CCL ಪಾಲಿಟಿಕ್ಸ್‌ಗೆ ಶಿವಣ್ಣ, ಪುನೀತ್ ರಾಜ್, ಉಪ್ಪಿ ಔಟ್?

WD
ಪ್ರಸಕ್ತ ನಡೆಯುತ್ತಿರುವ ಪ್ರತಿಷ್ಠಿತ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ವರನಟ ಡಾ. ರಾಜ್‌ಕುಮಾರ್ ಕುಟುಂಬ ಯಾಕೆ ಇಲ್ಲ? ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಇತರ ಹಲವರನ್ನು ಹೊರಗೆ ಇಟ್ಟಿರುವುದು ಯಾಕೆ? ಇದಕ್ಕೆ ಯಾರು ಕಾರಣ? ಅಭಿಮಾನಿಗಳು ಮತ್ತು ಚಿತ್ರರಂಗದ ಕೆಲವು ಗಣ್ಯರ ಮಾತುಗಳು ನಿಜವೇ?

ಈ ಪ್ರಶ್ನೆ ಕೆಲ ದಿನಗಳ ಹಿಂದೆಯೇ ಎದ್ದಿತ್ತು. ಈಗ ಮತ್ತೆ ಗರಿಗೆದರಿದೆ. ಸಿಸಿಎಲ್ ಟೂರ್ನಮೆಂಟ್‌‌ನ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕೀಯ ನಡೆದಿದೆ. ಯಾವುದೋ ಕಾರಣಕ್ಕಾಗಿ ಕೆಲವು ಪ್ರಮುಖರನ್ನು ಹೊರಗಿಡಲಾಗಿದೆ. ಇಲ್ಲಿ ಯಾರದೋ ಕಾಣದ ಕೈಗಳಿವೆ ಎಂಬ ಆರೋಪ ಜೋರಾಗಿಯೇ ಕೇಳಿ ಬರುತ್ತಿದೆ.

ಅಭಿಮಾನಿಗಳ ಆಕ್ರೋಶ...
ಟೂರ್ನಮೆಂಟ್‌ನಿಂದ ರಾಜ್‌ಕುಮಾರ್ ಕುಟುಂಬವನ್ನು ಉದ್ದೇಶ ಪೂರ್ವಕವಾಗಿ ಹೊರಗಿಡಲಾಗಿದೆ ಅನ್ನೋದು ನಮ್ಮ ಭಾವನೆ. ಅವರಿಲ್ಲದ ಕರ್ನಾಟಕ ಬುಲ್ಡೋಜರ್ಸ್ ತಂಡ ಅಪೂರ್ಣ. ಶಿವಣ್ಣ ಯಾಕೆ ಆಡುತ್ತಿಲ್ಲ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿರುವುದು ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೆ.ಪಿ. ಶ್ರೀಕಾಂತ್.

ರಾಜ್ ಕುಟುಂಬವನ್ನು ಈ ಟೂರ್ನಿಯಿಂದ ಹೊರಗೆ ಇಡುವಲ್ಲಿ ಬೇರೆ ಏನೋ ಕಾರಣ ಇದೆ. ಇದು ನಮಗೆ ತುಂಬಾ ನೋವಾಗಿದೆ. ಹೀಗೆ ನಡೆಯಬಾರದಿತ್ತು ಅನ್ನುತ್ತಾರೆ ಅಭಿಮಾನಿಗಳು.

ಇದು ರಾಜಕೀಯ: ಗಣೇಶ್
ಇದು ಆಯ್ಕೆ ಸಮಿತಿಯ ಪಕ್ಷಪಾತ. ಉಪೇಂದ್ರ, ಪುನೀತ್ ತಂಡದಲ್ಲಿ ಯಾಕಿಲ್ಲ? ಇದ್ಯಾಕೆ ಹೀಗಾಗಿದೆ ಅಂತ ಮಾತುಕತೆ ನಡೆಸಲು ನಾವು ನಿರ್ಮಾಪಕರ ಸಂಘದ ಸಭೆ ಕರೆದಿದ್ದೇವೆ ಅಂತ ಹೇಳಿರುವುದು ನಿರ್ಮಾಪಕರ ಸಂಘದ ಕಾರ್ಯದರ್ಶಿ ಗಣೇಶ್.

ಬ್ಯುಸಿ ಇದ್ದೇನೆ: ಶಿವಣ್ಣ
ನನ್ನ ಮಾವ ಬಂಗಾರಪ್ಪ ಕೆಲ ದಿನಗಳ ಹಿಂದಷ್ಟೇ ತೀರಿಕೊಂಡಿದ್ದರಿಂದ ನನಗೆ ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸುವುದು ಸಾಧ್ಯವಾಗಲಿಲ್ಲ. ಈಗ ನಾನು 'ಶಿವ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇನೆ. ಆದರೂ ಪುರುಸೊತ್ತು ಸಿಕ್ಕಾಗ ಟಿವಿಯಲ್ಲಿ ಪಂದ್ಯ ನೋಡುತ್ತೇನೆ. ಈಗಿನ ತಂಡ ಉತ್ತಮವಾಗಿದೆ. ಅವರಿಗೆ ಶುಭ ಹಾರೈಸುತ್ತೇನೆ.

ನನಗೆ ಕ್ರಿಕೆಟ್ ಬರಲ್ಲ: ಪುನೀತ್
ನಾನು ಒಳ್ಳೆಯ ಕ್ರಿಕೆಟ್ ಆಟಗಾರನಲ್ಲ. ವೃತ್ತಿಪರ ಆಟಗಾರರಂತೆ ಕ್ರಿಕೆಟ್ ಆಡುವುದು ನನಗೆ ಸಾಧ್ಯವಿಲ್ಲ. ಹೆಚ್ಚೆಂದರೆ ನೋಡಬಲ್ಲೆ. ತಂಡವನ್ನು ಹುರಿದುಂಬಿಸಬಲ್ಲೆ. ಈಗಂತೂ ನಾನು ಅಣ್ಣಾ ಬಾಂಡ್ ಕ್ಲೈಮಾಕ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ. ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಭಾನುವಾರದ ಸಿಸಿಎಲ್ ಪಂದ್ಯಕ್ಕೆ ಹೋಗಿರುವುದರಿಂದ ಇಲ್ಲಿ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ.

ಆಡಬೇಡಿ ಎಂದಿಲ್ಲ: ಸುದೀಪ್
ನಾವು ಯಾರನ್ನಾದರೂ ಆಡಬೇಡಿ ಅಂತ ಹೇಳಿದ್ದೇವಾ? ಶಿವಣ್ಣ ನನಗೆ ಒಬ್ಬ ಗೆಳೆಯನಿಗಿಂತ ಹೆಚ್ಚಾಗಿ ಸಹೋದರನಂತೆ. ಅವರನ್ನು ಭಾಗವಹಿಸದಂತೆ ನಾನು ತಡೆಯುತ್ತೇನಾ? ನಾನು ಆಯ್ಕೆಗಾರನಲ್ಲ. ನನ್ನ ಸ್ಥಾನಕ್ಕೆ ಬೇರೆ ಯಾರಾದರೂ ಬರಲು ಇಚ್ಛಿಸಿದ್ದರೆ ಖಂಡಿತಾ ಕೆಳಗಿಳಿಯುತ್ತೇನೆ.

ವೆಬ್ದುನಿಯಾವನ್ನು ಓದಿ