ಬೆತ್ತಲೆಯಾಗಿಲ್ಲ, ಬೆನ್ನು ತೋರಿಸಿದ್ದೀನಿ: ಪೂಜಾ

SUJENDRA
ಮಳೆ ಹುಡುಗಿ ಪೂಜಾ ಗಾಂಧಿ ಬೆತ್ತಲೆಯಾಗಿದ್ದಾರೆ ಎಂಬ ವರದಿಗಳಿಗೆ ಉರಿದು ಬಿದ್ದಿರುವ ಪೂಜಾ ಗಾಂಧಿ, ನಾನು ಬೆತ್ತಲೆಯಾಗಿಲ್ಲಾರೀ.. ನಿಮ್ಗೆ ಬೆತ್ತಲೆ ಅಂದ್ರೆ ಏನು ಗೊತ್ತಾ? ನಾನು ತೋರಿಸಿರೋದು ಬೆನ್ನು ಮಾತ್ರ, ದೇಹದ ಉಳಿದ ಭಾಗ ಬಟ್ಟೆಯಿಂದ ಮುಚ್ಚಿದೆ. ಹೀಗಿರುವಾಗ ಅದು ಬೆತ್ತಲೆ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶ್ರೀನಿವಾಸ್ ರಾಜು ನಿರ್ದೇಶನದ 'ದಂಡುಪಾಳ್ಯ' ಚಿತ್ರದಲ್ಲಿ ಹಂತಕಿ ಲಕ್ಷ್ಮಿ ಪಾತ್ರವನ್ನು ಮಾಡುತ್ತಿರುವ ಪೂಜಾ ಗಾಂಧಿ, ಪೊಲೀಸರ ವಿಚಾರಣೆ ಸನ್ನಿವೇಶವೊಂದರಲ್ಲಿ ಅರೆ ಬೆತ್ತಲಾಗಿ ನಟಿಸಿದ್ದಾರೆ. ಆದರೆ ಮಾಧ್ಯಮಗಳು, ಪೂಜಾ ಬೆತ್ತಲಾಗಿದ್ದಾರೆ ಎಂದು ವರದಿ ಮಾಡಿದ್ದವು.

ನಿಘಂಟಿನ ಪ್ರಕಾರ ಬೆತ್ತಲೆ ಎಂಬ ಪದದ ಅರ್ಥ, ಅಡಿಯಿಂದ ಮುಡಿಯವರೆಗೆ ಒಂದೇ ಒಂದು ತುಂಡು ಬಟ್ಟೆ ಇರದೇ ಇರುವುದು. ಆದರೆ ಈ ದೃಶ್ಯದಲ್ಲಿ ನಾನು ಹಾಗಿಲ್ಲ. ನಾನು ಸೀರೆ ಉಟ್ಟುಕೊಂಡಿದ್ದೇನೆ. ಬೆನ್ನನ್ನು ಹೊರತುಪಡಿಸಿ, ಇಡೀ ದೇಹವನ್ನು ಮುಚ್ಚಲು ನಾನು ಯತ್ನಿಸುತ್ತಿರುತ್ತೇನೆ. ಇದು ಬೆತ್ತಲೆ ಹೇಗಾಗುತ್ತದೆ ಅನ್ನೋದು ಪೂಜಾ ವಾದ.

ಅಷ್ಟಕ್ಕೂ ಸ್ಯಾಂಡಲ್‌ವುಡ್ ಹುಡುಗಿಯರು ಕೊಂಚ ಎಕ್ಸ್‌ಪೋಸಿಂಗ್ ಮಾಡಿದಾಗ ಹೀಗೆ ಆಕ್ಷೇಪಗಳು ಬರುವುದು ಏಕೋ ಅನ್ನೋ ಪ್ರಶ್ನೆಯೂ ಪೂಜಾಗೆ ಹುಟ್ಟಿಕೊಂಡಿದೆ. ರೇಖಾ, ಶಬನಾ ಆಜ್ಮಿ, ಸ್ಮಿತಾ ಪಾಟೀಲ್, ವಿದ್ಯಾ ಬಾಲನ್‌ರಂತಹ ನಟಿಯರು ಹೀಗೆ ಬೆತ್ತಲೆ ಬೆನ್ನು ತೋರಿಸಿಲ್ವೇ? ಆಗ ಸುಮ್ಮನಿದ್ದವರು ಈಗ ಯಾಕೆ ಮಾತನಾಡುತ್ತಾರೆ? ಬಾಲಿವುಡ್ ನಟಿಯರಿಗೊಂದು ನ್ಯಾಯ, ನಮಗೊಂದು ನ್ಯಾಯವೇ ಅಂತ ಕೋಪಿಸಿಕೊಂಡಿದ್ದಾರೆ.

ನೀವು ಬೀಡಿ ಕೂಡ ಸೇದಿದ್ದೀರಂತೆ ಅನ್ನೋ ಪ್ರಶ್ನೆಗೂ ಪೂಜಾ ಡೋಂಟ್ ಕೇರ್ ಉತ್ತರ ನೀಡಿದ್ದಾರೆ. ಹೌದು, ಸೇದಿದ್ದೇನೆ. ಲಕ್ಷ್ಮಿ ಪಾತ್ರಕ್ಕೆ ಅದರ ಅಗತ್ಯವಿತ್ತು. ಆಕೆ ಬೀಡಿ ಸೇದುವ ಚಟವನ್ನು ಅಂಟಿಸಿಕೊಂಡಿದ್ದಳು. ಪಾತ್ರಕ್ಕೆ ನ್ಯಾಯ ಸಲ್ಲಿಸಲು ನಾನು ಚಿತ್ರದಲ್ಲಿ ಬೀಡಿ ಸೇದಿದ್ದೇನೆ. ಇದುವರೆಗೆ ನಾನು ಅಭಿನಯಿಸಿದ ಯಾವುದೇ ಚಿತ್ರಗಳಲ್ಲಿರದ ರೀತಿಯ ಸನ್ನಿವೇಶಗಳು ಈ ಚಿತ್ರದಲ್ಲಿವೆ ಎಂದಿದ್ದಾರೆ.

ಹೀಗೆ ಅರೆ ಬೆತ್ತಲೆಯಾಗಿ ಚಿತ್ರೀಕರಣ ನಡೆಸುವಾಗ ಪೂಜಾಗೆ ಮುಜುಗರವಾಗಿಲ್ವೇ? ಈ ಪ್ರಶ್ನೆಗೆ ಇಲ್ಲ ಅನ್ನುತ್ತಾರೆ ನಿರ್ದೇಶಕ ಶ್ರೀನಿವಾಸ್ ರಾಜು. ಈ ದೃಶ್ಯವನ್ನು ಚಿತ್ರೀಕರಣದ ಕೊನೆಯಲ್ಲಿ ಮಾಡಲಾಯಿತು. ಅಲ್ಲದೆ, ಶೂಟಿಂಗ್ ಸಂದರ್ಭದಲ್ಲಿ ಕೆಲವೇ ಕೆಲವು ಮಂದಿಯನ್ನು ಹೊರತುಪಡಿಸಿದರೆ, ಉಳಿದ ಯಾರಿಗೂ ಪ್ರವೇಶವಿರಲಿಲ್ಲ. ಮೊದಲೇ ಪೂಜಾ ಗಾಂಧಿಗೆ ಆತ್ಮವಿಶ್ವಾಸ ತುಂಬಿದರಿಂದ ದೃಶ್ಯ ಸುಲಭವಾಗಿ ಮುಗಿಯಿತು ಎಂದು ವಿವರಿಸಿದ್ದಾರೆ.

ಅದೇನೋ ಸರಿ, ಆದ್ರೆ ಸ್ಯಾಂಡಲ್‌ವುಡ್‌ನಲ್ಲಿ ಪೂಜಾ ಗಾಂಧಿ ಮುಳುಗುತ್ತಿರುವ ದೋಣಿ. ಹೀಗಿರುವಾಗ ಬೆತ್ತಲೆಯಾಗುವ ಅನಿವಾರ್ಯತೆ ಎದುರಾಗಿತ್ತೇ? ಇಲ್ಲ, ಇಲ್ಲ. ಹಾಗೇನಿಲ್ಲ. ನನಗೆ ಅದರ ಅಗತ್ಯವಿರಲಿಲ್ಲ. ನಾನು ಪ್ರಚಾರಕ್ಕೋಸ್ಕರ ಅಥವಾ ಶೋಕಿಗೋಸ್ಕರ ಹೀಗೆ ಮಾಡಿಲ್ಲ. ಈ ಚಿತ್ರಕ್ಕೆ ನೈಜತೆಯ ಟಚ್ ಅಗತ್ಯವಿತ್ತು. ಹಾಗಾಗಿ ಹೀಗೆ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ