ಬೆಂಗಳೂರು : ಬೆಂಗಳೂರು ಮಹಾನಗರದ ಜನರ ಪ್ರಮುಖ ಸಂಚಾರಿ ಕೊಂಡಿಯಾಗಿರುವ ನಮ್ಮ ಮೆಟ್ರೋ ನಿಲ್ದಾಣಗಳ ಬಳಿ ಶೀಘ್ರವೇ ಮೀಟರ್ ಚಾಲಿತ ಮೆಟ್ರೋಮಿತ್ರಾ ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆ ಆರಂಭವಾಗಲಿದೆ.
ಈ ಬಗ್ಗೆ ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಅವರು ಮಾಹಿತಿ ನೀಡಿದ್ದಾರೆ. ಇದರಿಂದ ಬೆಂಗಳೂರಿಗರಿಗೆ ಮೆಟ್ರೋ ನಿಲ್ದಾಣಗಳ ಆರಂಭದಿಂದ ಕೊನೆವರೆಗೂ ಈ ಮೆಟ್ರೋಮಿತ್ರ ಸೇವೆ ಲಭ್ಯವಾಗಲಿದೆ. ಅಲ್ಲದೇ ಮೆಟ್ರೋ ಇಳಿದ ತಕ್ಷಣ ಬೇರೋಂದು ಆಟೋಗೆ ಕಾಯುವುದು ಹಾಗೂ ಬುಕಿಂಗ್ ಮಾಡುತ್ತ ನಿಲ್ಲುವ ತಾಪತ್ರಯ ಇರುವುದಿಲ್ಲ.
ಮೆಟ್ರೋಮಿತ್ರಾ ಎಂಬ ಆ್ಯಪ್ ಆಧಾರಿತ ಸೇವೆಗೆ ಪ್ರಾಯೋಗಿಕವಾಗಿ ಆ.15ರಂದು ಚಾಲನೆ ಸಿಗಲಿದ್ದು, ಓಪನ್-ಮೊಬಿಲಿಟಿ ನೆಟ್ವರ್ಕ್” ನಲ್ಲಿ ವಿನ್ಯಾಸಗೊಳಿಸಲಾದ ನಮ್ಮ ಯಾತ್ರಿಗಿಂತ ಭಿನ್ನವಾಗಿ, ಮೆಟ್ರೋ ಮಿತ್ರ ಡಿಜಿಟಲ್ ವಾಣಿಜ್ಯಕ್ಕಾಗಿ ಓಪನ್ ನೆಟ್ವರ್ಕ್ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇನ್ನು ಮೆಟ್ರೋ ಮಿತ್ರಕ್ಕೆ ಮೀಟರ್ ದರ ನಿಗದಿಪಡಿಸಲಾಗಿದೆ. ಮೊದಲ ಎರಡು ಕಿಲೋಮೀಟರ್ಗಳಿಗೆ 30 ರೂ. ಮತ್ತು ನಂತರದ ಪ್ರತಿ ಕಿಲೋಮೀಟರ್ಗೆ 15 ರೂ. ಜೊತೆಗೆ 10 ರೂ. ಇತರೆ ಚಾರ್ಜಸ್ಗೆ ಎಂದು ದರ ನಿಗದಿಪಡಿಸಲಾಗಿದೆ.