ವಾಹನ ಸವಾರರೇ ಗಮನಿಸಿ : ಇನ್ಮುಂದೆ `ಟ್ರಾಫಿಕ್ ರೂಲ್ಸ್' ಬ್ರೇಕ್ ಮಾಡಿದ್ರೆ ದುಬಾರಿ ದಂಡ!

ಭಾನುವಾರ, 12 ಸೆಪ್ಟಂಬರ್ 2021 (09:52 IST)
ಬೆಂಗಳೂರು : ಸಾರ್ವಜನಿಕರೇ ಗಮನಿಸಿ, ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸುವ ಮುನ್ನ ಎಚ್ಚರ ವಹಿಸಿ, ಇಲ್ಲವಾದರೆ, ಭಾರಿ ದಂಡದ ಕಟ್ಟಬೇಕಾದೀತು. ಹೌದು ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಟ್ರಾಫಿಕ್ ಪೊಲೀಸರು ಮತ್ತೊಮ್ಮೆ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ. ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕಾನೂನಿನ ಕಲಂ ಆಧಾರದ ಮೇಲೆ ವಿಧಿಸುವ ದಂಡದ ವಿವರಗಳನ್ನು ಪೊಲೀಸರು ಪ್ರಕಟಿಸಿದ್ದಾರೆ.

ಈ ಕುರಿತಂತೆ ಬೆಂಗಳೂರು ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಕುಲ್ದೀಪ್ ಕುಮಾರ್ ಆರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ಕಾನೂನಿನ ಕಲಂ ಆಧಾರದ ಮೇಲೆ ವಿಧಿಸುವ ದಂಡದ ವಿವರಗಳನ್ನು ಪ್ರಕಟಿಸಿದ್ದಾರೆ. ವಾಹನದ ಚಾಲಕ ಅಥವಾ ಸವಾರರು ಮದ್ಯಪಾನ ಮತ್ತು ಮಾದಕ ದ್ರವ್ಯದ ಅಮಲಿನಲ್ಲಿ ಚಾಲನೆ ಮಾಡಿದರೆ ಐ.ಎಂ.ವಿ. ಕಾಯ್ದೆ ಸೆಕ್ಷನ್ 185ರನ್ವಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕ್ರಮ ಕೈಗೊಳ್ಳಲಾಗುವುದು. ಆರೋಪಿಯ ಚಾಲನಾ ಅರ್ಹತಾ ಪತ್ರವನ್ನು ಅಮಾನತ್ತಿಗಾಗಿ ಸಂಬಂಧಿಸಿದ ಆರ್.ಟಿ.ಓ ರವರಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ವಾಹನ ಚಾಲಕರು ಸಮವಸ್ತ್ರ ಧರಿಸದೇ ವಾಹನ ಚಲಾಯಿಸುವುದು ಕಂಡರೆ ಐಎಂವಿ ಕಾಯ್ದೆ ಸೆಕ್ಷನ್ 177ರ ನಿಯಮದನ್ವಯ 500 ರೂಪಾಯಿ ದಂಡ ವಿಧಿಸಲಿದ್ದಾರೆ. ವಾಹನದಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಕರೆದೊಯ್ಯುವುದು ಕಂಡು ಬಂದಲ್ಲಿ ಐಎಂವಿ ಕಾಯ್ದೆ ಸೆಕ್ಷನ್ 194(ಎ) ಪ್ರಕಾರ ತಲಾ 200 ರೂಪಾಯಿ ದಂಡ ಬೀಳಲಿದೆ. ನಿಗದಿ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದೊಯ್ದರೂ ಕೂಡ ಇದೇ ನಿಯಮದನ್ವಯ ತಲಾ 200 ರೂಪಾಯಿ ದಂಡ ಹಾಕಲಿದ್ದಾರೆ.
ಇನ್ನು ಪ್ರಯಾಣಿಕರು ಕರೆದ ಸ್ಥಳಕ್ಕೆ ಬಾಡಿಗೆ ಹೋಗಲು ನಿರಾಕರಣೆ ಮಾಡಿದರೆ ಅಂತವರಿಗೆ ಐಎಂವಿ ಕಾಯ್ದೆ ಸೆಕ್ಷನ್ 177 & ಕೆಎಂವಿ ನಿಯಮ 16(ಬಿ) ಅನ್ವಯ 500 ರೂಪಾಯಿ ದಂಡ ಬೀಳಲಿದೆ. ಜೊತೆಗೆ ನಿಗದಿತ ದರಕ್ಕಿಂತ ಹೆಚ್ಚಿನ ದರವನ್ನು ಪಡೆಯುವುದು ಕಂಡುಬಂದಲ್ಲಿ ಅಂತವರಿಗೆ ಐಎಂವಿ ಕಾಯ್ದೆ ಸೆಕ್ಷನ್ 177& ಕೆಎಂವಿ ನಿಯಮ 16(ಜೆ) 500 ರೂಪಾಯಿ ದಂಡ ಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ