ಬೆಂಗಳೂರು : ಅಲ್ಲಿ ಬಂತು, ಇಲ್ಲಿ ಹೋಯ್ತು ಎಂಬಂತೆ, ಆಗಸ್ಟ್ ತಿಂಗಳಿಂದ ಇನ್ನೂರು ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಸೇರಿದಂತೆ 5 ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲಿರುವ ಕರ್ನಾಟಕದ ಜನರಿಗೆ ಈ ತಿಂಗಳಿಂದ ಬೇರೆ ಬೆಲೆ ಏರಿಕೆಗಳ ಬಿಸಿ ತಾಕಲಿದೆ.
ಆಗಸ್ಟ್ 1ರಿಂದ ಹಾಲು, ತರಕಾರಿ ಇತ್ಯಾದಿ ವಸ್ತುಗಳು ದುಬಾರಿಯಾಗಲಿವೆ. ಕೆಲವೊಂದು ವಲಯದ ಬೆಲೆ ಏರಿಕೆಯು ಬೇರೆ ಬೇರೆ ಕ್ಷೇತ್ರಗಳಲ್ಲಿ ಬೆಲೆ ಏರಿಕೆಗೆ ಪರೋಕ್ಷವಾಗಿ ಎಡೆ ಮಾಡಿಕೊಡುತ್ತದೆ. ಯಾವ್ಯಾವ ವಸ್ತುಗಳು ಮತ್ತು ಸೇವೆಗಳು ಕರ್ನಾಟಕದಲ್ಲಿ ಆಗಸ್ಟ್ 1ರಿಂದ ದುಬಾರಿಯಾಗಬಹುದು, ಇಲ್ಲಿದೆ ವಿವರ.
ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ನ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲು ನಿರ್ದರಿಸಿದೆ. ಆಗಸ್ಟ್ 1ರಿಂದ ನಂದಿನಿ ಹಾಲು ಲೀಟರ್ಗೆ 3 ರೂನಷ್ಟು ದುಬಾರಿ ಆಗಲಿದೆ. ಕೆಎಂಫ್ ಸಂಸ್ಥೆ 5 ರೂನಷ್ಟು ದರ ಹೆಚ್ಚಳ ಮಾಡುವ ಪ್ರಸ್ತಾಪ ಮುಂದಿಟ್ಟಿತ್ತು. ಸರ್ಕಾರ ಬೆಲೆ ಏರಿಕೆಯನ್ನು 3 ರುಪಾಯಿಗೆ ಇಳಿಸಿದೆ. ಈ ಬೆಲೆ ಏರಿಕೆಯ ಲಾಭವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ (ರೈತರು) ವರ್ಗಾಯಿಸುವುದಾಗಿ ಕೆಎಂಎಫ್ ಹೇಳಿದೆ.
ಟೊಮೆಟೋ ಬೆಲೆ ಏರಿದ್ದರಿಂದ ಕನ್ನಡಿಗರನ್ನು ಕಂಗಾಲಾಗಿರುವುದು ಹೌದು. ಪಕ್ಕದ ಕೋಲಾರದಲ್ಲಿ ಭರ್ಜರಿಯಾಗಿ ಟೊಮೆಟೋ ಬೆಳೆಯಲಾಗಿದ್ದರೂ ಬೆಂಗಳೂರಿನಲ್ಲಿ ಟೊಮೆಟೋ ಬೆಲೆ 200 ರೂವರೆಗೂ ಹೋಗಿತ್ತು. ಈಗಲೂ ಕೂಡ 150 ರೂ ಆಸುಪಾಸಿನಲ್ಲಿ ಟೊಮೆಟೋ ಬೆಲೆ ಇದೆ. ಹಸಿರು ಮೆಣಸಿನಕಾಯಿ, ಶುಂಠಿ, ಕ್ಯಾರಟ್, ಬೀನ್ಸ್, ಬಟಾಣಿ ಇತ್ಯಾದಿ ತರಕಾರಿಗಳ ಬೆಲೆಗಳೂ ಕೂಡ ಎರಡು ಪಟ್ಟು ಹೆಚ್ಚಾಗಿವೆ.