'ಲಕ್ಕಿ ಬಾಂಬೂ' ಎಂದು ಕರೆಯಲ್ಪಡುವ 'ಭಾಗ್ಯ ಬಿದಿರು' ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ಫೆಂಗ್ಶುಯಿ ಹೇಳುತ್ತದೆ.
ಬಾಂಬೂ ಎಂದು ಕರೆಯಲ್ಪಟ್ಟರೂ ಇದು ಬಿದಿರಿನ ವರ್ಗಕ್ಕೆ ಸೇರಿದ ಸಸ್ಯವಲ್ಲ. ನೀರಿನಲ್ಲಿರಿಸಿ ಬೆಳೆಸಬಹುದಾದ ಈ ಸಸ್ಯವು ಮನೆಗೆ ಐಶ್ವರ್ಯ ಮತ್ತು ಆರೋಗ್ಯವನ್ನು ಪ್ರಧಾನ ಮಾಡುತ್ತದೆ ಮತ್ತು ಇದನ್ನು ಯೋಗ್ಯ ದಿಕ್ಕಿನಲ್ಲಿರಿಸುವುದರಿಂದ ಅಭಿವೃದ್ಧಿ ಸುನಿಶ್ಚಿತ ಎಂದು ಫೆಂಗ್ಶುಯಿ ವಿಶ್ವಾಸ.
ಉತ್ತಮ ಆರೋಗ್ಯಕ್ಕಾಗಿ ಇದನ್ನು ಪೂರ್ವ ದಿಕ್ಕಿನಲ್ಲಿಯೂ, ಧನಲಬ್ಧಿಗಾಗಿ ಆಗ್ನೇಯ ದಿಕ್ಕಿನಲ್ಲಿಯೂ ಇರಿಸುವುದು ಸೂಕ್ತವಾಗಿದೆ. ಆ ಸಸ್ಯದ ಕಾಂಡಗಳನ್ನು ಕೆಂಪು ರಿಬ್ಬನ್ನಿಂದ ಸುತ್ತಿದರೆ ಅದು ಚೈತನ್ಯವನ್ನು ಉತ್ಪಾದಿಸುತ್ತದೆ ಎಂದು ನಂಬಲಾಗುತ್ತದೆ. ಕಾಂಡಗಳನ್ನಿರಿಸುವಾಗ ಅವುಗಳ ಸಂಖ್ಯೆಗಳಲ್ಲಿ ಜಾಗರೂಕರಾಗಿರಬೇಕು.
1. ಮೂರು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಸಂತೋಷ ಪ್ರಧಾನವಾಗುತ್ತದೆ.
2. ಐದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸಿದರೆ ಧನಲಾಭವಾಗುತ್ತದೆ.
3. ಇಪ್ಪತ್ತೊಂದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸುವುದರಿಂದ ಸರ್ವೈಶ್ವರ್ಯಗಳು ಬಾಗಿಲಿಗೆ ಬಂದು ಸೇರುವುವು.
4. ನಾಲ್ಕು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಮರಣ ಎಂಬ ಪ್ರತೀತಿ ಇದೆ. ಅದು ಹೇಗೆಂದರೆ Four- ಫೋರ್ ಎಂಬ ಪದಕ್ಕೆ ಸದೃಶವಾಗಿರುವ ಪದವು ಚೈನಾದಲ್ಲಿ ಮರಣವೆಂಬ ಅರ್ಥವನ್ನು ಹೊಂದಿದೆ. ಆದುದರಿಂದ ನಾಲ್ಕು ಕಾಂಡಗಳನ್ನು ಒಟ್ಟಿಗೆ ಎಂದೂ ಬಳಸಬಾರದು.
ಬೆಳೆಸುವ ವಿಧಾನ
ಇದನ್ನಿರಿಸುವ ನೀರಿನಲ್ಲಿ ಕ್ಲೋರಿನ್ ಅಂಶ ಇರದಂತೆ ಜಾಗ್ರತೆವಹಿಸಬೇಕು ಮತ್ತು ಅಲ್ಪ ಸೂರ್ಯಪ್ರಕಾಶ ತಾಗುವಂತಿರಬೇಕು. ಅತಿ ಉಷ್ಣಾಂಶವಿದ್ದರೆ ಇವುಗಳು ಹಳದಿ ಬಣ್ಣಕ್ಕ ತಿರುಗುತ್ತವೆ ಆದುದರಿಂದ ಕೋಣೆಯ ಉಷ್ಣತೆ ಮಿತವಾಗಿರಲಿ. ಎಳೆ ಕಾಂಡದ ಕತ್ತರಿಸಿದ ಭಾಗಗಳನ್ನು ನೀರಿನಲ್ಲಿರಿಸಿದರೆ ಅವುಗಳು ಕ್ರಮೇಣ ಬೆಳೆಯಲಾರಂಭಿಸುತ್ತವೆ. ಬುಡದಲ್ಲಿ ನೀರು ಅಧಿಕವಾಗಿ ತಂಗಿನಿಲ್ಲದಂತೆ ಜಾಗ್ರತೆವಹಿಸಿದರೆ ಇವುಗಳು ದಟ್ಟವಾಗಿ ಬೆಳೆಯುವುವು.