ನು ಡಬ್ಬಿಂಗ್ ಸಿನಿಮಾಗಳೇ ಆವರಿಸಿದೆ ಎಂದರೂ ತಪ್ಪಾಗಲಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ