ನಿಧಿ ಕನ್ನಡ ಸಿನಿಮಾ ನೋಡುತ್ತಾ ನಿದ್ದೆ ಮಾಡಿದ್ರಂತೆ!

PR
ಕನ್ನಡದ ನನ್ನ ಸಮಕಾಲೀನ ನಟ/ನಟಿಯೊಬ್ಬಳ ಸಿನಿಮಾ ನೋಡಲು ಶುಕ್ರವಾರ ನಾನು ಬೆಂಗಳೂರಿನಲ್ಲಿ ಚಿತ್ರಮಂದಿರಕ್ಕೆ ಹೋಗಿದ್ದೆ. ಸಿನಿಮಾ ನೋಡುತ್ತಿದ್ದಂತೆ ನಿದ್ದೆ ಬಂದಿತ್ತು. ಕೊನೆಗೆ ಥಿಯೇಟರಿನಿಂದ ಹೊರಗೆ ಬಂದೆ -- ಹೀಗೆಂದು ಹೇಳಿರುವುದು ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಾವು ಕನ್ನಡತಿಯರು, ನಮಗೆ ನಮ್ಮದೇ ನೆಲದಲ್ಲಿ ಅವಕಾಶ ಸಿಗುತ್ತಿಲ್ಲ ಅಂತ ಗಂಟಲು ಹರಿಯುವಂತೆ ಕಂಗ್ಲೀಷಿನಲ್ಲಿ ಮಾತನಾಡುವ ನಾಯಕಿಯರಿಗೆ ನಮ್ಮಲ್ಲೇನೂ ಕೊರತೆಯಿಲ್ಲ. ಅಸಲಿಗೆ ಅವರು ಕನ್ನಡವನ್ನು ತಮ್ಮ ನಾಲಗೆಯ ತುದಿಗೆ ತರುವುದೇ ಚಿತ್ರರಂಗಕ್ಕೆ ಬಂದ ಮೇಲೆ. ಪರಭಾಷೆಯ ಚಿತ್ರಗಳನ್ನು ಬಿಟ್ಟರೆ ಕರುನಾಡಿನ ಸಿನಿಮಾಗಳನ್ನು ನೋಡೇ ಇರುವುದಿಲ್ಲ. ನಿಧಿ ಸುಬ್ಬಯ್ಯ ಅದೇಕ್ಯಾಟಗರಿಗೆ ಸೇರಿದವರು ಹೌದೋ ಅಲ್ಲವೋ ಎನ್ನುವುದು ಬೇರೆ ಮಾತು, ಆದರೆ ಇಂತಹ 24 ಕ್ಯಾರೆಟ್ ಕನ್ನಡತಿಯರು ಅನೇಕರಿರುವುದರಿಂದ ಈ ಮಾತು ಇಲ್ಲಿ ಪ್ರಸ್ತುತ.

ಇನ್ನು ನಿಧಿ ಯಾವ ಸಿನಿಮಾ ನೋಡಲು ಹೋಗಿರುವುದು ಅನ್ನೋದು ಪ್ರಶ್ನೆ. ಈ ಪ್ರಶ್ನೆಗೆ ಅವರು ಉತ್ತರಿಸಿಲ್ಲ. ಸಿನಿಮಾದ ಹೆಸರು ಯಾವುದೆಂದು ಹೇಳಲು ಇಚ್ಛಿಸುವುದಿಲ್ಲ ಎಂದಿದ್ದಾರೆ. ಹಾಗಾದ್ರೆ ಆಕೆಯನ್ನು ಗೊರಕೆ ಹೊಡೆಸಿದ, ಚಿತ್ರಮಂದಿರದಿಂದ ಓಡುವಂತೆ ಮಾಡಿದ ಸಿನಿಮಾ ಯಾವುದು?

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್, ದೀಪಾ ಸನ್ನಿಧಿ ಮತ್ತು ಐಂದ್ರಿತಾ ರೇ ಅವರ 'ಪರಮಾತ್ಮ'ನಾ? ನಿಧಿ ಹಾಗೆಂದು ಹೇಳಿಲ್ಲ.

ವಾಸ್ತವದಲ್ಲಿ ದಸರೆಗೆಂದು ನಿಧಿ ಮಡಿಕೇರಿಗೆ ಹೋಗಿದ್ದವರು ಬೆಂಗಳೂರಿಗೆ ವಾಪಸ್ಸಾಗಿದ್ದು ಶುಕ್ರವಾರ ಬೆಳಗ್ಗೆ. ಬಂದವರೇ ಕಂಠೀರವ ಸ್ಟುಡಿಯೋಗೆ ತೆರಳಿ, 'ಅಣ್ಣಾ ಬಾಂಡ್' ಮುಹೂರ್ತ ಮುಗಿಸಿಕೊಂಡಿದ್ದಾರೆ. ನಂತರವಷ್ಟೇ ಆಕೆ ಚಿತ್ರಮಂದಿರಕ್ಕೆ ಹೋಗಿರುವುದು. ಊರಿಂದ ಬಂದ ದಿನವೇ ಚಿತ್ರಮಂದಿರಕ್ಕೆ ಹೋಗಬೇಕೆಂದರೆ, ಅದು ಬಹುನಿರೀಕ್ಷಿತ ಚಿತ್ರವೇ ಆಗಿರುತ್ತದೆ ಅನ್ನೋದು ಸಾಮಾನ್ಯ ಸಂಗತಿ. ಹಾಗಿದ್ರೆ ನಿಧಿ ನೋಡಿದ ಸಿನಿಮಾ ಯೋಗರಾಜ್ ಭಟ್ಟರ 'ಪರಮಾತ್ಮ'ನಾ? ಇದಕ್ಕೆ ಪುಷ್ಠಿ ನೀಡೋದು, ಪರಮಾತ್ಮ ಚಿತ್ರವನ್ನು ವಿಮರ್ಶಕರು ಲಘುವಾಗಿ ಟೀಕಿಸಿರುವುದು.

ಪರಮಾತ್ಮ ಬಿಟ್ಟರೆ ನಿಧಿ ನೋಡಿರಬಹುದಾದ ಸಿನಿಮಾಗಳಿರುವುದು ಕೆಲವೇ ಕೆಲವು. ಕಳೆದ ವಾರ ಬಿಡುಗಡೆಯಾದ ದರ್ಶನ್ ಅಭಿನಯದ ಸಾರಥಿ ಇದರಲ್ಲಿ ಪ್ರಮುಖವಾದುದು. ಆದರೆ ಇದು ಯಾವ ವಿಮರ್ಶಕರಿಂದಲೂ ಅಷ್ಟಾಗಿ ಟೀಕೆಯನ್ನು ಎದುರಿಸದ ಸಿನಿಮಾ. ಹಾಗಾಗಿ ಈ ಚಿತ್ರ ನೋಡಿದಲ್ಲಿ ನಿಧಿ ನಿದ್ದೆ ಮಾಡುವ ಸಾಧ್ಯತೆ ಕಡಿಮೆ.

ಉಳಿದಂತೆ ಚಿತ್ರಮಂದಿರಗಳಲ್ಲಿರುವ ಇತ್ತೀಚಿನ ಇತರ ಪ್ರಮುಖ ಚಿತ್ರಗಳೆಂದರೆ, ಅಮೂಲ್ಯಾರ ಮನಸಾಲಜಿ, ಕೋಮಲ್‌ರ ಮರ್ಯಾದೆ ರಾಮಣ್ಣ, ಬಹುತಾರಾಗಣದ ಕಳ್ಳ ಮಳ್ಳ ಸುಳ್ಳ. ಇದರಲ್ಲಿ ಮನಸಾಲಜಿ ಬಿಟ್ಟರೆ, ಉಳಿದೆರಡೂ ಚಿತ್ರಗಳು ಮೆಚ್ಚುಗೆ ಗಳಿಸಿವೆ. ಅದರಲ್ಲೂ ಕಳ್ಳ ಮಳ್ಳ ಸುಳ್ಳ ನಗುವಿನ ಅಲೆಯನ್ನು ಎಬ್ಬಿಸಿ ಹಿಟ್ ಎನಿಸಿಕೊಂಡಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೋಗಯ್ಯ, ಲೋಕವೇ ಹೇಳಿದ ಮಾತಿದು, 90, ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಚಿತ್ರಗಳೂ ಥಿಯೇಟರುಗಳಲ್ಲಿವೆ.

ಹೇಳಿಕೆ ತೀವ್ರ ವಿವಾದಕ್ಕೀಡಾಗಬಹುದೆಂದ ನಿಟ್ಟಿನಲ್ಲಿ ನಿಧಿ ಯಾವ ಚಿತ್ರ ಎಂಬುದನ್ನು ಬಹಿರಂಗಪಡಿಸಿಲ್ಲ. ಇದು ಅವರ ವೈಯಕ್ತಿಕ ಅಭಿಪ್ರಾಯ. ಆದರೂ ಕನ್ನಡ ಚಿತ್ರವೊಂದರ ಬಗ್ಗೆ ಕನ್ನಡದ ನಟಿಯಾಗಿದ್ದುಕೊಂಡು ಇಂತಹ ಹೇಳಿಕೆ ನೀಡಿರುವುದು ಎಷ್ಟು ಸಮಂಜಸ ಅನ್ನೋದು ನಿಧಿಯಿಂದ ಉತ್ತರ ಸಿಗದೇ ಇರುವ ಪ್ರಶ್ನೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ