ಬೆಂಗಳೂರು : ಮುಂಡರಗಿ ತಾಲೂಕಿನಲ್ಲಿ ರೈತ ಮಹಿಳೆಯರು ವಿಷ ಕುಡಿದ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.
ಅರಣ್ಯ ಇಲಾಖೆಯ ಕಿರುಕುಳದಿಂದ ವಿಷ ಕುಡಿದ ಪ್ರಕರಣವನ್ನು ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಶಾಸಕ ಎಚ್ಕೆ ಪಾಟೀಲ್ ಪ್ರಸ್ತಾಪ ಮಾಡಿ ಗಂಭೀರತೆಯನ್ನು ವಿವರಿಸಿದರು.
ಇದೇ ವೇಳೆ ಎಚ್.ಕೆ. ಪಾಟೀಲ್ ಬೆಂಬಲಕ್ಕೆ ಮಾಜಿ ಸಿಎಂ ಯಡಿಯೂರಪ್ಪ ನಿಂತರು. ಇದೊಂದು ಗಂಭೀರವಾದ ಪ್ರಕರಣ. ಎಚ್.ಕೆ. ಪಾಟೀಲ್ ಹೇಳಿರುವುದು ಸತ್ಯವಾಗಿದೆ. ಸಿಎಂ ಆದಷ್ಟು ಬೇಗ ಕ್ರಮವಹಿಸಿ ಸಮಸ್ಯೆ ಕೊನೆಗಾಣಿಸಬೇಕು. ಸಮಸ್ಯೆ ಮುಂದುವರಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದಿಲ್ಲ. ಅಗತ್ಯ ಬಿದ್ದರೆ ಸದನ ಸಮಿತಿ ರಚಿಸಿ ಎಂದು ಯಡಿಯೂರಪ್ಪ ಆಗ್ರಹಿಸಿದರು.
ಇನ್ನೊಂದೆಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಧ್ವನಿಗೂಡಿಸಿ ಸಮಸ್ಯೆ ಪರಿಹಾರ ಮಾಡಲು ಸರ್ಕಾರ ಮುಂದಾಗಬೇಕು. ಅರಣ್ಯಾಧಿಕಾರಿಗಳ ಧೋರಣೆ ಸರಿಯಲ್ಲ. ಕೂಡಲೇ ಸಾಗುವಳಿ ಮಾಡಿದ ರೈತರ ಸಂಕಷ್ಟ ಪರಿಹಾರ ಮಾಡಲು ಆಗ್ರಹಿಸಿದರು.
ಇದೇ ವೇಳೆ ಸ್ಪೀಕರ್ ಕಾಗೇರಿ ಸೇರಿದಂತೆ ಬಹುತೇಕ ಹಿರಿಯ ಸದಸ್ಯರಿಂದ ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಇನ್ನು ಅರಣ್ಯ ಸಚಿವ ಉಮೇಶ್ ಕತ್ತಿಗೆ ಸದನದಲ್ಲಿ ಆಡಳಿತ ಪಕ್ಷದ ಶಾಸಕ ಕಳಕಪ್ಪ ಬಂಡಿ ಟಕ್ಕರ್ ಕೊಟ್ಟರು. ಅರಣ್ಯ ಇಲಾಖೆ ಬ್ರಿಟಿಷರ ಪಳೆಯುಳಿಕೆಯಾಗಿದೆ. ಅರಣ್ಯ ಸಚಿವರಿಗೆ ಇಲಾಖೆಯ ಬಗ್ಗೆ ಮಾಹಿತಿ ಇಲ್ಲ, ಅವರು ಬಯಲು ಸೀಮೆಯವರು ಅಂತಾ ಕಳಕಪ್ಪ ಬಂಡಿ ಕಿಡಿಕಾರಿದರು.