ಲೇಡಿ ಫ್ಯಾನ್‌ಗಳಿಗಾಗಿ ರಕ್ತಪಾತಕ್ಕೆ ದರ್ಶನ್ ಗುಡ್‌ಬೈ?

SUJENDRA
ಒಂದೇ ವರ್ಗದ ಪ್ರೇಕ್ಷಕರನ್ನು ನೆಚ್ಚಿಕೊಂಡರೆ ಕಷ್ಟ ಅನ್ನೋದು ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೂ ಅರಿವಾದಂತಿದೆ. ತನಗಿರುವ ಮಹಿಳಾ ಅಭಿಮಾನಿಗಳನ್ನು ಕಳೆದುಕೊಳ್ಳಬಾರದು ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಅವರೀಗ ಲಾಂಗು-ಮಚ್ಚು, ರಕ್ತಪಾತದ ದೃಶ್ಯಗಳಿಗೆ ಕಡಿಮೆ ಒತ್ತು ಕೊಡಲು ನಿರ್ಧರಿಸಿದ್ದಾರಂತೆ!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಬದಲಾವಣೆಗೆ ಕಾರಣ, ಸಹೋದರ ದಿನಕರ್ ತೂಗುದೀಪ ನಿರ್ದೇಶನದ 'ಸಾರಥಿ'. ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲಿಗೆ ಹೋದರೂ ಅಭಿಮಾನಿಗಳು, ಅದರಲ್ಲೂ ಲೇಡಿ ಫ್ಯಾನುಗಳು ಕೈ ಬಿಡದಿರುವುದು. ಮೊದಲಿನಿಂದಲೂ ಲಾಂಗು-ಮಚ್ಚುಗಳಿಂದ ದೂರ ಉಳಿಯುವ ಯೋಚನೆಯಲ್ಲಿದ್ದ ದರ್ಶನ್‌‌ಗೆ ಬಹುಶಃ ಇಷ್ಟೇ ಸಾಕಾಗಿದೆ.

ದರ್ಶನ್ ಆಕ್ಷನ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವುದಕ್ಕೆ ಲೆಕ್ಕವಿಲ್ಲ. ನಮ್ಮ ಪ್ರೀತಿಯ ರಾಮು ಅಂತಹ ಕೆಲವೇ ಕೆಲವು ಚಿತ್ರಗಳನ್ನು ಬಿಟ್ಟರೆ ಉಳಿದೆಲ್ಲವೂ ಬರೀ ಹೊಡಿ-ಬಡಿಗೆ ಸೀಮಿತ. ಆದರೂ ಮಹಿಳಾ ಅಭಿಮಾನಿಗಳಿಗೆ ದರ್ಶನ್ ಇಷ್ಟವಾಗಿದ್ದರು. ದರ್ಶನ್ ಚಿತ್ರಗಳೆಂದರೆ ಪ್ರೀತಿಯಿಂದ ನೋಡುತ್ತಿದ್ದರು. ಅಲ್ಲಿ ಇಷ್ಟವಾಗದೆ ಇದ್ದ ಸಂಗತಿ ರಕ್ತಪಾತ. ಹೊಡೆದಾಟವೇನೋ ಓಕೆ, ಆದರೆ ಲಾಂಗು-ಮಚ್ಚುಗಳು ಯಾಕೆ ಅನ್ನೋದು ಅವರ ಪ್ರಶ್ನೆಯಾಗಿತ್ತು.

ಈ ಬಗ್ಗೆ ದರ್ಶನ್ ಹೇಳೋದಿಷ್ಟು: ನನ್ನ ಸಿನಿಮಾವನ್ನು ಹೆಣ್ಣು ಮಕ್ಕಳು ನೋಡುತ್ತಾರೆ. ಆದರೆ ಅವರು ರಕ್ತಪಾತವನ್ನು ಇಷ್ಟಪಡಲ್ಲ. ಅದಕ್ಕಾಗಿ ಈಗ ನನ್ನ ಸಿನಿಮಾಗಳಲ್ಲಿ ರಕ್ತಪಾತ ದೃಶ್ಯಗಳನ್ನು ಕಡಿಮೆ ಮಾಡಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ.

ಹರ್ಷ ನಿರ್ದೇಶನದ 'ಚಿಂಗಾರಿ'ಯಲ್ಲಿ ನಾನು ಮಚ್ಚು ಹಿಡಿದಿಲ್ಲ. ಇದು ಸ್ಟೈಲಿಶ್ ಚಿತ್ರ. ಮಚ್ಚು ಹಿಡಿದು ಫೈಟ್ ಮಾಡುವುದು ಹಳೆಯ ಟ್ರೆಂಡ್. ಈಗ ಏನಿದ್ದರೂ ಗನ್, ಪಿಸ್ತೂಲು ಕಾಲ. ಕೆಲವೇ ಸೆಕುಂಡುಗಳಲ್ಲಿ ಎಲ್ಲವೂ ನಡೆದು ಹೋಗುತ್ತದೆ. ಇದು ನನ್ನ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಭಿನ್ನ.

ರಕ್ತಪಾತದ 'ಮೆಜೆಸ್ಟಿಕ್' ಮೂಲಕ ಬೆಳಕಿಗೆ ಬಂದ ದರ್ಶನ್ ಮಾಸ್ ಪ್ರೇಕ್ಷಕರ ಆರಾಧ್ಯ ದೈವ. ಹೀಗೆ ಲಾಂಗು-ಮಚ್ಚುಗಳನ್ನು ಬಿಟ್ಟರೆ ಆ ಅಭಿಮಾನಿಗಳು ಸಹಿಸಿಕೊಂಡಾರೇ? ಗೊತ್ತಿಲ್ಲ. ಕಾದು ನೋಡಬೇಕು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ