ಗಣರಾಜ್ಯೋತ್ಸವದಂದು ಖಂಡಗ್ರಾಸ ಸೂರ್ಯಗ್ರಹಣ

ಈ ಬಾರಿಯ ಗಣರಾಜ್ಯೋತ್ಸವ ದಿನದಂದು ಖಗೋಳ ಕುತೂಹಲಿಗಳಿಗೊಂದು ಅದ್ಭುತ ಅವಕಾಶ ಕಾದಿದೆ. ಅಂದು ಚಂದ್ರನು ಸೂರ್ಯನಿಗೆ ಅಡ್ಡಬರುವ ಮೂಲಕ ಪಾರ್ಶ್ವಸೂರ್ಯಗ್ರಹಣ ಸಂಭವಿಸಲಿದೆ.

ದೇಶದ ದಕ್ಷಿಣ ಹಾಗೂ ಈಶಾನ್ಯ ಮತ್ತು ಪೂರ್ವ ಭಾಗಗಳ ಜನತೆ ಈ ಖಂಡಗ್ರಾಸ ಸೂರ್ಯಗ್ರಹಣ ವೀಕ್ಷಿಸಲು ಅವಕಾಶ ಪಡೆದಿದ್ದಾರೆ. ಅದೇ ರೀತಿ ಆಫ್ರಿಕಾದ ದಕ್ಷಿಣ ಭಾಗದಲ್ಲಿ, ಅಂಟಾರ್ಕಟಿಕಾ, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲೂ ಸೂರ್ಯನಿಗೆ ಚಂದ್ರ ಅಡ್ಡಬರುವ ತಾರಾಮಂಡಲದ ಕುತೂಹಲದ ಪ್ರಕ್ರಿಯೆ ಗೋಚರಿಸಲಿದೆ.

ತನ್ನ ಅಂಡಾಕಾರದ ಕಕ್ಷೆಯಲ್ಲಿ ತಿರುಗುತ್ತಿರುವ ಚಂದ್ರನು ಭೂಮಿಯಿಂದ ದೂರಕ್ಕೆ ಹೋದಾಗ ಉಂಗುರಾಕಾರದಲ್ಲಿ ಗ್ರಹಣ ಗೋಚರಿಸುತ್ತದೆ. ಈ ರೀತಿಯ ಚಲನೆಯಿಂದಾಗಿ ಸೂರ್ಯನ ಪೂರ್ಣ ಗ್ರಹಣ ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಸೈನ್ಸ್ ಪಾಪ್ಯುಲರೈಸೇಶನ್ ಅಸೋಸಿಯೇಶನ್ ಆಫ್ ಕಮ್ಯುನಿಕೇಟರ್ಸ್ ಆಂಡ್ ಎಜುಕೇಟರ್ಸ್ (ಸ್ಪೇಸ್) ಅಧ್ಯಕ್ಷ ಸಿ.ಬಿ.ದೇವಗಣ್.

ಸೂರ್ಯ-ಚಂದ್ರ-ಭೂಮಿಯ ಸಾಲು ನಿಲ್ಲುವಿಕೆಯು ಸಮರ್ಪಕವಾಗಿದ್ದರೂ, ಚಂದ್ರನು ತನ್ನ ದೂರದ ಬಿಂದುವಿನಲ್ಲಿ ಸೂರ್ಯನಿಗಿಂತ ಸುತ್ತಳತೆಯಲ್ಲಿ ಸ್ವಲ್ಪ ಸಣ್ಣಗೆ ಕಾಣಿಸುತ್ತಾನೆ ಮತ್ತು ತೆಳುವಾದ ಉಂಗುರಾಕಾರದಲ್ಲಿ ಸೂರ್ಯನ ಬೆಳಕು, ಚಂದ್ರನ ಕಪ್ಪಗಿರುವ ಛಾಯಾ ರೇಖಾಕೃತಿಯ ಸುತ್ತ ಗೋಚರಿಸುತ್ತದೆ.

ಭಾರತದಲ್ಲಿ ಈ ಸೂರ್ಯ ಗ್ರಹಣ ವೀಕ್ಷಿಸಲು ಅತ್ಯುತ್ತಮ ಸಮಯವೆಂದರೆ ಅಪರಾಹ್ನ 3ರಿಂದ 3.30. ಇತರ ರಾಷ್ಟ್ರಗಳಲ್ಲಿ ಭಾರತೀಯ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಗೋಚರಿಸಲು ಆರಂಭಿಸುವ ಗ್ರಹಣವು, ಮಧ್ಯಾಹ್ನ 1.26ಕ್ಕೆ ಪೂರ್ಣಗೊಳ್ಳಲಿದ್ದು, 4.30ಕ್ಕೆ ಮುಕ್ತಾಯವಾಗಲಿದೆ. ಬರಿಗಣ್ಣಿನಿಂದ ಸೂರ್ಯಗ್ರಹಣ ನೋಡಬಾರದು ಎಂದು ದೇವಗಣ್ ಎಚ್ಚರಿಸುವುದನ್ನು ಮರೆಯಲಿಲ್ಲ.

ಸೂರ್ಯನಿಂದ ಹೊರಸೂಸುವ ಹಾನಿಕಾರಕ ನೇರಳಾತೀತ ವಿಕಿರಣಗಳನ್ನು ತಡೆಯುವ ನಿಟ್ಟಿನಲ್ಲಿ ಸನ್ ಗ್ಲಾಸ್‌ಗಳು ಕೂಡ ಸುರಕ್ಷಿತವಲ್ಲ. ಸೂರ್ಯನುಂಗುರವನ್ನು ನೋಡಲು ವಿಶೇಷವಾಗಿ ವಿನ್ಯಾಸಪಡಿಸಲಾದ ಪ್ರಮಾಣೀಕೃತ ಸೋಲಾರ್ ಫಿಲ್ಟರ್‌ಗಳನ್ನೇ ಉಪಯೋಗಿಸಬೇಕು ಎಂದು ಅವರು ಹೇಳಿದ್ದಾರೆ.

ಫ್ಲಾಪಿ ಡಿಸ್ಕ್, ಸಿಡಿ ಅಥವಾ ಕರ್ರಗಿರುವ ಸ್ಲೈಡ್ ಫಿಲ್ಮ್‌ಗಳನ್ನು ಬಳಸಿ ನೋಡುವುದು ಕೂಡ ಕಣ್ಣಿಗೆ ಅಪಾಯಕಾರಿಯಾದೀತು ಎಂದವರು ಎಚ್ಚರಿಸಿದ್ದಾರೆ. ಕಳೆದ ವರ್ಷ ಖಂಡಗ್ರಾಸ ಸೂರ್ಯಗ್ರಹಣವಾಗಿದ್ದು ಆಗಸ್ಟ್ 1ರಂದು.

ವೆಬ್ದುನಿಯಾವನ್ನು ಓದಿ