ಡುಪ್ಲಿಕೇಟ್ ವಿಷ್ಣುವರ್ಧನ ವರ್ಸಸ್ ರಿಮೇಕ್ ಶೈಲೂ!

SUJENDRA
ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹೆಸರಿನ ಬಲದ ಮೇಲೆ ನಿಂತಿರುವ ಕಿಚ್ಚ ಸುದೀಪ್ ಮಸಾಲೆ ಚಿತ್ರ 'ವಿಷ್ಣುವರ್ಧನ' ಮತ್ತು ತಮಿಳಿನ 'ಮೈನಾ'ದ ಕನ್ನಡ ಪಡಿಯಚ್ಚು ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ 'ಶೈಲೂ' ಗುದ್ದಾಟಕ್ಕೆ ರೆಡಿಯಾಗಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎರಡೂ ಅಪಾರ ಭರವಸೆ ಮತ್ತು ಆತಂಕ ಸೃಷ್ಟಿಸಿರುವ ಚಿತ್ರಗಳು. ಇದರಲ್ಲಿ ಸುದೀಪ್ ನಾಯಕರಾಗಿರುವ 'ವಿಷ್ಣುವರ್ಧನ'ಕ್ಕೆ ವಿವಾದಗಳೇ ಆಹಾರ. ಆರಂಭದಿಂದಲೂ ಭಾರತಿ ವಿಷ್ಣುವರ್ಧನ್ ಅವರ ಅಸಮಾಧಾನದ ಬಿಸಿಯಲ್ಲೇ ಚಳಿ ಕಾಯಿಸುತ್ತಾ ಬಂದ ಕುಳ್ಳ ದ್ವಾರಕೀಶ್, ಕೊನೆಗೂ ಅದೇ ಹೆಸರಿನಲ್ಲಿ (ಓನ್ಲಿ ವಿಷ್ಣುವರ್ಧನ) ಬಿಡುಗಡೆ ಮಾಡಿಸುವಷ್ಟರ ಮಟ್ಟಿಗೆ ಮಾತು ಉಳಿಸಿಕೊಂಡಿದ್ದಾರೆ.

ಇನ್ನು ಸುದೀಪ್ ಚಿತ್ರ ಬಿಡುಗಡೆಯಾಗಿ ಹಲವು ತಿಂಗಳುಗಳೇ ಕಳೆದಿರುವುದರಿಂದ, ಸಹಜವಾಗಿಯೇ ಅವರಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅತ್ತ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಲ್ಲಂತೂ ಸುದೀಪ್ ಏನೇನು ಮಾಡಿದ್ದಾರೋ ಎಂಬ ಆತಂಕವಿದೆ.

ಸರಿಯೆಂಬಂತೆ ಪೋಸ್ಟರುಗಳಲ್ಲಿ ವಿಷ್ಣುವರ್ಧನ್‌ರಂತೆ ಸುದೀಪ್ ಪೋಸ್ ಕೂಡ ಕೊಟ್ಟಿದ್ದಾರೆ. ಟ್ವಿಟ್ಟರ್-ಫೇಸ್‌ಬುಕ್‌ಗಳಲ್ಲಂತೂ ಸುದೀಪ್ ಅವರು 'ವಿಷ್ಣುವರ್ಧನ' ಚಿತ್ರವನ್ನು ವಿಷ್ಣುವರ್ಧನ್ ಅವರಿಗೆ ಲಿಂಕ್ ಮಾಡುವ ರೀತಿಯಲ್ಲಿ ಬರೆಯುತ್ತಿದ್ದಾರೆ. ವಿಷ್ಣುವರ್ಧನ್ ಅವರ ಆಶೀರ್ವಾದ ನಮ್ಮ ಮೇಲಿರಲಿ ಎನ್ನುತ್ತಾ, ಅವರ ಯಜಮಾನ ಚಿತ್ರ ಡಿಸೆಂಬರ್ 2ರಂದು ಬಿಡುಗಡೆಯಾಗಿತ್ತು ಎಂದೂ ನೆನಪಿಸಿಕೊಂಡಿದ್ದಾರೆ.

ಹಲವು ಬಾರಿ ಮುಂದೂಡಲ್ಪಡುತ್ತಾ ಬಂದಿರುವ 'ವಿಷ್ಣುವರ್ಧನ' ಚಿತ್ರ ಜ್ಯೋತಿಷಿಗಳ ಸಲಹೆಯಂತೆ ಶುಕ್ರವಾರದ ಬದಲು ಗುರುವಾರ (ಡಿಸೆಂಬರ್ 8) ಬಿಡುಗಡೆಯಾಗುತ್ತಿದೆ.

ಅದೇ ಹೊತ್ತಿಗೆ ಅತ್ತ ಕಲಾ ಸಾಮ್ರಾಟ್ ಎಸ್. ನಾರಾಯಣ್ ತಮಿಳಿನ 'ಮೈನಾ'ವನ್ನು ಕನ್ನಡದಲ್ಲಿ ಸುತ್ತಿ ರೆಡಿ ಮಾಡಿದ್ದಾರೆ. ಇದು ಶುಕ್ರವಾರ (ಡಿಸೆಂಬರ್ 9) ತೆರೆಗೆ ಬರುತ್ತಿದೆ. ಎರಡೂ ದೊಡ್ಡ ಬ್ಯಾನರಿನ, ಅತಿರಥ ಮಹಾರಥರ ಚಿತ್ರಗಳು. ಕನ್ನಡ ಚಿತ್ರಗಳಿಗೆ ಕನ್ನಡ ಚಿತ್ರಗಳೇ ಪೈಪೋಟಿ ನೀಡಬಾರದು ಎಂಬ ಕಿವಿ ಮಾತು ಯಾರ ಕಿವಿಗೂ ಬಿದ್ದಂತಿಲ್ಲ.

ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗಂತೂ ಈಗ ಪ್ರತಿಯೊಂದು ಚಿತ್ರಗಳೂ ಅಗ್ನಿಪರೀಕ್ಷೆಯಂತಾಗುತ್ತಿವೆ. ಪ್ರತಿಬಾರಿಯೂ ಅವರು ಸೋಲುತ್ತಿದ್ದಾರೆ. ಮೊನ್ನೆ ಮೊನ್ನೆ ಬಿಡುಗಡೆಯಾದ ಮದುವೆ ಮನೆಯ ಮೇಲೆ ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದರು. ಆರಂಭದಲ್ಲಿ ಶುಭಸಂಕೇತ ಸಿಕ್ಕಿತ್ತಾದರೂ, ನಂತರ ಮತ್ತದೇ ಕಥೆ.

ಆದರೆ ನಾರಾಯಣ್ ಮೇಲೆ ಗಣೇಶ್‍‌ಗೆ ಒಂದು ಹಿಡಿ ಭರವಸೆ ಜಾಸ್ತಿಯಿದೆ. ಅದಕ್ಕೆ ಕಾರಣ, ಚೆಲುವಿನ ಚಿತ್ತಾರ. ಅಮೂಲ್ಯಾ ನಾಯಕಿಯಾಗಿದ್ದ ತಮಿಳಿನ ರಿಮೇಕ್ ಕನ್ನಡದಲ್ಲಿ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಈ ಬಾರಿಯೂ ಅದೇ ರೀತಿ ಆಗುವುದೆಂಬ ನಿರೀಕ್ಷೆಯಲ್ಲವರು ಜಾತಕ ಪಕ್ಷಿಯಾಗಿದ್ದಾರೆ.

ಇಲ್ಲಿರುವ ಇನ್ನೊಂದು ವಿಶೇಷ, ಈ ಎರಡೂ ಚಿತ್ರಗಳಲ್ಲಿ ಮಲಯಾಳಿಗಳೇ ನಾಯಕಿಯರಾಗಿರುವುದು. ವಿಷ್ಣುವರ್ಧನ ಚಿತ್ರದಲ್ಲಿ ಸುದೀಪ್‌ಗೆ ಭಾವನಾ ಮೆನನ್ - ಪ್ರಿಯಾಮಣಿ ನಾಯಕಿಯರಾಗಿದ್ದರೆ, ಶೈಲೂವಿನಲ್ಲಿ ಗಣೇಶ್‌ಗೆ ಭಾಮಾ ಜೋಡಿ. ಈ ಮೂವರೂ ಮಲಯಾಳಿಗಳು!

ವಿವಾದಗಳು ಏನೇ ಇರಲಿ, ಕನ್ನಡ ಸಿನಿಮಾಗಳು ಗೆಲ್ಲಬೇಕು ಎನ್ನುವುದಷ್ಟೇ ಅಭಿಮಾನಿಗಳ ಆಶಯ. ಹಾಗೆ ಗೆಲುವು ಸಾಧಿಸುವ ಗುಣಮಟ್ಟದ ಚಿತ್ರಗಳು ಬರಲಿ ಅನ್ನೋದು ನಿರೀಕ್ಷೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ