ಲೂಸ್ ಮಾದ ಸೂಪರ್, ನನ್ನದು ಬಂಪರ್: ರಮ್ಯಾ

SUJENDRA

ಲಕ್ಕಿ ಸ್ಟಾರ್ ರಮ್ಯಾ ಮತ್ತು ಲೂಸ್ ಮಾದ ಯೋಗೀಶ್ ಜೋಡಿಯ 'ಸಿದ್ಲಿಂಗು' ಹೇಗಿರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇರುತ್ತದೆ. ಇದಕ್ಕೆ ಕಾರಣ, ಅಜಗಜಾಂತರ ವ್ಯತ್ಯಾಸವಿರೋ ನಾಯಕ-ನಾಯಕಿ. ಇದಕ್ಕೆ ಪೂರಕವೆಂಬ ರೀತಿಯ ಪ್ರೋಮೋಗಳು. ಯೋಗಿ ಮತ್ತು ರಮ್ಯಾರದ್ದು ವಿಶಿಷ್ಟ ಪಾತ್ರ ಅನ್ನೋದಕ್ಕೆ ಇನ್ನೇನು ಬೇಕು ಸಾಕ್ಷಿ? ಬೇಕೆನ್ನುವವರಿಗೆ ರಮ್ಯಾ ಪ್ರವಚನವೂ ಇದೆ!

ಕಳೆದ ಎಂಟು ವರ್ಷಗಳಿಂದ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದರೂ, ರಮ್ಯಾಗೆ ಇದುವರೆಗೆ ಈ ರೀತಿಯ ಪಾತ್ರ ಸಿಕ್ಕಿಲ್ಲವಂತೆ. ಇಲ್ಲಿ ಅವರದ್ದು ಕನ್ನಡಕ ಹಾಕಿಕೊಂಡ, ಕಾಟನ್ ಸೀರೆಯ, ಕಡಿಮೆ ಮೇಕಪ್‌ನ, ಹೊಸ ಕೇಶ ವಿನ್ಯಾಸದ ಸರಕಾರಿ ಶಿಕ್ಷಕಿಯ ಪಾತ್ರ. ಹೆಸರು ಮಂಗಳ.

ಕೃಪೆ: ನಟಿ ರಮ್ಯ
"ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದೇನೆ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಸಂಭಾಷಣೆಗಳ ಬಗ್ಗೆ ಅದನ್ನೇ ಹೇಳಲಾರೆ. ಅದು ಕೊಂಚ ಅತಿಯಾದಂತಿದೆ. ಅದಕ್ಕಿಂತಲೂ ಹೆಚ್ಚಾಗಿ, ಕನ್ನಡದಲ್ಲಿನ ಹಲವು ಸಂಭಾಷಣೆಗಳು ನನಗೆ ಅರ್ಥವೇ ಆಗಿಲ್ಲ. ಅಂತಹ ಪದಗಳ ಬಳಕೆ ಇಲ್ಲಿ ಆಗಿದೆ. ಸೆಟ್‌ನಲ್ಲಿ ಈ ಸಂಭಾಷಣೆಗಳನ್ನು ಹೇಳುವ ಶೈಲಿಗೆ ಇತರರು ಹಾಸ್ಯ ಮಾಡಿದ್ದೂ ಇದೆ" ಅಂತ ರಮ್ಯಾ ತನ್ನ ಪಾತ್ರದ ಬಗ್ಗೆ ವಿವರಣೆ ನೀಡಿದ್ದಾರೆ.

ಪ್ರತಿ ಯಶಸ್ವಿ ಪುರುಷನ ಹಿಂದೆ ಸ್ತ್ರೀಯೊಬ್ಬಳು ಇರುತ್ತಾಳೆ ಅನ್ನೋ ಜನಪ್ರಿಯ ಸಾಲಿಗೆ ಯೋಗಿ ಮತ್ತು ರಮ್ಯಾರ ಪಾತ್ರ ಸರಿಯಾಗಿ ಹೊಂದುತ್ತದೆಯಂತೆ. ಇದನ್ನು ಸ್ವತಃ ರಮ್ಯಾರೇ ಹೋಲಿಕೆ ಮಾಡಿಕೊಂಡರು. ಪತ್ರಿಕಾಗೋಷ್ಠಿಯುದ್ದಕ್ಕೂ ಅವರ ಬಾಯಿಯಿಂದ ಬಂದುದು ಸಿದ್ಲಿಂಗುವಿನ ಹೊಸ ಅವತಾರಗಳ ಬಗ್ಗೆ. ಲೂಸ್ ಮಾದನ ನಟನೆಗೂ ಮೆಚ್ಚುಗೆ ವ್ಯಕ್ತಪಡಿಸಿದರು. ತನಗೆ ಇಂತಹ ಪಾತ್ರ ಸಿಕ್ಕಿರುವುದಕ್ಕೂ ರಮ್ಯಾ ಖುಷಿ ಪಟ್ಟರು.

ಕಿರುತೆರೆಯಲ್ಲಿ ಹೆಸರು ಮಾಡಿರುವ ವಿಜಯ ಪ್ರಸಾದ್ 'ಸಿದ್ಲಿಂಗು' ನಿರ್ದೇಶಕ. ಅನೂಪ್ ಸಿಳೀನ್ ಸಂಗೀತ ನೀಡಿದ್ದಾರೆ.

'ಎಲ್ಲೆಲ್ಲೋ ಓಡುವ ಮನಸಾ...' ಎಂಬ ಹಾಡನ್ನು ರಮ್ಯಾ ಇದೇ ಸಂದರ್ಭದಲ್ಲಿ ಸಂಜು ವೆಡ್ಸ್ ಗೀತಾದ ಗಗನವೇ ಬಾಗಿ ಹಾಡಿಗೆ ಹೋಲಿಸಿದ್ದಾರೆ. ಅದೇ ರೀತಿಯ ಮಾಧುರ್ಯ ಇಲ್ಲಿದೆ. ಖಂಡಿತಾ ಹಿಟ್ಟಾಗುತ್ತೆ ಅಂತ ಭವಿಷ್ಯ ನುಡಿದರು.

ವೆಬ್ದುನಿಯಾವನ್ನು ಓದಿ