ಮಕ್ಕಳ ದೇಹದಲ್ಲಿಯೇ ಉತ್ತಮ ಇಮ್ಯೂನಿಟಿ ಪವರ್ ಹೆಚ್ಚಾಗುತ್ತಾ?
ಸೋಮವಾರ, 27 ಡಿಸೆಂಬರ್ 2021 (14:30 IST)
ಕೊವ್ಯಾಕ್ಸಿನ್ ಲಸಿಕೆ ಮಕ್ಕಳ ದೇಹದಲ್ಲಿ ಉತ್ತಮ ರೋಗ ನಿರೋಧಕ ಪ್ರತಿಕ್ರಿಯೆಗೆ ಕಾರಣವಾಗಬಲ್ಲದು ಎಂಬುದು ಪ್ರಯೋಗದಿಂದ ಗೊತ್ತಾಗಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಕೊವಿಡ್ 19 ಕಾರ್ಯಾಕಾರಿ ಗುಂಪಿನ ಅಧ್ಯಕ್ಷ ಡಾ. ಎನ್.ಕೆ.ಅರೋರಾ ತಿಳಿಸಿದ್ದಾರೆ.
ಜ.3ರಿಂದ ದೇಶದಲ್ಲಿ 15-18ವರ್ಷದವರೆಗಿನವರಿಗೆ ಕೊರೊನಾ ಲಸಿಕೆ ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಎನ್.ಕೆ.ಅರೋರಾ, ಈ ನಿರ್ಧಾರದಿಂದ ಏನೆಲ್ಲ ಪ್ರಯೋಜನವಾಗಲಿದೆ ಎಂಬುದನ್ನು ತಿಳಿಸಿದರು.
ವಾಸ್ತವದಲ್ಲಿ ಹೇಳಬೇಕೆಂದರೆ, 15-18ವರ್ಷದವರೂ ಕೂಡ 18ವರ್ಷ ಮೇಲ್ಪಟ್ಟ ವಯಸ್ಕರಂತೆಯೇ ಆಗಿರುತ್ತಾರೆ. ದೇಶದಲ್ಲಿ ಕೊವಿಡ್ 19ನಿಂದ ಮೃತಪಟ್ಟ ಒಟ್ಟಾರೆ 18 ವರ್ಷದ ಒಳಗಿನವರಲ್ಲಿ ಮೂರನೇ ಎರಡರಷ್ಟು ಮಂದಿ 15ವರ್ಷ ಮೇಲ್ಪಟ್ಟವರೇ ಆಗಿದ್ದಾರೆ ಎಂಬುದನ್ನು ನಮ್ಮ ಸಂಶೋಧನೆ ಹೇಳುತ್ತದೆ.
ಹಾಗಾಗಿ ಹದಿಹರೆಯದವರನ್ನು ಕೊವಿಡ್ 19 ಸೋಂಕಿನಿಂದ ರಕ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರೋರಾ ಮಾಹಿತಿ ನೀಡಿದ್ದಾರೆ.