ಬೆಂಗಳೂರು: ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಎಚ್ ಡಿ ಕುಮಾರಸ್ವಾಮಿಗೆ ಆರಂಭದಲ್ಲೇ ವರುಣನ ಸ್ವಾಗತ ಸಿಕ್ಕಿದೆ.
ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಭಾರೀ ಮೋಡ ಕವಿದ ವಾತಾವರಣ ಜತೆಗೆ ಭಾರೀ ಮಳೆಯಾಗುತ್ತಿದ್ದು, ವಿಧಾನಸೌಧದ ಮುಂಭಾಗ ಹಾಕಲಾಗಿರುವ ವೇದಿಕೆ, ಆಸನಗಳು ಅಸ್ತವ್ಯಸ್ತಗೊಂಡಿದೆ.
ಕುಮಾರಸ್ವಾಮಿ ಸಿಎಂ ಆಗುವುದನ್ನು ನೋಡಲು ನೆರೆದಿದ್ದ ಜನ ಕುರ್ಚಿಗಳನ್ನೇ ಎತ್ತಿ ಮಳೆಯಿಂದ ರಕ್ಷಣೆ ಪಡೆಯುತ್ತಿದ್ದಾರೆ. ಇನ್ನೊಂದೆಡೆ ಗಣ್ಯರು ಕೂರಬೇಕಾಗಿದ್ದ ಆಸನವೂ ಮಳೆಯಿಂದಾಗಿ ಒದ್ದೆಯಾಗಿದೆ. ಹಾಗಿದ್ದರೂ ಇಲ್ಲಿಯೇ ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವುದರಿಂದ ವೇದಿಕೆಗೆ ಸಣ್ಣದಾದ ಚಪ್ಪರ ಹಾಕಲಾಗಿದೆ.
ಮಳೆ ಬಂದಿರುವ ಬಗ್ಗೆ ಜೆಡಿಎಸ್ ಅಭಿಮಾನಿಗಳು, ವಿರೋಧಿಗಳಲ್ಲಿ ಚರ್ಚೆಯೇ ಶುರುವಾಗಿದೆ. ಮಳೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಮೂಲಕ ಇದೊಂದು ಅಪವಿತ್ರ ಮೈತ್ರಿ ಎಂದು ದೇವರೇ ಸಂಕೇತ ನೀಡಿದ್ದಾನೆಂದು ಬಿಜೆಪಿ ಅಭಿಮಾನಿಗಳು ಹೇಳುತ್ತಿದ್ದರೆ, ಇನ್ನೊಂದೆಡೆ ರಾಜ್ಯ ದ ವಿವಿಧೆಡೆಯಿಂದ ಬಂದಿರುವ ಕುಮಾರಸ್ವಾಮಿ ಅಭಿಮಾನಿಗಳು ಮಳೆ ಶುಭ ಲಕ್ಷಣ ಎಂದು ಬಣ್ಣಿಸುತ್ತಿದ್ದಾರೆ. ಅಂತೂ ಮಳೆಯಿಂದಾಗಿ ಕಾರ್ಯಕ್ರಮಕ್ಕೆ ಕೊಂಚ ಅಡಚಣೆಯಾಗಿರುವುದಂತೂ ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.