ನವದೆಹಲಿ : ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಗಣನೀಯ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೇಶದಲ್ಲಿ ಕಳೆದ ವರ್ಷ 125 ಹುಲಿಗಳು ಸಾವನ್ನಪ್ಪಿವೆ. ಅದೇ ರೀತಿ 2020ರಲ್ಲಿ 106 ಹುಲಿಗಳು ಸಾವನ್ನಪ್ಪಿದ್ದವು ಎಂದು ಸರ್ಕಾರ ಗುರುವಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ 2019ರಲ್ಲಿ 106 ಹುಲಿಗಳು ಸಾವನ್ನಪ್ಪಿದ್ದರೆ, 2021ರಲ್ಲಿ ಹುಲಿಗಳ ಸಾವಿನ ಸಂಖ್ಯೆ 127ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ದೇಶದಲ್ಲಿ ಅತೀ ಹೆಚ್ಚು ಹುಲಿಗಳ ಸಾವು ಮಧ್ಯಪ್ರದೇಶದಲ್ಲಿ ವರದಿಯಾಗಿದೆ. 42 ಮಧ್ಯಪ್ರದೇಶ, 27 ಮಹಾರಾಷ್ಟ್ರ, 15 ಕರ್ನಾಟಕ, 9 ಹುಲಿಗಳು ಉತ್ತರ ಪ್ರದೇಶದಲ್ಲಿ ಸಾವನ್ನಪ್ಪಿವೆ ಎಂದು ತಿಳಿಸಿದರು.
ಪ್ರಾಣಿ-ಮಾನವ ಸಂಘರ್ಷಗಳನ್ನು ನಿರ್ವಹಿಸಲು ಸರ್ಕಾರ ಪ್ರಯತ್ನ ಪಡುತ್ತಿದೆ. ಹುಲಿಗಳ ಬೇಟೆಯ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಹುಲಿಗಳ ಸಾವು ಹೆಚ್ಚಾಗಿದ್ದರೂ ಅವುಗಳ ಸಂಖ್ಯೆ ದ್ವಿಗುಣಗೊಂಡಿದೆ. 2014ರಲ್ಲಿ 2,226 ಹುಲಿಗಳು ಇದ್ದು, ಇತ್ತೀಚೆಗೆ ಎಂದರೆ 2018ರಲ್ಲಿ ಹುಲಿಗಳ ಸಂಖ್ಯೆ 2,967 ರಷ್ಟು ಇವೆ. ವಿಶ್ವದಲ್ಲೇ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ಭಾರತವೇ ಆಗಿದೆ. ಜಾಗತಿಕ ಹುಲಿ ಗಣತಿ ಪ್ರಕಾರ ಶೇ.75 ಕ್ಕಿಂತಲೂ ಹೆಚ್ಚು ಪಾಲು ಭಾರತದಲ್ಲಿಯೇ ಇದೆ ಎಂದು ಯಾದವ್ ತಿಳಿಸಿದರು.