•ಡಯಟ್ ಕಾರಣ ನೆಚ್ಚಿನ ತಿನಿಸು ಐಸ್ಕ್ರೀಂ ತಿನ್ನಲು ಸಾಧ್ಯವಿಲ್ಲ ಎಂದಿದ್ದ ಸಿಂಧು
•ಪದಕ ಗೆದ್ದರೆ ಜೊತೆಯಾಗಿ ಐಸ್ಕ್ರೀಂ ತಿನ್ನೋಣ ಎಂದಿದ್ದ ಮೋದಿ
•ಕಂಚಿನ ಪದಕ ಗೆಲ್ಲೋ ಮೂಲಕ ಇದೀಗ ಮೋದಿ ಜೊತೆ ಐಸ್ಕ್ರೀಂ ತಿನ್ನಲು ರೆಡಿಯಾದ ಸಿಂಧು
ಟೋಕಿಯೋ ಒಲಿಂಪಿಕ್ಸ್ ಪ್ರತಿನಿಧಿಸುವ ಭಾರತದ ಕ್ರೀಡಾಪಟುಗಳನ್ನು ಹುರಿದುಂಬಿಸುವ ಸಲುವಾಗಿ ಪ್ರಧಾನಿ ನರೇಂದ್ರ ಟೋಕಿಯೋಗೆ ತೆರಳುವ ಮುನ್ನ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡಿದ್ದರು. ಕ್ರೀಡಾಪಟುಗಳ ಜೊತೆ ಸಂವಾದ ನಡೆಸಿದ ಮೋದಿ, ಆತಂಕ, ಒತ್ತಡವಿಲ್ಲದೆ ಉತ್ತಮ ಪ್ರದರ್ಶನ ನೀಡಲು ಸೂಚಿಸಿದ್ದರು. ಇದೇ ವೇಳೆ ಪಿವಿ ಸಿಂಧೂ ಬಳಿ ಡಯಟ್ ಕುರಿತು ಮಾಹಿತಿ ಪಡೆದಿದ್ದರು.
ಕಠಿಣ ಅಭ್ಯಾಸ, ಡಯಟ್ ಕಾರಣ ತಾನು ನೆಚ್ಚಿನ ಐಸ್ಕ್ರೀಂ ತಿನ್ನುತ್ತಿಲ್ಲ. ಐಸ್ಕ್ರೀಂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸಿಂಧು ಹೇಳಿದ್ದರು. ಈ ವೇಳೆ ಪ್ರಧಾನಿ ಪದಕ ಗೆದ್ದು ಬಂದಾಗ ನಾನು ಐಸ್ಕ್ರೀಂ ನೀಡುತ್ತೇನೆ. ಜೊತೆಯಾಗಿ ಐಸ್ಕ್ರೀಂ ಸೇವಿಸೋಣ ಎಂದು ಮೋದಿ ಮಾತು ನೀಡಿದ್ದರು.
ಸಿಂಧು ಕಂಚಿನ ಪದಕ ಗೆಲ್ಲುತ್ತಿದ್ದಂತೆ ಸಿಂಧು ತಂದೆ ಪಿವಿ ರಮಣಾ , ಮೋದಿ ಐಸ್ಕ್ರೀಂ ಮಾತನ್ನು ನೆನಪಿಸಿಕೊಂಡಿದ್ದಾರೆ. ಪದಕ ಗೆದ್ದ ಸಿಂಧು ಖಂಡಿತವಾಗಿಯೂ ಪ್ರಧಾನಿ ಜೊತೆ ಐಸ್ಕ್ರೀಂ ತಿನ್ನಲಿದ್ದಾರೆ ಎಂದಿದ್ದಾರೆ.
ಸಿಂಧು ಕಠಿಣ ಪರಿಶ್ರಮ, ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ. ಕೋಚ್ ಪುಲ್ಲೇಲ ಗೋಪಿಚಂದ್ ನಿರಂತರ ಮಾರ್ಗದರ್ಶನ, ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವರು, ಕ್ರೀಡಾ ಇಲಾಖೆ ಸೇರಿದಂತೆ ಎಲ್ಲರ ಸಹಕಾರವಿದೆ ಎಂದು ಸಿಂಧು ತಂದೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸಿಂಧು ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ಈ ಪದಕ ನೆರವಾಗಲಿದೆ ಎಂದು ರಮಣ ಹೇಳಿದ್ದಾರೆ.