ಮೊದಲ ದಿನವೇ 4 ಒಲಿಂಪಿಕ್ ದಾಖಲೆ ಪತನ

ಶುಕ್ರವಾರ, 23 ಜುಲೈ 2021 (11:13 IST)
ಟೋಕಿಯೋ (ಜುಲೈ 23): ಜಪಾನ್ ರಾಜಧಾನಿಯಲ್ಲಿ 2020ರ ಒಲಿಂಪಿಕ್ಸ್ ಭರ್ಜರಿಯಾಗಿ ಆರಂಭಗೊಂಡಿದೆ. ಮೊನ್ನೆಯೇ ಕೆಲ ಕ್ರೀಡೆಗಳ ಆಟ ಆರಂಭವಾದರೂ ಇಂದಿನಿಂದ ಒಲಿಂಪಿಕ್ಸ್ ಅಧಿಕೃತವಾಗಿ ಚಾಲನೆಗೊಂಡಿದೆ.


ಮೊದಲ ದಿನವಾದ ಇಂದು ಬಿಲ್ಲುಗಾರಿಕೆ (ಆರ್ಚರಿ), ಈಕ್ವೆಸ್ಟ್ರಿಯನ್, ರೋವಿಂಗ್ (ದೋಣಿ ಸ್ಪರ್ಧೆ) ಮತ್ತು ಶೂಟಿಂಗ್ ಸ್ಪರ್ಧೆಗಳು ನಡೆಯುತ್ತಿವೆ. ಈ ನಾಲ್ಕೂ ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸಿದ್ದಾರೆ. ಹೀಗಾಗಿ, ಮೊದಲ ದಿನದ ಆಟಗಳತ್ತ ಭಾರತೀಯರ ಚಿತ್ತ ನೆಟ್ಟಿದೆ.
ಇಂದು ನಡೆದ ಮಹಿಳಾ ವೈಯಕ್ತಿಕ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ದೀಪಿಕಾ ಕುಮಾರಿಗೆ ಮಿಶ್ರಫಲ ಸಿಕ್ಕಿತು. 64 ಮಂದಿ ಇದ್ದ ಸ್ಪರ್ಧಾಕಣದಲ್ಲಿ ಅಗ್ರಶ್ರೇಯಾಂಕದ ದೀಪಿಕಾ ಕುಮಾರಿ ಹಲವು ಏರಿಳಿತಗಳನ್ನ ಕಂಡು ಅಂತಿಮವಾಗಿ 9ನೇ ಸ್ಥಾನ ಕಂಡುಕೊಂಡರು. ಇದು ರ್ಯಾಂಕಿಂಗ್ ಸುತ್ತು ಮಾತ್ರ ಆಗಿದೆ. ಮುಂದೆ ನಾಕೌಟ್ ಹಂತಗಳಿವೆ. ಮೊದಲ ಸ್ಥಾನ ಪಡೆದವರು ಈ ಸುತ್ತಿನಲ್ಲಿ 64ನೇ ಸ್ಥಾನ ಗಳಿಸಿದವರನ್ನ ಎದುರಿಸುತ್ತಾರೆ. ಅದರಂತೆ 9ನೇ ಸ್ಥಾನ ಗಳಿಸಿದ ದೀಪಿಕಾ ಕುಮಾರಿ ಅವರು ಈ ಹಂತದಲ್ಲಿ ಭೂತಾನ್ ದೇಶದ ಆಟಗಾರ್ತಿ ಕರ್ಮಾ ಅವರನ್ನ ಎದುರಿಸಲಿದ್ದಾರೆ. ಈ ನಾಕೌಟ್ ಹಂತಗಳು ನಾಳೆ ನಡೆಯಲಿವೆ. ಇವತ್ತು ಪುರುಷರ ವೈಯಕ್ತಿಕ ವಿಭಾಗದ ಆರ್ಚರಿ ಸ್ಪರ್ಧೆಗಳೂ ನಡೆಯಲಿವೆ. ಭಾರತದ ಅತಾನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರಾಯ್ ಅವರಿದ್ದಾರೆ.
ಇಂದು ನಡೆದ ಮಹಿಳಾ ವೈಯಕ್ತಿಕ ವಿಭಾಗದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ನಾಲ್ವರು ಬಿಲ್ಲುಗಾರ್ತಿಯರು ಒಲಿಂಪಿಕ್ ದಾಖಲೆ ಮುರಿದದ್ದು ವಿಶೇಷ. ಮೊದಲ ನಾಲ್ಕು ಸ್ಥಾನ ಪಡೆದ ಆಟಗಾರ್ತಿಯರು 24 ವರ್ಷಗಳ ಹಿಂದಿನ ದಾಖಲೆಯನ್ನ ಮುರಿದುಹಾಕಿದರು. 1996ರ ಅಟ್ಲಾಂಟಾ ಒಲಿಂಪಿಕ್ಸ್ನಲ್ಲಿ ಉಕ್ರೇನ್ ದೇಶದ ಲೀನಾ ಹೆರಾಸಿಮೆಂಕೋ ಅವರು 673 ಅಂಕ ಗಳಿಸಿದ್ದರು. ಇಂದು ಕೊರಿಯಾದ ಆನ್ ಸಾನ್, ಮಿನ್ಹೀ ಜಾಂಗ್ ಮತ್ತು ಚೇಯಂಗ್ ಕಾಂಗ್ ಹಾಗೂ ಮೆಕ್ಸಿಕೋದ ವೇಲೆನ್ಷಿಯಾ ಅಲೆಜಾಂಡ್ರಾ ಅವರು ಕ್ರಮವಾಗಿ 680, 677, 675 ಮತ್ತು 674 ಪಾಯಿಂಟ್ಸ್ ಗಳಿಸಿದರು. ಭಾರತದ ಅಗ್ರಮಾನ್ಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಕೆಲ ಸುತ್ತುಗಳಲ್ಲಿ ನಿರಾಸೆಯ ಪ್ರದರ್ಶನ ನೀಡಿದ ಪರಿಣಾಮವಾಗಿ 663 ಅಂಗಳಿಗೆ ತೃಪ್ತಿಪಟ್ಟು 9ನೇ ಸ್ಥಾನ ಆಕ್ರಮಿಸಬೇಕಾಯಿತು. ಆದರೆ, ಚಿನ್ನದ ಪದಕದ ನಿರೀಕ್ಷೆಯಲ್ಲಿರುವ ದೀಪಿಕಾ ಕುಮಾರಿ ಅವರಿಗೆ ರ್ಯಾಂಕಿಗ್ ವರ್ಗೀಕರಣ ಅಷ್ಟೇನೂ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಆದರೆ, ಕ್ವಾರ್ಟರ್ ಫೈನಲ್ನಲ್ಲೇ ಅವರಿಗೆ ಪ್ರಬಲ ಕೊರಿಯನ್ ಆಟಗಾರ್ತಿಯರ ಸವಾಲು ಎದುರಾಗುವ ಸಾಧ್ಯತೆಯಂತೂ ದಟ್ಟವಾಗಿದೆ. ಈ ಬಾರಿಯ ಒಲಿಂಪಿಕ್ಸ್ನಲ್ಲಿ ಆರ್ಚರಿ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಮಹಿಳೆ ದೀಪಿಕಾ ಕುಮಾರಿ. ಅವರು ವಿಶ್ವದ ನಂಬರ್ ಒನ್ ಬಿಲ್ಲುಗಾರ್ತಿಯೂ ಹೌದು.
ಇನ್ನು, ದೀಪಿಕಾ ಕುಮಾರಿ ಸೇರಿದಂತೆ ಒಟ್ಟು ನಾಲ್ವರು ಭಾರತೀಯ ಬಿಲ್ಲುಗಾರಿಕೆ ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಸೆಣಸುತ್ತಿದ್ದಾರೆ. ಅತಾನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣದೀಪ್ ರಾಯ್ ಅವರು ಪುರುಷರ ವಿಭಾಗದಲ್ಲಿದ್ಧಾರೆ. ವೈಯಕ್ತಿಕ ಸ್ಪರ್ಧೆಗಳ ಜೊತೆಗೆ ಪುರುಷರ ತಂಡ ಸ್ಪರ್ಧೆ ಹಾಗೂ ಮಿಶ್ರ ಸ್ಪರ್ಧೆಯೂ ಇದೆ. ಮಿಕ್ಸೆಡ್ ಟೀಮ್ನಲ್ಲಿ ದೀಪಿಕಾ ಕುಮಾರಿ ಜೊತೆ ಅತಾನು ದಾಸ್ ಅವರು ಆಡಲಿದ್ಧಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ