ಮುಂಬೈ : ಶಿವಸೇನೆ ನೇತೃತ್ವದ `ಮಹಾ ಸರ್ಕಾರದ ಪ್ರಸ್ತುತ ರಾಜಕೀಯ ಬಿಕ್ಕಟ್ಟನ್ನು ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಂಗಗಳ ನೃತ್ಯಕ್ಕೆ ಹೋಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಇದು ತ್ರಿಪಕ್ಷೀಯ ರಾಜ್ಯ ಆಡಳಿತದ ಆಂತರಿಕ ವಿಷಯ. ಪ್ರಸ್ತುತ ಬೆಳವಣಿಗೆಯನ್ನು ನಮ್ಮ ಪಕ್ಷ ಗನನಿಸುತ್ತಿದೆ ಎಂದು ಒತ್ತಿ ಹೇಳಿದ್ದಾರೆ.
ನಾವು ಬಯಲಾಗುತ್ತಿರುವ ನಾಟಕದ ಮೇಲೆ ಕಣ್ಣಿಟ್ಟಿದ್ದೇವೆ. ಮಹಾ ವಿಕಾಸ್ ಅಘಾಡಿ ಈ ವಿಷಯದ ಬಗ್ಗೆ ಚರ್ಚಿಸಲಿ. ಕೋತಿಗಳು ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಜಿಗಿಯುವಂತೆ ವರ್ತಿಸುತ್ತವೆ. ಹಾಗೆಯೇ ಇದೂ ಕೋತಿಗಳ ನೃತ್ಯದಂತೆ ಕಾಣುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಏಕನಾಥ್ ಶಿಂಧೆ ಸೇನೆ ಬಂಡಾಯದ ಸುನಾಮಿಯಿಂದ ತತ್ತರಿಸಿರುವ ಮಹಾರಾಷ್ಟ್ರ ಅಘಾಡಿ ಸರ್ಕಾರ ಪತನದಂಚು ತಲುಪಿದೆ. ಏನೆಲ್ಲಾ ಮಾಡಿದ್ರೂ ಬಂಡಾಯದ ಬಿಸಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಶಿವಸೇನೆ ತನ್ನ ಹುಟ್ಟುಗುಣ ಪ್ರದರ್ಶನಕ್ಕೆ ಮುಂದಾಗಿದೆ. ಪಕ್ಷಕ್ಕೆ ದ್ರೋಹ ಮಾಡಿದ ಶಾಸಕರ ವಿರುದ್ಧ ಬೀದಿ ಬಡಿದಾಟದ ಸುಳಿವು ಕೊಟ್ಟಿದೆ.