ಎಲ್ಲರಿಗೂ ಕೊರೊನಾ ಬೂಸ್ಟರ್ ಡೋಸ್ ಅಗತ್ಯವಿದೆಯೇ? ಬ್ರಿಟನ್ ತಜ್ಞರ ಅಭಿಪ್ರಾಯ

ಶನಿವಾರ, 11 ಸೆಪ್ಟಂಬರ್ 2021 (11:59 IST)
ಬ್ರಿಟನ್, ಸೆ11: ಬಲಿಷ್ಠವಾಗಿರುವ ಕೊರೊನಾ ರೂಪಾಂತರಗಳ ವಿರುದ್ಧ ಹೋರಾಟಕ್ಕೆ ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ನೀಡುವ ಕುರಿತು ಜಾಗತಿಕವಾಗಿ ಚರ್ಚೆಗಳು ನಡೆಯುತ್ತಿವೆ. ಬ್ರಿಟನ್ನಲ್ಲಿಯೂ ಬೃಹತ್ ಮಟ್ಟದಲ್ಲಿ ಬೂಸ್ಟರ್ ಡೋಸ್ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಆದರೆ ಇದರ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಬ್ರಿಟನ್ ತಜ್ಞರು. ಎರಡು ಡೋಸ್ಗಳ ಸಂಪೂರ್ಣ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿ ದೀರ್ಘಕಾಲ ಉಳಿಯುವುದರಿಂದ ಎಲ್ಲರಿಗೂ ಬೂಸ್ಟರ್ ಡೋಸ್ ನೀಡುವ ಅಗತ್ಯವಿಲ್ಲವೇ ಇಲ್ಲ ಎಂದು ಬೂಸ್ಟರ್ ಡೋಸ್ ಅಭಿವೃದ್ಧಿಪಡಿಸುತ್ತಿರುವ ಆಕ್ಸ್ಫರ್ಡ್ ಯೂನಿವರ್ಸಿಟಿ ಶುಕ್ರವಾರ ತಿಳಿಸಿದೆ.
ಹಿರಿಯ ನಾಗರಿಕರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾತ್ರ ಈ ಬೂಸ್ಟರ್ ಡೋಸ್ ಲಸಿಕೆ ಅಗತ್ಯವಿದೆ. ಇತರರಿಗೆ ಈ ಲಸಿಕೆಯ ಅಗತ್ಯವಿಲ್ಲ. ಕಡಿಮೆ ಲಸಿಕೆ ಪೂರೈಕೆ ಮಾಡಿರುವ ದೇಶಗಳಿಗೆ ಇದನ್ನೇ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಆಕ್ಸ್ಫರ್ಡ್ ಯೂನಿವರ್ಸಿಟಿಯ ಆಸ್ಟ್ರಾಜೆನೆಕಾ ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ವಿಜ್ಞಾನಿ ಪ್ರೊ. ಡೇಮ್ ಸಾರಾ ಗಿಲ್ಬರ್ಟ್
ಹೇಳಿದ್ದಾರೆ. ಭಾರತದಲ್ಲಿ ಆಕ್ಸ್ಫರ್ಡ್/ ಆಸ್ಟ್ರಾಜೆನೆಕಾ 'ಕೋವಿಶೀಲ್ಡ್ ಲಸಿಕೆ' ಉತ್ಪಾದಿಸುತ್ತಿದೆ.
ಜನರ ನಡುವೆ ವೈರಸ್ ಹರಡುತ್ತಿದೆ. ರೂಪಾಂತರ ಪಡೆಯುತ್ತಿದೆ ಹಾಗೂ ಇನ್ನಷ್ಟು ಸೃಷ್ಟಿಯಾಗುತ್ತಿದೆ. ಇದನ್ನು ತಡೆಯಲು ಬೂಸ್ಟರ್ ಡೋಸ್ ಅಗತ್ಯವಿದೆ ಎಂದು ಹಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
'ಈ ರೀತಿ ವೇಗಗತಿಯಲ್ಲಿ ಸೋಂಕು ಹರಡುವಿಕೆಯನ್ನು ಆದಷ್ಟು ಬೇಗನೇ ತಡೆಯುವ ಅಗತ್ಯವಿದೆ. ಪ್ರತಿ ಪರಿಸ್ಥಿತಿಯನ್ನೂ ಗಮನಿಸಬೇಕಿದೆ. ರೋಗನಿರೋಧಕ ಶಕ್ತಿ ಅತಿ ಕಡಿಮೆ ಇರುವವರಿಗೆ, ಹಿರಿಯ ನಾಗರಿಕರಿಗೆ ಈ ಬೂಸ್ಟರ್ ಡೋಸ್ಗಳ ಅಗತ್ಯವಿರುತ್ತದೆ. ಎರಡು ಲಸಿಕೆಯನ್ನು ಪಡೆದುಕೊಂಡಿರುವ ಬಹುಪಾಲು ಮುಕ್ಕಾಲು ಜನರಲ್ಲಿ ರೋಗನಿರೋಧಕ ಶಕ್ತಿ ಬಹುಕಾಲ ಉಳಿಯಲಿದೆ. ಅವರಿಗೆ ಈ ಲಸಿಕೆಗಳನ್ನು ನೀಡುವ ಅಗತ್ಯ ಸದ್ಯಕ್ಕಿಲ್ಲ' ಎಂದು ಹೇಳಿದ್ದಾರೆ.
ಇದರ ಬದಲು ಬ್ರಿಟನ್, ತನ್ನ ಹೆಚ್ಚು ಜನಸಂಖ್ಯೆಗೆ ಲಸಿಕೆ ನೀಡಲು ಸಾಧ್ಯವಾಗದ ದೇಶಗಳಿಗೆ ನೆರವು ನೀಡಬಹುದು. ಇನ್ನೂ ಮೊದಲ ಡೋಸ್ ಲಸಿಕೆ ನೀಡಲು ಎಷ್ಟೋ ದೇಶಗಳು ಪರದಾಡುತ್ತಿವೆ. ಅಂಥ ದೇಶಗಳಿಗೆ ನೆರವಾಗಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕೊರೊನಾ ಲಸಿಕೆ ಸಂಬಂಧ ಸಮಿತಿಗೆ ಬೂಸ್ಟರ್ ಡೋಸ್ ದಕ್ಷತೆ ಕುರಿತು ವರದಿ ಸಲ್ಲಿಸಲಾಗುತ್ತಿದೆ. ಈಗಾಗಲೇ ಬ್ರಿಟನ್ನಲ್ಲಿ ಹಿರಿಯ ನಾಗರಿಕೆ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಮಟ್ಟದಲ್ಲಿ ಇರುವವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲು ಆದೇಶಿಸಲಾಗಿದೆ. ಲಸಿಕೆ ಸಮಿತಿಯಿಂದ ಅಂತಿಮ ತೀರ್ಮಾನಕ್ಕೆ ಕಾಯುತ್ತಿದ್ದು, ಅನುಮತಿ ದೊರೆತರೆ ಈ ತಿಂಗಳ ಕೊನೆಯಲ್ಲಿ ಎಲ್ಲರಿಗೂ ಬೂಸ್ಟರ್ ಡೋಸ್ ಲಸಿಕೆ ನೀಡಲು ಆರಂಭಿಸಲಾಗುವುದು ಎಂದು ತಿಳಿದುಬಂದಿದೆ.
ಏನಿದು ಬೂಸ್ಟರ್ ಡೋಸ್?
ಕೊರೊನಾ ಲಸಿಕೆ ವಿತರಣೆಯಲ್ಲಿ ಎರಡು ಡೋಸ್ ನೀಡುವುದಕ್ಕೆ ಜಾಗತಿಕ ಮಟ್ಟದಲ್ಲಿ ಅನುಮೋದನೆ ನೀಡಲಾಗಿದೆ. ಇದರ ಹೊರತಾಗಿ ಎರಡು ಡೋಸ್ ಪಡೆದ ನಂತರ ಮೂರನೇ ಡೋಸ್ ಲಸಿಕೆಯನ್ನೇ ಬೂಸ್ಟರ್ ಡೋಸ್ ಎಂದು ಕರೆಯಲಾಗುತ್ತಿದೆ. ಮೂರನೇ ಡೋಸ್ ಮೂಲಕ ಪ್ರತಿಕಾಯ ವ್ಯವಸ್ಥೆಯನ್ನು ವೃದ್ಧಿಸುವ ಮತ್ತು ಡೆಲ್ಟಾ ರೂಪಾಂತರ ತಳಿಯಂತಹ ಅಪಾಯಕಾರಿ ರೋಗಾಣು ವಿರುದ್ಧ ಹೋರಾಡಬಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಸುವ ಉದ್ದೇಶ ಹೊಂದಲಾಗಿದೆ.
ಬೂಸ್ಟರ್ ಡೋಸ್ ಅಗತ್ಯದ ಕುರಿತು ಚರ್ಚೆ: ಕೊರೊನಾ ಸಾಂಕ್ರಾಮಿಕ ಹೆಚ್ಚಾಗುತ್ತಿರುವ ಹಿನ್ನೆಲೆ ರೂಪಾಂತರ ವೈರಸ್ ವಿರುದ್ಧ ಪ್ರಸ್ತುತ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂಬ ಅನುಮಾನ ಹುಟ್ಟಿಕೊಂಡಿದೆ. ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಇಸ್ರೇಲ್ ಈ ಬೂಸ್ಟರ್ ಡೋಸ್ ವಿತರಣೆ ಶುರು ಮಾಡಿದೆ. ಬೂಸ್ಟರ್ ಡೋಸ್ ಲಸಿಕೆ ವಿತರಣೆ ಬಗ್ಗೆ ಫೈಜರ್ ಕಂಪನಿ ಜೊತೆಗೆ ಅಮೆರಿಕ ಚರ್ಚೆ ನಡೆಸುತ್ತಿದೆ. ಭಾರತದಲ್ಲಿಯೂ ಈ ಕುರಿತು ಚರ್ಚೆಗಳು ಆರಂಭವಾಗಿವೆ. ಕಾಲಕ್ರಮೇಣ ಲಸಿಕೆ ಪ್ರತಿಕಾಯ ಮಟ್ಟ ಕ್ಷೀಣಿಸುವುದರಿಂದ ಬೂಸ್ಟರ್ ಡೋಸ್ ಅಗತ್ಯ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ