ಕೊಲಂಬೋ(ಜು.29): ಮನೆಯಲ್ಲಿ ನೀರಿಗಾಗಿ ಬಾವಿ ತೋಡುತ್ತಿದ್ದ ವ್ಯಕ್ತಿಯೊಬ್ಬರಿಗೆ 510 ಕೇಜಿ ತೂಕದ ಬೃಹತ್ ನೀಲಮಣಿ ಶಿಲೆ ದೊರೆತ ಘಟನೆ ಶ್ರೀಲಂಕಾದಲ್ಲಿ ನಡೆದಿದೆ.
* ಲಂಕಾದಲ್ಲಿ 744 ಕೋಟಿ ರೂ ಮೌಲ್ಯದ ನೀಲಮಣಿ ಪತ್ತೆ!
* ಬಾವಿ ತೋಡುತ್ತಿದ್ದ ವ್ಯಕ್ತಿಗೆ ಸಿಕ್ಕ 510 ಕೇಜಿ ಶಿಲೆ
* ಇದು ಜಗತ್ತಿನ ಅತಿದೊಡ್ಡ ನೀಲಮಣಿ: ತಜ್ಞರು
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಅಪರೂಪದ ಹವಳದ ಬೆಲೆ 744 ಕೋಟಿ ರು. ಇರಬಹುದು ಎಂದು ತಜ್ಞರು ಅಂದಾಜಿಸಿದ್ದು, ಇದು ಈವರೆಗೆ ಜಗತ್ತಿನಲ್ಲಿ ದೊರೆತ ಅತಿದೊಡ್ಡ ನೀಲಮಣಿ ಎಂದು ಹೇಳಿದ್ದಾರೆ. ಇದಕ್ಕೆ ಬೆರಗಿನ ನೀಲಮಣಿ ಎಂದು ನಾಮಕಾರಣ ಮಾಡಲಾಗಿದೆ.
ಶ್ರೀಲಂಕಾದ ರತ್ನಪುರ ನಗರದ ನಿವಾಸಿ ಗಾಮಗೆ ಎಂಬುವರು 1 ವರ್ಷದ ಹಿಂದೆ ಮನೆಯಲ್ಲಿ ಬಾವಿ ತೋಡುವಾಗ ಇದು ಲಭಿಸಿದೆ. ಇದನ್ನು ಶುಚಿಗೊಳಿಸಲು 1 ವರ್ಷ ಹಿಡಿದಿದ್ದು, ಈಗ ಇದು ಅಮೂಲ್ಯ ನೀಲಮಣಿ ಎಂದು ಖಚಿತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗಾಮಗೆ, ನನ್ನ ಮನೆಯಲ್ಲಿ ಬಾವಿ ತೋಡಿಸುತ್ತಿದ್ದೆ. ಈ ವೇಳೆ ಅಪರೂಪದ ಬಂಡೆಯನ್ನು ನೋಡಿದ ಬಾವಿ ತೋಡುತ್ತಿದ್ದ ವ್ಯಕ್ತಿ ಈ ಬಗ್ಗೆ ನಮಗೆ ಮಾಹಿತಿ ನೀಡಿದ. ಬಳಿಕ ಇದೊಂದು ಅಪರೂಪದ ಮತ್ತು ಬೆಲೆಬಾಳುವ ನೀಲಮಣಿ ಎಂಬುದು ಗೊತ್ತಾಯಿತು ಎಂದು ಹೇಳಿದ್ದಾರೆ.
ತಮ್ಮ ಮನೆಯಲ್ಲಿ ನೀಲಮಣಿ ಪತ್ತೆಯಾಗಿರುವ ವಿಚಾರವನ್ನು ಗಾಮಗೆ ಅವರು ಸರ್ಕಾರಕ್ಕೆ ತಿಳಿಸಿದ್ದರು. ಬಳಿಕ ನೀಲಮಣಿಗೆ ಅಂಟಿಕೊಂಡಿದ್ದ ಮಣ್ಣು ಮತ್ತು ಇನ್ನಿತರ ಭಾಗಗಳನ್ನು ಶುಚಿಗೊಳಿಸಲು ಒಂದು ವರ್ಷವೇ ಬೇಕಾಯಿತು. ಕೊನೆಗೆ ಇದು ಉತ್ತಮ ಗುಣಮಟ್ಟದ ನೀಲಮಣಿ ಎಂಬುದು ಖಚಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ವಿಶ್ವದಲ್ಲೇ ಪತ್ತೆಯಾದ ವಿಶೇಷ ಮತ್ತು ಅತಿ ದೊಡ್ಡದಾದ ಹವಳವಾಗಿದ್ದು, ಖಾಸಗಿ ಸಂಗ್ರಹಕಾರರು ಮತ್ತು ಮ್ಯೂಸಿಯಂಗಳು ಇದನ್ನು ಖರೀದಿಸಲು ಮುಂದೆ ಬರಬಹುದು ಎಂದು ಶ್ರೀಲಂಕಾ ರಾಷ್ಟ್ರೀಯ ಹವಳ ಮತ್ತು ಜ್ಯುವೆಲರಿ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದಾರೆ.