ಮೂವರು ಹುಡ್ಗೀರಿಗೆ ಒಬ್ಬ ಬಚ್ಚನ್, ಅದು ಸುದೀಪ್

SUJENDRA
ಸಿಕ್ಸರ್, ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ ಮೂಲಕ ಪಡೆದುಕೊಂಡದ್ದನ್ನು 'ಜರಾಸಂಧ'ದ ಮೂಲಕ ಶಶಾಂಕ್ ಕಳೆದುಕೊಂಡದ್ದೇನೋ ಆಯ್ತು. ಆದ್ರೆ ಅವರು ಒಂದು ಸೋಲಿಗೆ ಸುಮ್ಮನೆ ಕುಳಿತಿಲ್ಲ. ಮರಳಿ ಯತ್ನವ ಮಾಡು ಎಂಬಂತೆ ಆಕ್ಷನ್ ಚಿತ್ರವನ್ನೇ ಮತ್ತೆ ನಿರ್ದೇಶಿಸಲು ಹೊರಟಿದ್ದಾರೆ. ಕಿಚ್ಚ ಸುದೀಪ್ ನಾಯಕರಾಗಿರುವ ಈ ಚಿತ್ರದ ಹೆಸರು 'ಬಚ್ಚನ್'.

ಇದು ಲೇಟೆಸ್ಟ್ ಮಾಹಿತಿ. ಚಿತ್ರದ ಹೆಸರು ಬದಲಾದರೂ ಅಚ್ಚರಿಯಿಲ್ಲ. ಅಷ್ಟಕ್ಕೂ ಚಿತ್ರಕತೆ ಇನ್ನೂ ಪೂರ್ತಿಯಾಗಿಲ್ಲವಂತೆ. ಈಗಷ್ಟೇ ಒಂದು ಹಂತದವರೆಗೆ ಬಂದಿದೆ. 'ಜರಾಸಂಧ'ದಲ್ಲಿ ಎಡವಿರುವುದು ಎಲ್ಲಿ ಅನ್ನೋದನ್ನು ಪಟ್ಟಿ ಮಾಡಿಕೊಂಡಿರುವ ಶಶಾಂಕ್, ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಿದ್ದಾರಂತೆ.

ಎಂ.ಎನ್. ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದ ಬಜೆಟ್ ಬರೋಬ್ಬರಿ 9 ಕೋಟಿ ರೂಪಾಯಿಗಳು. ಮೂವರು ನಾಯಕಿಯರು ಬೇರೆ. ಸುದೀಪ್ ಆಕ್ಷನ್, ಮೂವರು ನಾಯಕಿಯರು ಎಂದ ಮೇಲೆ 'ಬಚ್ಚನ್' ಭರ್ಜರಿ ಮೃಷ್ಟಾನ್ನವಾಗುವುದರಲ್ಲಿ ಸಂಶಯವಿಲ್ಲ.

ಕನ್ನಡದವರು ಮಾತ್ರವಲ್ಲದೆ, ಇತರ ಭಾಷೆಯಿಂದಲೂ ನಾಯಕಿಯರನ್ನು ಆರಿಸುವ ಚಿಂತನೆ ಶಶಾಂಕ್‌ರದ್ದು. ಅದಕ್ಕೆ ಕಾರಣ, ಕನ್ನಡದಲ್ಲಿ ಬಿಡುಗಡೆಯಾದ ನಂತರ ಸಿನಿಮಾವನ್ನು ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡುವ ಯೋಚನೆ ಮಾಡಿರುವುದು. ಸುದೀಪ್ ಈಗಾಗಲೇ ಹಿಂದಿ ಮತ್ತು ತೆಲುಗಿನಲ್ಲಿ ಕ್ಲಿಕ್ ಆಗಿರುವುದರಿಂದ, ಇದು ಫಲಿಸಬಹುದು ಅಂತ ನಿರ್ದೇಶಕ-ನಿರ್ಮಾಪಕರು ಐಡ್ಯಾ ಮಾಡ್ಯಾರಾ.

ಇದು ಪಕ್ಕಾ ಆಕ್ಷನ್ ಮತ್ತು ವಿನೂತನವಾಗಿರುತ್ತದೆ. ನನ್ನದೇ ಆದ ಪ್ಯಾಟರ್ನ್ ಇಲ್ಲಿ ಅಳವಡಿಸುತ್ತೇನೆ. ಎಲ್ಲರಿಗೂ ಹೊಸತೆನಿಸುವುದರಿಂದ ಬೇರೆ ಭಾಷೆಗಳಿಗೂ ಡಬ್ ಮಾಡುವ ಯೋಚನೆಯಿದೆ. ಕನ್ನಡ ಚಿತ್ರಗಳನ್ನು ಬೇರೆ ಭಾಷೆಯ ಮಂದಿ ನೋಡುವುದಿಲ್ಲ ಎಂಬ ಭಾವನೆಯನ್ನು ಹೇಗಾದರೂ ಮಾಡಿ ಬದಲಿಸುತ್ತೇನೆ ಅಂತ ಕೆಲ ಸಮಯದ ಹಿಂದಷ್ಟೇ ಶಶಾಂಕ್ ಹೇಳಿಕೊಂಡಿದ್ದರು.

ಹೀಗೆ ಭಾರೀ ಸಿದ್ಧತೆಯಲ್ಲಿರುವ 'ಬಚ್ಚನ್' ಫೆಬ್ರವರಿ ಮುಗಿಯುವುದರೊಳಗೆ ತೆಂಗಿನ ಕಾಯಿ ಒಡೆಸಿಕೊಳ್ಳುವುದು ಗ್ಯಾರಂಟಿಯಂತೆ.

ವೆಬ್ದುನಿಯಾವನ್ನು ಓದಿ