ದೆಹಲಿ : ಭಾರತದಲ್ಲಿ ಕೊವಿಡ್ 19 ಮೂರನೇ ಅಲೆ 2022ರ ಫೆಬ್ರವರಿಯಲ್ಲಿ ಉತ್ತುಂಗಕ್ಕೆ ಏರುವ ಸಾಧ್ಯತೆ ಹೆಚ್ಚಾಗಿದೆ.
ಇದೀಗ ಶುರುವಾಗಿರುವ ಒಮಿಕ್ರಾನ್ ಪ್ರಸರಣವೇ ಕೊವಿಡ್ 19 ಮೂರನೇ ಅಲೆಗೆ ಕಾರಣವಾಗಲಿದ್ದು, ಆದರೆ ಈ ಅಲೆ 2ನೇ ಅಲೆಯಷ್ಟು ಭೀಕರವಾಗಿ ಇರುವುದಿಲ್ಲ. ಸ್ವಲ್ಪ ಸೌಮ್ಯವಾಗಿ ಇರಲಿದೆ ಎಂದು ದೇಶದ ಕೊವಿಡ್ 19 ಪಥವನ್ನು ಟ್ರ್ಯಾಕ್ ಮಾಡುವಲ್ಲಿ ಸಕ್ರಿಯರಾಗಿರುವ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಒಮಿಕ್ರಾನ್ ಡೆಲ್ಟಾಕ್ಕಿಂತಲೂ ಮೂರು ಪಟ್ಟು ಹೆಚ್ಚು ಪ್ರಸರಣಗೊಳ್ಳುತ್ತಿದೆ. ಅದು ಲಸಿಕೆಯ ದಕ್ಷತೆಯನ್ನೇ ಕುಗ್ಗಿಸುತ್ತಿದೆ. ಹೀಗಾಗಿ ಭಾರತದಲ್ಲಿ ಫೆಬ್ರವರಿ ಹೊತ್ತಿಗೆ ದಿನಕ್ಕೆ 1.5 ಲಕ್ಷ ದಿಂದ 1.8 ಲಕ್ಷದವರೆಗೆ ಕೊರೊನಾ ಪ್ರಕರಣಗಳು ಪತ್ತೆಯಾಗಬಹುದು ಎಂದು ಐಐಟಿ ಕಾನ್ಪುರದ ಮನೀಂದ್ರ ಅಗರವಾಲ್ ಮತ್ತು ಐಐಟಿ ಹೈದರಾಬಾದ್ನ ಎಂ ವಿದ್ಯಾಸಾಗರ್ ತಿಳಿಸಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಒಮಿಕ್ರಾನ್ ಪ್ರಸರಣದ ವೇಗ ಅತ್ಯಂತ ಹೆಚ್ಚಾಗಿರುವ ಕಾರಣ, ದಿನಕ್ಕೆ 1.7-1.8 ಲಕ್ಷ ಕೇಸ್ವರೆಗೂ ದಾಖಲಾಗಬಹುದು ಎಂಬುದು ಆರೋಗ್ಯ ತಜ್ಞರ ಎಚ್ಚರಿಕೆ. ಭಾರತದಲ್ಲಿ ಕೊವಿಡ್ 19 ಎರಡನೇ ಅಲೆ ಅತ್ಯಂತ ಭೀಕರವಾಗಿತ್ತು.
ದಿನಕ್ಕೆ 4 ಲಕ್ಷ ಕೊರೊನಾ ಕೇಸ್ಗಳೂ ದಾಖಲಾದ ಉದಾಹರಣೆ ಇತ್ತು. ಆಕ್ಸಿಜನ್, ಬೆಡ್ಗಳ ಕೊರತೆ ಎದುರಾಗಿತ್ತು. ಆದರೆ ಈ ಬಾರಿ ಅಂಥ ಅಪಾಯಗಳಿಗೆ ಅವಕಾಶ ಕೊಡಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ.