ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಮತ್ತೊಂದು ಸುತ್ತಿನ ಫೈಟ್ ಶುರುವಾಗುತ್ತಾ?
ಗುರುವಾರ, 2 ಆಗಸ್ಟ್ 2018 (09:26 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಮತ್ತೊಂದು ಸುತ್ತಿನ ಸಂಪುಟ ಪುನರಾಚನೆ, ಲೋಕಸಭೆ ಚುನಾವಣೆ ಪ್ರಕ್ರಿಯೆ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆಗಳಿಗೆ ಸಿದ್ಧವಾಗುತ್ತಿದ್ದಂತೆ ಮತ್ತೊಂದು ಸುತ್ತಿನ ಅತೃಪ್ತಿಯ ಹೊಗೆಯೂ ಏಳುವ ಲಕ್ಷಣ ಕಾಣುತ್ತಿದೆ.
ಒಂದೆಡೆ ಉಸ್ತುವಾರಿ ಖಾತೆ ಹಂಚಿಕೆ ನಡೆಯುತ್ತಿದ್ದರೆ, ಇನ್ನೊಂದೆಡೆ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಕಣಕ್ಕಿಳಿಸಿ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಯೋಜನೆ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ.
ಇದು ಸಿದ್ದರಾಮಯ್ಯ ಆಪ್ತರ ಅಸಮಾಧಾನಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿದರೆ ರಾಜ್ಯದಲ್ಲಿ ತಮ್ಮ ಪ್ರಭಾವ ಕಡಿಮೆಯಾಗಬಹುದು ಎಂಬ ಆತಂಕ ಆಪ್ತರಲ್ಲಿದೆ.
ಇನ್ನೊಂದೆಡೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಸಿದ್ದರಾಮಯ್ಯ ಆಪ್ತರು ಉಸ್ತುವಾರಿ ಖಾತೆಯಾದರೂ ಸಿಗಬಹುದು ಎಂಬ ಕನಸಿನಲ್ಲಿದ್ದಾರೆ. ಒಂದು ವೇಳೆ ತಮಗೆ ಬೇಕಾದಂತೆ ಉಸ್ತುವಾರಿ ಖಾತೆಯೂ ಸಿಗದೇ ಇದ್ದಾಗ ಅತೃಪ್ತಿ ಮತ್ತಷ್ಟು ಜೋರಾಗುವ ಸಾಧ್ಯತೆಯಿದೆ. ಇದರ ಜತೆಗೆ ಆಷಾಢ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆಯೂ ನಡೆಯಲಿದ್ದು, ಮತ್ತೊಂದು ಸುತ್ತಿನ ಹಗ್ಗ ಜಗ್ಗಾಟಕ್ಕೆ ವೇದಿಕೆ ಸಿದ್ಧವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.