ಬೆಂಗಳೂರು : ಬೆಂಗಳೂರಿನಲ್ಲಿ 1 ಕೆಜಿ ಟೊಮೊಟೊ ಬೆಲೆ ಒಂದು ಲೀಟರ್ ಪೆಟ್ರೋಲ್ ಗೆ ಸಮವಾಗಿದೆ.
ಅಂದರೆ ಟೊಮೊಟೊ ಬೆಲೆ 1 ಕೆಜಿ ಗೆ 100 ರು ಆಗಿದೆ, ಈಗಾಗಿ ಟೊಮೊಟೊ ಸದ್ಯಕ್ಕೆ ಮನೆಯಲ್ಲಿನ ಆಸ್ತಿಯಾಗಿದ್ದು, ವಿವೇಚನಾಯುಕ್ತವಾಗಿ ಬಳಕೆ ಮಾಡುವಂತಾಗಿದೆ.
ಕಳೆದ ಕೆಲವು ವಾರಗಳಿಂದ ಟೊಮೆಟೊ ಬೆಲೆ ಏರುಗತಿಯಲ್ಲಿದೆ, ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕಿಲೋ ಬೆಲೆ 98-100 ರೂ. ಮತ್ತು ಹಾಪ್ಕಾಮ್ಸ್ ಮಳಿಗೆಗಳಲ್ಲಿ 93 ರೂ. ಆಗಿದೆ.
ನವೆಂಬರ್ ನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಟೊಮೊಟೊ ಬೆಲೆ ಗಗನಕ್ಕೇರಿದೆ, ರಾಜ್ಯದ ಹಲವು ಭಾಗಗಳಲ್ಲಿ ಬೆಳೆದಿದ್ದ ಟೊಮೊಟೊ ಮಳೆಯಿಂದಾಗಿ ನಾಶವಾಗಿದೆ, ಇದರ ಜೊತೆಗೆ ಮಳೆಯಿಂದಾಗಿ ಟೊಮೊಟೊ ಗುಣಮಟ್ಟ ಕೂಡ ಹಾಳಾಗಿದೆ. ಹೆಚ್ಚು ಬೆಲೆ ಕೊಟ್ಟು ಖರೀದಿಸಿದರೂ ಟೊಮೊಟೋ ಒಳಗೆ ಕೊಳೆತು ಹುಳು ಬರುತ್ತಿದ್ದು, ವಿಧಿಯಿಲ್ಲದೇ ಎಸೆಯುವ ಪರಿಸ್ಥಿತಿ ಬಂದಿದೆ.
ಮಳೆಯಿಂದಾಗಿ ಬೆಲೆ ಹೆಚ್ಚಾಗಿದೆ. ಹಾಪ್ಕಾಮ್ಸ್ ಮಳಿಗೆಗಳಲ್ಲಿ ಟೊಮೆಟೊ ಬೆಲೆ 93 ರೂ., ಇದೆ . ಆದರೆ ಮಳೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಹೆಚ್ಚುತ್ತದೆ ಎಂದು ಹಾಪ್ಕಾಮ್ಸ್ ಸಂಗ್ರಹಣೆ ಮತ್ತು ಮಾರುಕಟ್ಟೆ ವ್ಯವಸ್ಥಾಪಕ ಎನ್.ಜಯಪ್ರಕಾಶ್ ಹೇಳಿದ್ದಾರೆ.
ಬೆಂಗಳೂರಿನ ಕೆಲವು ಭಾಗಗಳಲ್ಲಿ, ಉತ್ತಮ ಗುಣಮಟ್ಟದ ಟೊಮೆಟೊಗಳನ್ನು ರಸ್ತೆ ಬದಿಗಳಲ್ಲಿಯೂ ಸಹ 100 ರೂ.ಗೆ ಮಾರಾಟ ಮಾಡಲಾಗುತ್ತದೆ. ಮಾಲ್ ಗಳಲ್ಲಿ ಕೆಜಿ 100 ರು. ಗೆ ಮಾರಾಟ ಮಾಡಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಟೊಮೊಟೊ ದರ ವಿಭಿನ್ನವಾಗಿದೆ.
ಅಗತ್ಯ ಅಡುಗೆ ಸಾಮಾಗ್ರಿಗಳ ಬೆಲೆ ಏರಿಕೆಯಿಂದ ವಾರದ ಬಜೆಟ್ ನಲ್ಲಿ ಏರುಪೇರಾಗುತ್ತಿದ್ದು, ಟೊಮೊಟೊ ಮಾತ್ರವಲ್ಲ, ಎಲ್ಲ ವಸ್ತುಗಳ ಬೆಲೆಯೂ ಜಾಸ್ತಿಯಾಗುತ್ತಿದ್ದು, ಸರಿಯಾಗಿ ಊಟ ಮಾಡಲು ಕಷ್ಟವಾಗುತ್ತಿದೆ ಎಂದು ಸಾಕ್ಷಿ ಎಂಬ ಗೃಹಿಣಿ ಅಭಿಪ್ರಾಯ ಪಟ್ಟಿದ್ದಾರೆ.
ತರಕಾರಿಗಳು, ಬೇಳೆಕಾಳುಗಳು ಮತ್ತು ಎಲ್ಪಿಜಿ ಬೆಲೆ ಏರಿಕೆಯಿಂದಾಗಿ ರೆಸ್ಟೋರೆಂಟ್ಗಳಲ್ಲಿ ಬೆಲೆ ಏರಿಕೆ ಮಾಡಲು ಹೋಟೆಲ್ ಮಾಲೀಕರ ಸಂಘಗಳು ಚರ್ಚೆ ನಡೆಸುತ್ತಿವೆ. ಚರ್ಚೆಯ ನಂತರ ಅವರಲ್ಲಿ ಹೆಚ್ಚಿನವರು ಶೇಕಡಾ 5-15 ರಷ್ಟು ದರವನ್ನು ಹೆಚ್ಚಿಸಿದ್ದಾರೆ.