ಉಡುಪಿಯ ಕಾಲೇಜಿನಲ್ಲಿ ಉಂಟಾಗಿದ್ದ ಹಿಜಾಬ್ ವಿವಾದ ರಾಜ್ಯಾದ್ಯಂತ ಹಬ್ಬುತ್ತಿದ್ದಂತೆ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ಮೊದಲು ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಕೆಲ ದಿನ ವಿಚಾರಣೆ ನಡೆಸಿತ್ತಾದರೂ, ಧಾರ್ಮಿಕ ಸೂಕ್ಷ್ಮ ಪ್ರಕರಣವಾದ್ದರಿಂದ ವಿಸ್ತೃತ ಪೀಠ ವಿಚಾರಣೆ ನಡೆಸುವ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟಿತ್ತು.
ಅದರಂತೆ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠ ರಚಿಸಲಾಗಿತ್ತು. ಪೂರ್ಣಪೀಠದ ಮುಂದೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನ ಘಟಾನುಘಟಿ ಹಿರಿಯ ವಕೀಲರು ವಾದ- ಪ್ರತಿವಾದ ಮಂಡಿಸಿದ್ದರು.
ಹಲವು ಸಾಂವಿಧಾನಿಕ, ಧಾರ್ಮಿಕ ಹಾಗೂ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುವ ಈ ವಿವಾದ ರಾಷ್ಟ್ರ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿತ್ತು.
ಹೈಕೋರ್ಟ್ ಫೆ.10ರಂದು ಮಧ್ಯಂತರ ಆದೇಶ ನೀಡಿ, ಅರ್ಜಿಗಳನ್ನು ಇತ್ಯರ್ಥಪಡಿಸುವವರೆಗೂ ಸಮವಸ್ತ್ರ ಸಂಹಿತೆ ಜಾರಿ ಮಾಡಿರುವ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್, ಕೇಸರಿ ಶಾಲು ಸೇರಿ ಯಾವುದೇ ಧಾರ್ಮಿಕ ಸಂಕೇತ ಹೊಂದಿರುವ ಉಡುಪು ಧರಿಸಿ ಹೋಗಬಾರದು ಎಂದು ಸ್ಪಷ್ಟಪಡಿಸಿತ್ತು.