'ವಿಷ್ಣುವರ್ಧನ' ಹಿಟ್ ಎಂದರು, ವಿಷ್ಣುವನ್ನೇ ಮರೆತರು!

SUJENDRA
'ವಿಷ್ಣುವರ್ಧನ' ಚಿತ್ರ ತೆರೆಗೆ ಬರುವವರೆಗೆ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸ್ತುತಿ ಮಾಡದವರೇ ಇಲ್ಲ. ಆದರೆ ಅದೇ 'ವಿಷ್ಣುವರ್ಧನ' ಸೂಪರ್ ಹಿಟ್ ಎಂದು ಘೋಷಿಸಿದವರಿಗೆ ವಿಷ್ಣುವರ್ಧನ್ ನೆನಪಾಗಲೇ ಇಲ್ಲ. ಗೆಲುವಿಗೆ ನಾವೇ ಕಾರಣರೆಂದರು ಎಲ್ಲರೂ. ಇದು ಟೀಮ್ ವರ್ಕ್ ಎಂದು ಹೇಳಿಕೊಂಡರು.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಿಚ್ಚ ಸುದೀಪ್ ನಾಯಕರಾಗಿದ್ದ, ಪ್ರಿಯಾಮಣಿ-ಭಾವನಾ ನಾಯಕಿಯರಾಗಿದ್ದ 'ವಿಷ್ಣುವರ್ಧನ' ಚಿತ್ರದ ಶೀರ್ಷಿಕೆ, ಮುಹೂರ್ತ, ಧಿರಿಸು, ನಾಯಕ-ನಾಯಕಿಯ ಪಾತ್ರದ ಹೆಸರು, ಚಿತ್ರದ ಜಾಹೀರಾತು ಸೇರಿದಂತೆ ಎಲ್ಲೆಡೆಯೂ ಡಾ. ವಿಷ್ಣುವರ್ಧನ್‌ರನ್ನು ನೆನಪಿಸಲಾಗಿತ್ತು. ಪ್ರತಿ ಹಂತದಲ್ಲೂ ಇದು ಸಾಹಸ ಸಿಂಹ ವಿಷ್ಣುವರ್ಧನ್‌ರಿಗೆ ಸಂಬಂಧಪಟ್ಟ ಸಿನಿಮಾವಲ್ಲ ಅಂತ ಹೇಳುತ್ತಲೇ, ವಿವಾದದ ಮೂಲಕ ಬೇಳೆ ಬೇಯಿಸುವ ಯತ್ನ ನಡೆಯುತ್ತಿತ್ತು.

ಆದರೆ ಇದೆಲ್ಲವೂ ಚಿತ್ರ ಯಶಸ್ಸು ಕಾಣುವವರೆಗೆ ಮಾತ್ರ ಎಂಬಂತೆ ಕಂಡು ಬಂದದ್ದು ಮೊನ್ನೆ ನಡೆದ ಚಿತ್ರದ ಸಂತೋಷ ಕೂಟದಲ್ಲಿ. ನಿರ್ಮಾಪಕ ದ್ವಾರಕೀಶ್, ನಿರ್ದೇಶಕ ವಿ. ಕುಮಾರ್, ನಾಯಕ ಕಿಚ್ಚ ಸುದೀಪ್, ಕಾರ್ಯಕಾರಿ ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಹಲವರು ಯಶಸ್ಸು ತಮ್ಮದೆಂದು ಹೇಳಿಕೊಂಡರು.

ಸುದೀಪ್‌ರ ಯಾವುದೇ ಚಿತ್ರ ಮಲ್ಟಿಪ್ಲೆಕ್ಸ್‌ಗಳಲ್ಲಿ ಈ ಪರಿಯ ಯಶಸ್ಸು ಸಾಧಿಸಿದ್ದಿಲ್ಲ. ಈಗಲೂ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ 'ವಿಷ್ಣುವರ್ಧನ' ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಮಲ್ಟಿಪ್ಲೆಕ್ಸ್ ಮತ್ತು ಇತರ ಚಿತ್ರಮಂದಿರಗಳಲ್ಲಿ ಈ ಚಿತ್ರ ಖಂಡಿತಾ ಶತದಿನೋತ್ಸವ ಆಚರಿಸುತ್ತದೆ ಎಂದವರು ಯೋಗಿ ದ್ವಾರಕೀಶ್.

ಇದು ಇಡೀ ಚಿತ್ರತಂಡದ ಯಶಸ್ಸು ಅಂತ ಸುದೀಪ್ ಸಂತಸ ವ್ಯಕ್ತಪಡಿಸಿದರು. ಹೀಗೆ ಯಶಸ್ಸು ಸಿಕ್ಕಿರುವುದು ಚಿತ್ರತಂಡಕ್ಕೆ ಸಿಕ್ಕಿರುವ ಟಾನಿಕ್ ಎಂದರು. ನಾವು ಕೆಲಸ ಮಾಡುವ ಎಲ್ಲಾ ಚಿತ್ರಗಳಿಗೂ ಇಷ್ಟೇ ಶ್ರಮ ಹಾಕುತ್ತೇವೆ. ಆದರೆ ನಮ್ಮ ಶ್ರಮವನ್ನು ಯಾರೂ ಗುರುತಿಸುವುದಿಲ್ಲ. ಕೆಲವು ಸಂದರ್ಭಗಳಲ್ಲಂತೂ ನಿರ್ಮಾಪಕ-ನಿರ್ದೇಶಕರೇ ಮರೆತು ಬಿಡುತ್ತಾರೆ. ಚಿತ್ರ ಗೆದ್ದಾಗ ಮಾತ್ರ ಕಲಾವಿದರನ್ನು ಸ್ಮರಿಸಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ದ್ವಾರಕೀಶ್‌ರಂತೂ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದರು. 1962ರಿಂದ ಚಿತ್ರರಂಗದಲ್ಲಿರುವ ಅವರಿಗೆ ಹೀಗೆ ಎರಡೆರಡು ನಿರಂತರ ಯಶಸ್ಸು (ಆಪ್ತಮಿತ್ರ ಮತ್ತು ವಿಷ್ಣುವರ್ಧನ) ಸಿಕ್ಕೇ ಇಲ್ಲವಂತೆ. ಇದಕ್ಕೆ ನನ್ನ ಮಗ ಯೋಗೀಶ್, ಸುದೀಪ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ನಿರ್ದೇಶಕ ಕುಮಾರ್ ಕಾರಣ, ಕೀರ್ತಿ ಅವರದ್ದೇ ಎಂದರು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ