ಮೈಸೂರು : ಇದೇ ಆಗಸ್ಟ್ 30ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅದ್ಧೂರಿ ಚಾಲನೆ ಸಿಗಲಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿಂದು ಮೈಸೂರಿಗೆ ಭೇಟಿ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪೂರ್ವ ತಯಾರಿ ಸಭೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಮುಂದೆ ಇನ್ನೊಂದು ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡುತ್ತಿದ್ದೇವೆ. ಎಲ್ಲರ ಒಮ್ಮತದ ತೀರ್ಮಾನದಿಂದ ಮೈಸೂರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಮೈಸೂರಿನಲ್ಲಿ ಅನ್ನಭಾಗ್ಯ ಮಾಡುವ ಪ್ಲ್ಯಾನ್ ಇತ್ತು. ಅಕ್ಕಿ ವಿಚಾರದಲ್ಲಿ ಒಂದಷ್ಟು ಅಡೆತಡೆ ಇದೆ. ಹೀಗಾಗಿ ಗೃಹಲಕ್ಷ್ಮಿಯನ್ನ ಇಲ್ಲಿಂದ ಆರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಆಗುವ ಕಾರಣದಿಂದಾಗಿ ಮೈಸೂರಿಗೆ ಶಿಫ್ಟ್ ಮಾಡಿದ್ದೇವೆ. ಆ.30 ರಂದು ಒಂದು ಬಟನ್ ಒತ್ತಿದ ಕೂಡಲೇ ಎಲ್ಲಾ ಫಲಾನುಭವಿಗಳಿಗೆ ಹಣ ಸಂದಾಯವಾಗುತ್ತದೆ. ಅದರ ಮೆಸೇಜ್ಗಳು ಫಲಾನುಭವಿಗಳ ಮೊಬೈಲ್ ನಂಬರ್ಗಳಿಗೆ ಬರುತ್ತದೆ. ಎಲ್ಲಾ ಹಣವನ್ನ ಬ್ಯಾಂಕ್ಗೆ ಡೆಪಾಸಿಟ್ ಮಾಡಿದ್ದೇವೆ. ಸರ್ವರ್ ಸಮಸ್ಯೆಯಾದ್ರೆ ಒಂದಿಷ್ಟು ಜನರಿಗೆ ಹಣ ಬರುವುದು ತಡವಾಗಬಹುದು ಅಷ್ಟೇ ಅಂತಲೂ ಡಿಕೆಶಿ ಸ್ಪಷ್ಟನೆ ಕೊಟ್ಟಿದ್ದಾರೆ.