ಕಾಂಗ್ರೆಸ್ ನ ಹಲವು ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ: ಯಡಿಯೂರಪ್ಪ ಹೊಸ ಬಾಂಬ್
ಮಂಗಳವಾರ, 21 ಸೆಪ್ಟಂಬರ್ 2021 (11:15 IST)
ಬೆಂಗಳೂರು : ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಶಾಸಕರನ್ನು ಡಿ.ಕೆ ಶಿವಕುಮಾರ್ ಸೆಳೆಯುವುದರಲ್ಲಿ ಯಾವುದೇ ಅರ್ಥ ಇಲ್ಲ. ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ. ಅದು ಅವರ ವ್ಯರ್ಥ ಪ್ರಯತ್ನ. ಕಾಂಗ್ರೆಸ್ ಶಾಸಕರೇ ನಮ್ಮ ಜೊತೆ ಬರುತ್ತಾರೆ ಎಂದರು.
ಕಾಂಗ್ರೆಸ್ ನ ಯಾವ ಯಾವ ಶಾಸಕರು ಬರುತ್ತಾರೆ ಎಂಬ ಬಗ್ಗೆ ನಿಮಗೆ ಸ್ವಲ್ಪ ದಿನದಲ್ಲೇ ಗೊತ್ತಾಗುತ್ತದೆ. ಕಾಂಗ್ರೆನವರು ಇವತ್ತು ಸೈಕಲ್ ನಲ್ಲಿ ಅಧಿಕಾರಕ್ಕಾಗಿ ವಿಧಾನಸೌಧಕ್ಕೆ ಬರುತ್ತಾರೆ. ಅವರಿಗಿಂತ ಮೊದಲು ಬಿಜೆಪಿಯವರು ಕಾರು, ಸ್ಕೂಟರ್ ಬೈಕ್ ನಲ್ಲಿ ಬಂದು ವಿಧಾನಸೌಧ ಸೇರಿಕೊಳ್ಳುತ್ತೇವೆ ಎಂದರು. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ 140 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತ ಪಡಿಸಿದರು.
ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರಲು ಮುಂದಾಗಿದ್ದಾರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಕೇಂದ್ರ ನಾಯಕರ ಅನುಮತಿಗಾಗಿ ಕಾಯುತ್ತಿದ್ದೇವೆ, ಈಗಾಗಲೇ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದು ಕಂದಾಯ ಸಚಿವ ಆರ್ .ಅಶೋಕ್ ಹೇಳಿದ್ದಾರೆ.
ಇನ್ನೂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, "ನಾನು ನಮ್ಮ ಕಾರ್ಯತಂತ್ರವನ್ನು ಏಕೆ ಬಹಿರಂಗಪಡಿಸಬೇಕು? ನಮ್ಮ ಕಾರ್ಯತಂತ್ರವನ್ನು ನಾನು ಬಹಿರಂಗಪಡಿಸಲು ಬಯಸುವುದಿಲ್ಲ. ಯಾರು ಯಾರೊಂದಿಗೆ ಹೋಗಲು ಬಯಸುತ್ತಾರೆ,. ಯಾರು ಯಾರೊಂದಿಗೆ ಬರಲು ಬಯಸುತ್ತಾರೆ ಎಂಬುದನ್ನು ಕಾದು ನೋಡೋಣ, ಯಡಿಯೂರಪ್ಪ ಏನನ್ನೋ ಹೇಳಿದ್ದಾರೆ, ಅಶೋಕ ಏನೋ ಹೇಳಿದ್ದಾರೆ, ಯಾರ ಮಾತು ನಿಜವಾಗುತ್ತದೆ ಎಂಬುದಕ್ಕೆ ಸ್ವಲ್ಪ ಸಮಯ ಬೇಕಿದೆ ಎಂದಿದ್ದಾರೆ.