ಕ್ರೇಜಿಸ್ಟಾರ್-ಮಂಜು ಏಟು-ಎದಿರೇಟು; ಯಾರು ವಿನ್?

PR
ಕಲಾವಿದರು ಪ್ರಚಾರಕ್ಕೆ ಬರುತ್ತಿಲ್ಲ ಅನ್ನೋ ಚಿತ್ರ ನಿರ್ಮಾಪಕರ ಅಸಮಾಧಾನ ಇಂದು ನಿನ್ನೆಯದಲ್ಲ. ಲಕ್ಕಿ ಸ್ಟಾರ್ ರಮ್ಯಾ ವಿರುದ್ಧವೇ ಗಣೇಶ್ ಎಂಬ ನಿರ್ಮಾಪಕ ಮುಗಿ ಬಿದ್ದಿರಲಿಲ್ಲವೇ? ಆದರೆ ನಾಯಕರ ವಿರುದ್ಧ ಹೀಗೆ ಮಾತನಾಡಿದವರು ಅಪರೂಪ. ಆದರೆ ಮಂಜು ಸಣ್ಣಗೆ ಕ್ಯಾತೆ ತೆಗೆದಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲ ಅಂತ ದೂರಿದ್ದಾರೆ. ಅತ್ತ ಕಡೆಯಿಂದ ಕನಸುಗಾರ ಕೂಡ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರವಿಚಂದ್ರನ್ ಅವರಂತಹ ದೊಡ್ಡ ನಟರ ಬಗ್ಗೆ ಮಾತನಾಡುವಷ್ಟು ನಾನು ಬೆಳೆದಿಲ್ಲ. ಅವರು ದೊಡ್ಡ ಕಲಾವಿದರು, ನಿರ್ಮಾಪಕರು. ಹಾಗಾಗಿ ನಿರ್ಮಾಪಕರ ಕಷ್ಟ ಏನು ಅನ್ನುವುದು ಅವರಿಗೆ ಗೊತ್ತು. ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಚಿತ್ರದ ಪ್ರಚಾರಕ್ಕೆ ಬರಬೇಕು -- ಇದು ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಕೆ. ಮಂಜು ವಿಜ್ಞಾಪನೆ.

ಹೀಗೆ ಹೇಳಬೇಕಾದ್ರೆ, ಮಂಜುಗೆ ಏನಾದರೂ ತೊಂದರೆ ಆಗಿರಬೇಕು ತಾನೇ. ಹೌದು, ತೊಂದರೆಯಾಗಿರೋದು, ಅವರ ನಿರ್ಮಾಣದ 'ಕಳ್ಳ ಮಳ್ಳ ಸುಳ್ಳ'ದ ಪ್ರಚಾರಕ್ಕೆ ರವಿಚಂದ್ರನ್ ಬರದೇ ಇರುವುದು. ರವಿಚಂದ್ರನ್ ಬರಬೇಕಿತ್ತು, ಅವರು ದೊಡ್ಡವರು ಅಂತ ಹೇಳುತ್ತಲೇ ಮಂಜು ತನ್ನ ಅತೃಪ್ತಿಯನ್ನು ಹೊರ ಹಾಕಿದ್ದಾರೆ.

ಸಿನಿಮಾ ಮುಗಿಸಿ ಸಂಭಾವನೆ ತೆಗೆದು ಹೋಗುವುದು ಮಾತ್ರ ಕಲಾವಿದರ ಕೆಲಸವಲ್ಲ. ನಾಯಕರು ಪ್ರಚಾರಕ್ಕೂ ಬರಬೇಕು. ನಿರ್ಮಾಪಕರು ಇದ್ದರೆ ಮಾತ್ರ ಕಲಾವಿದರು ಬದುಕಲು ಸಾಧ್ಯ. ಹೀಗೆ ಕೈ ಕೊಟ್ಟರೆ ಹಿರಿಯ ಕಲಾವಿದರ ಬದಲು, ಕಿರಿಯರನ್ನು ಹಾಕಿಕೊಂಡು ಮುಂದಕ್ಕೆ ಸಾಗಬೇಕಾಗುತ್ತದೆ ಎಂದೂ ಮಂಜು ಕೊಂಚ ರಾಂಗ್ ಆಗಿದ್ದರು.

ಇದನ್ನು ಕೇಳಿರುವ ರವಿಚಂದ್ರನ್ ಸುಮ್ಮನೆ ಕುಳಿತಿಲ್ಲ. ಪ್ರಚಾರಕ್ಕೆ ಬರಬೇಕೆಂದು ಮುಂಚೆಯೇ ಹೇಳಿರುತ್ತಿದ್ದರೆ ಹೋಗುತ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ.

ಸಿನಿಮಾದ ಪತ್ರಿಕಾಗೋಷ್ಠಿ ಇದೆ ಅಂತ ಮುಂಚೆಯೇ ಹೇಳಬೇಕು. ಅದು ಬಿಟ್ಟು ಅರ್ಧಗಂಟೆ ಮೊದಲು ಹೇಳಿದರೆ ನಾವೇನು ಮಾಡಲಿ? ನಾವು ಒಂದೇ ಚಿತ್ರದಲ್ಲಿ ನಟಿಸುವುದಲ್ಲ. ಬೇರೆ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿರುತ್ತೇವೆ. ಇದನ್ನು ನಿರ್ಮಾಪಕರು ಅರ್ಥ ಮಾಡಿಕೊಳ್ಳಬೇಕು. ಕರೆದ ತಕ್ಷಣ ಬರುವುದು ಸಾಧ್ಯವಿಲ್ಲ ಅನ್ನೋದು ಅವರಿಗೂ ಮನವರಿಕೆಯಾಗಬೇಕು. ಅದು ಬಿಟ್ಟು ಕಲಾವಿದರ ಮೇಲೆ ಗೂಬೆ ಕೂರಿಸುವುದು ಯಾಕೆ ಅನ್ನೋದು ರವಿಚಂದ್ರನ್ ಪ್ರಶ್ನೆ.

ಹಾಗಾದ್ರೆ ತಪ್ಪು ಯಾರದ್ದು? ನಿರ್ಮಾಪಕರದ್ದೋ ಅಥವಾ ಕಲಾವಿದರದ್ದೋ? ಕಳ್ಳ ಮಳ್ಳ ಸುಳ್ಳ ಹಿಟ್ ಸಿನಿಮಾ. ಆಡಿಯೋ ಬಿಡುಗಡೆ ಸೇರಿದಂತೆ ಚಿತ್ರದ ಹಲವು ಕಾರ್ಯಕ್ರಮಗಳಿಗೆ ರವಿಚಂದ್ರನ್ ಹಾಜರಾಗಿದ್ದಾರೆ. ಆದರೂ ಮಂಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಳಿತು ಪರಿಹರಿಸಬಹುದಾದ ವಿಚಾರವೊಂದನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಇದು ಎಲ್ಲಿಗೆ ತಲುಪಲಿದೆ ಅನ್ನೋದನ್ನು ಕಾದು ನೋಡಬೇಕು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ