ಇಲ್ಲೂ ಪ್ರಿಯಾಮಣಿಗೆ ಅಷ್ಟೇ ಸಂಭಾವನೆ ಸಿಗುತ್ತಾ?

SUJENDRA
ತಮಿಳು ಸಿನಿಮಾಗಳಲ್ಲಿ ಸಿಗುತ್ತಿದ್ದ ಸಂಭಾವನೆ ಸ್ಯಾಂಡಲ್‌ವುಡ್ ನಿರ್ಮಾಪಕರಿಂದ ಸಿಗುತ್ತಿದೆಯೇ? ಇದು ಪ್ರಶ್ನೆ. ಇದಕ್ಕೆ ಪ್ರಿಯಾಮಣಿ ತಲೆ ಓಡಿಸಿ ಉತ್ತರಿಸಿದ್ದಾರೆ. ಎಲ್ಲವನ್ನೂ ಹಣದಿಂದಲೇ ಅಳೆಯುವುದು ಸಾಧ್ಯವಿಲ್ಲ, ನಾನು ಚಿತ್ರಗಳಿಗೆ ಸಹಿ ಹಾಕುವಾಗ ಅದು ಯಾರ ಚಿತ್ರ, ಯಾರೆಲ್ಲ ಇರುತ್ತಾರೆ ಎಂಬುದನ್ನೆಲ್ಲ ನೋಡುತ್ತೇನೆ ಅಂತ ರೈಲು ಹತ್ತಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎಷ್ಟಾದರೂ ಹಲವು ಕೆರೆಗಳ ನೀರು ಕುಡಿದು ಬಂದವರಲ್ಲವೇ? ಮೊದಲೇ ಹತ್ತಾರು ಟೀಕೆಗಳನ್ನು, ಆರೋಪಗಳನ್ನು ಎದುರಿಸುತ್ತಿರುವವರು. ಎಲ್ಲೂ ಸಲ್ಲದೆ ಕನ್ನಡದಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಹೇಳಿಸಿಕೊಂಡಿರುವವರು. ಹಾಗಾಗಿ ಇನ್ನೊಂದು ಪ್ರಹಸನ ಬೇಡ ಅಂತ ಬುದ್ಧಿ ಖರ್ಚು ಮಾಡಿರುವ ಪ್ರಿಯಾಮಣಿ, ಪತ್ರಕರ್ತರನ್ನು ಏಮಾರಿಸಿದ್ದಾರೆ. ಸಂಭಾವನೆ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಾರೆ.

ಹಣವೇ ಮುಖ್ಯವಲ್ಲ. ನಾನು ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗ ಹಣದ ಮುಖ ಮಾತ್ರ ನೋಡುವುದಿಲ್ಲ. ನಿರ್ದೇಶಕರು ಯಾರು, ಕಥೆ ಹೇಗಿದೆ, ಬ್ಯಾನರ್ ಯಾವುದು ಮುಂತಾದುವುಗಳನ್ನು ನೋಡಿದ ನಂತರ ಸಂಭಾವನೆ ಕುರಿತು ಯೋಚಿಸುತ್ತೇನೆ ಎಂದು ಜಾರಿಕೊಂಡಿದ್ದಾರೆ.

ಈ ನಡುವೆ 'ಓನ್ಲಿ ವಿಷ್ಣುವರ್ಧನ' ಚಿತ್ರದ ಪಾತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆಯಂತೆ. "ಪ್ರಥಮಾರ್ಧದ ಕೊನೆಯಲ್ಲಿ ನನ್ನ ಪಾತ್ರ ಆರಂಭವಾದರೂ, ಚಿತ್ರಕ್ಕೆ ಹೊಸ ತಿರುವು ಕೊಡುವುದರಿಂದ ನನಗೆ ತೃಪ್ತಿಯಿದೆ. ಚಿತ್ರದಲ್ಲಿ ಕೆಲಸ ಮಾಡಿರುವುದಕ್ಕೆ ಖುಷಿಯಿದೆ" ಎಂದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕರಾಗಿರುವ 'ಅಣ್ಣಾ ಬಾಂಡ್' ಮತ್ತು ಶ್ರೀನಗರ ಕಿಟ್ಟಿಯ 'ಕೋ ಕೋ'ದಲ್ಲೂ ಪ್ರಿಯಾಮಣಿ ನಾಯಕಿ. ಇನ್ನಷ್ಟು ಚಿತ್ರಗಳ ಕುರಿತು ಮಾತುಕತೆ ನಡೆಯುತ್ತಿದೆ. ಈಗಾಗಲೇ ಹಲವು ಹಿಟ್ ಚಿತ್ರಗಳನ್ನು ಕನ್ನಡದಲ್ಲಿ ನೀಡಿರುವುದರಿಂದ, ಮುಂದಿನ ದಿನಗಳಲ್ಲಿ ಸ್ಯಾಂಡಲ್‌ವುಡ್ ತನ್ನ ಪ್ರಮುಖ ಕಾರ್ಯಕ್ಷೇತ್ರವಾಗಲಿದೆ ಅನ್ನೋ ಭರವಸೆ ಅವರದ್ದು.

ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವಂತಿದೆಯಲ್ಲ ಎಂಬ ರೀತಿಯ ಪ್ರಶ್ನೆಗಳನ್ನು ಕೇಳಿ ಕೇಳಿ ಸಾಕಾಗಿರುವ ಪ್ರಿಯಾಮಣಿ, "ಯಾಕೆ? ಇದರಲ್ಲಿ ಏನಾದರೂ ತಪ್ಪಿದೆಯೇ? ಇಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳು ಸಿಗುತ್ತಿವೆ. ಏನು ತಪ್ಪಿದೆ?" ಎಂದು ನೇರವಾಗಿ ಮರುತ್ತರ ನೀಡಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ