ಕರಾವಳಿ ಮಲೆನಾಡಿನಲ್ಲಿ ಇಂದು ಭಾರೀ ಮಳೆ ಸಾಧ್ಯತೆ

ಭಾನುವಾರ, 11 ಜುಲೈ 2021 (09:11 IST)
Karnataka Weather Update: ಹವಾಮಾನ ಇಲಾಖೆ ಕರ್ನಾಟಕದ ರಾಜ್ಯದ ನಾನಾ ಪ್ರದೇಶಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಈಗಾಗಲೇ ಒಂದೆರಡು ದಿನಗಳಿಂದ ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬರುತ್ತಿಲ್ಲ.

ರಾಜಧಾನಿ ಬೆಂಗಳೂರಿನಲ್ಲೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಬಂಗಾಳಕೊಲ್ಲಿಯ ಪಶ್ಚಿಮ ಮಧ್ಯಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಈ ಮಳೆ ಉಂಟಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮುಂತಾದ ಕರಾವಳಿ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಗಳೂರು ಕೊಡಗು ಮುಂತಾದ ಮಲೆನಾಡು ಜಿಲ್ಲೆಗಳಲ್ಲೇ ಹಾಸನದಲ್ಲೂ ಇಂದು ಮಳೆರಾಯ ಕರುಣೆ ತೋರಲಿದ್ದಾನೆ. ರಾಜಧಾನಿ ಬೆಂಗಳೂರಿನಲ್ಲೂ ಇಂದು ತುಸು ಜೋರಾಗೇ ಮಳೆ ಸುರಿಯುವ ಸಂಭವವಿದೆ ಎನ್ನಲಾಗಿದೆ. ಹೀಗಾಗಿ ಇಂದು ರೆಡ್ ಅಲರ್ಟ್, ನಾಳೆ ಮತ್ತು ನಾಡಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜುಲೈ 14ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಪಶ್ಚಿಮ ಘಟ್ಟ - ಮಲೆನಾಡನ್ನು ಹೊರತುಪಡಿಸಿ ಉಳಿದೆಡೆ ಸಾಧಾರಣ ಮಳೆಯಾಗಿದೆ. ಇನ್ನೂ ಬೆಂಗಳೂರು ಸೇರಿದಂತೆ ಹಲವೆಡೆ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗಿದ್ದರೂ ಆ ಮಳೆ ಮುಂದುವರೆದಿಲ್ಲ. ಆದರೆ, ನೈರುತ್ಯ ಮುಂಗಾರು ಮತ್ತೆ ಮಳೆ ತರಲಿದೆ ಎಂದು ಹವಾಮಾನ ಇಲಾಖೆಮಾಹಿತಿ ನೀಡಿದೆ. ಜು.14 ರವರೆಗೆ ರಾಜ್ಯ ಮಾತ್ರವಲ್ಲದೇ, ಮಹಾರಾಷ್ಟ್ರ ಮತ್ತು ಗೋವಾ, ಕರಾವಳಿ ಆಂಧ್ರಪ್ರದೇಶ ಮತ್ತು ತೆಲಂಗಾಣ, ಮತ್ತು ಕೇರಳದಲ್ಲಿ ಭಾರೀ ಮಳೆ ಯಾಗಲಿದೆ. ಸತತ ಮಳೆಯು ಕಳೆದ 24 ಗಂಟೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆ ಕರಾವಳಿಯ ಗರಿಷ್ಠ ತಾಪಮಾನ ಕಡಿಮೆಯಾಗಿದೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ನದಿ ಕೆರೆ ಕಟ್ಟೆಗಳು ಭರ್ತಿಯಾಗಿದ್ದು, ಕೃಷಿಕರಲ್ಲಿ ಹರ್ಷ ವ್ಯಕ್ತವಾಗಿದೆ.

 
ಮುಂದಿನ ನಾಲ್ಕೈದು ದಿನಗಳಲ್ಲಿ ಮುಂಗಾರು ಚುರುಕಾಗುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ.  ಶೇ.94 -106 ರಷ್ಟು ಜುಲೈ ತಿಂಗಳಲ್ಲಿ ಮಳೆಯಾಗಲಿದೆ. ಆಗ ದೇಶಾದ್ಯಂತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇನ್ನೆರಡು ದಿನ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ. ಈ ಬಾರಿ ಬೇಸಿಗೆಯಿಂದಲೇ ಅಂದರೆ ಮೇ ತಿಂಗಳ ಆರಂಭದಿಂದಲೇ ಆಗಾಗ ಮಳೆ ಸುರಿಯುತ್ತಿತ್ತಾದರೂ ಮುಂಗಾರು ಪ್ರವೇಶದ ನಂತರ ಮೊದಲ ಒಂದೆರೆಡು ವಾರಗಳನ್ನು ಹೊರತುಪಡಿಸಿದರೆ ಎಲ್ಲೆಡೆ ಮಳೆ ಕ್ಷೀಣವಾಗಿತ್ತು. ಆದರೆ, ಇದೀಗ ಮತ್ತೆ ವರುಣ ಪುನಾರಾಗಮನ ಮಾಡುವಂತೆ ತೋರುತ್ತಿದ್ದು, ಮಲೆನಾಡು, ಕರಾವಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ



 

 

 

 

 

 

 

 

 

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ