ಈ ದರ್ಶನ್ ಆಗ ಕ್ಲಾಪ್ ಬಾಯ್ ಆಗಿದ್ದ: ಸುದೀಪ್

PR


ಈಗೇನೋ ಕಿಚ್ಚ ಸುದೀಪ್ ಸರಿಸಮಾನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಳೆದು ನಿಂತಿರಬಹುದು. ಆದ್ರೆ ನಿಜಕ್ಕೂ ಸುದೀಪ್ ಹೀರೋ ಆಗಿ ಮಿಂಚುತ್ತಿದ್ದಾಗ ದರ್ಶನ್ ಏನು ಮಾಡ್ತಿದ್ರು? ಸಾಕಷ್ಟು ಮಂದಿಗೆ ಈ ಸಂಗತಿ ಗೊತ್ತಿರಲಿಕ್ಕಿಲ್ಲ. ಅದನ್ನು ಸುದೀಪ್ ಹೇಳಿಕೊಂಡಿದ್ದಾರೆ. ಮನ ಬಿಚ್ಚಿ ಮಾತನಾಡಿದ್ದಾರೆ.

ಸುದೀಪ್ ಹೀಗೆ ಸಾಕಷ್ಟು ಸಂಗತಿಗಳನ್ನು ಹೇಳಿಕೊಂಡಿರುವುದು 'ರೂಪತಾರಾ' ಜತೆ. ಪತ್ರಕರ್ತರು, ನಿರ್ದೇಶಕರ ಜತೆ ಸದಾ ಜಗಳ ಮಾಡಿಕೊಂಡೇ ಸುದ್ದಿ ಮಾಡುವ, ಅಹಂಕಾರಿ ಎಂದೂ ಕರೆಸಿಕೊಳ್ಳುವ ಸುದೀಪ್ ನಿಜಕ್ಕೂ ಏನು ಅನ್ನೋದು ಸೇರಿದಂತೆ ತನ್ನ ಬಗೆಗಿನ ಹಲವು ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಲು ಯತ್ನಿಸಿದ್ದಾರೆ. ಅದರ ಕೆಲವು ಅಂಶಗಳು ಇಲ್ಲಿವೆ. ಓದಿಕೊಳ್ಳಿ.

PR


ಅವರಿವರ ಮೇಲೆ ಎಗರಾಡ್ತೀರಂತೆ...?
ಎಲ್ಲವೂ ಸುಳ್ಳು ಅಂತ ಹೇಳುತ್ತಿಲ್ಲ. ಹಾಗಂತ ಸತ್ಯವೂ ಅಲ್ಲ. ನಾನು ಏನು ಅನ್ನೋದು ನಿಮಗೆ ಗೊತ್ತಿಲ್ವೇ? ಮತ್ತೆ ನನ್ನನ್ನು ಯಾಕೆ ಕೇಳ್ತೀರಿ? ಇದಕ್ಕೆ ನಾನೇನೂ ಹೇಳೋದಿಲ್ಲ. ನಾನೇನೋ ಹೇಳಿದರೆ ಅದು ಆಚೆಗೆ ಇನ್ನೇನೋ ಆಗಿಬಿಡುತ್ತೆ. ಉತ್ತರ ಕೊಡದೇ ಇದ್ರೆ ಜೈಲಿಗೆ ಹೋಗ್ತೀನಿ ಅನ್ನೋ ಪರಿಸ್ಥಿತಿ ಬಂದಾಗ ಉತ್ತರಿಸ್ತೀನಿ.

ಮೂಗು ತೂರಿಸೋದು ಯಾಕೋ...
ಎಲ್ಲವೂ ಸರಿಯಾಗಿದ್ರೆ ನಾನ್ಯಾಕೆ ಮೂಗು ತೂರಿಸಲಿ.. ನನ್ನಲ್ಲಿಗೆ ಬಂದು ಕಥೆ ಹೇಳುವಾಗ ಎಲ್ಲವೂ ಸರಿಯಾಗಿರುತ್ತದೆ. ಆದರೆ ಚಿತ್ರೀಕರಣಕ್ಕೆ ಹೋಗುವಾಗ ಎಲ್ಲವೂ ಗಲಿಬಿಲಿ. ಕಥೆ ಹೇಳುವಾಗ ಇರೋದೇ ಬೇರೆ, ಚಿತ್ರೀಕರಣದಲ್ಲಿರೋದೇ ಬೇರೆ. ಇದು ನನಗೆ ಇಷ್ಟವಾಗೋದಿಲ್ಲ. ಯಾಕೆ ಹೀಗಾಯ್ತು ಅಂತ ಕೇಳ್ತೀನಿ. ನನ್ನದೇ ಸಿನಿಮಾ ಆಗಿರೋದ್ರಿಂದ ಹೇಗೆ ಒಳ್ಳೇದು ಮಾಡ್ಬೋದು ಅಂತ ಯೋಚಿಸ್ತೀನಿ. ಇದನ್ನೇ ಇಂಟರ್‌ಫಿಯರೆನ್ಸ್ (ಮೂಗು ತೂರಿಸುವುದು) ಅಂದ್ರೆ ನಾನೇನು ಮಾಡ್ಲಿ..?

PR


ದರ್ಶನ್ ಕ್ಲಾಪ್ ಬಾಯ್ ಆಗಿದ್ದ...
ಇವತ್ತು ದರ್ಶನ್, ದುನಿಯಾ ವಿಜಯ್ ಹೀರೋಗಳು. ಆದ್ರೆ ಒಂದು ಕಾಲದಲ್ಲಿ ಅವರು ಏನೂ ಆಗಿರಲಿಲ್ಲ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶೂಟಿಂಗ್ ಮುಗಿಸಿಕೊಂಡು ಹೊರಗೆ ಬರುವಾಗ ಅಲ್ಲೊಬ್ಬ ಲಂಬೂ ಹುಡುಗ ಕ್ಲಾಪ್ ಬೋರ್ಡ್ ಹಿಡಿದು ನಿಂತಿದ್ದ. ಯಾರದು ಎಂದು ಪಕ್ಕದಲ್ಲಿದ್ದೋರಿಗೆ ಕೇಳಿದೆ. ಅದು ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಎಂದರು. ಆತ ಯಾಕೆ ಈ ಕೆಲಸ ಮಾಡ್ತಿದ್ದಾನೆ ಅಂದೆ. ಮನೆಯಲ್ಲಿ ಕಷ್ಟ ಅನ್ನೋ ಉತ್ತರ ಬಂತು.

ಆಗ ದರ್ಶನ್ ಆ ಕೆಲಸ ಮಾಡುತ್ತಿದ್ದುದು ಸಂಬಳಕ್ಕಾಗಿ. ಆದರೆ ಮೆಜೆಸ್ಟಿಕ್ ಚಿತ್ರದಲ್ಲಿ ನಾಯಕನಾದ ಮೇಲೆ ಅವನು ಬದುಕಿನ ಗತಿ ಬದಲಾಯಿತು. ಆಗ ಇದ್ದ ದರ್ಶನ್ನೇ ಬೇರೆ, ಈಗಿನ ದರ್ಶನ್ನೇ ಬೇರೆ. ಹೇಗಿದ್ದೋನು ಹೇಗಾದ ನೋಡಿ. ಅದೇ ರೀತಿ ವಿಜಿ ಕೂಡ. ನಾವು ಮೂವರೂ ಗಾಡ್‌ಫಾದರ್‌ಗಳಿಲ್ಲದೆ ಬೆಳೆದೋರು. ಇದಕ್ಕೆ ಕಾರಣ ಸಿನಿಮಾ.

PR


ವಿಷ್ಣು ಸರ್ ಮಾಡಿದ ತಪ್ಪು...
ವರನಟ ಡಾ. ರಾಜ್‌ಕುಮಾರ್ ಅವರ ಚಿತ್ರಗಳಿಗೆ ಕಥೆ ರೆಡಿ ಮಾಡೋದಿಕ್ಕೆ ಅಂತಾನೇ ಒಂದು ತಂಡವಿತ್ತು. ಅವರಿಗೆ ಅದೇ ಕೆಲಸ. ರಾಜ್ ಯಾವ ಸಂಭಾಷಣೆ ಹೇಳಬೇಕು ಅನ್ನೋದರಿಂದ ಹಿಡಿದು ಎಲ್ಲವನ್ನೂ ಆ ತಂಡ ನಿರ್ಧರಿಸುತ್ತಿತ್ತು.

ಇದೇ ರೀತಿ ಸಾಹಸಸಿಂಹ ಡಾ. ವಿಷ್ಣುವರ್ಧನ್‌ ಕೂಡ ಇದ್ರು. ಆದ್ರೆ ಸ್ನೇಹಕ್ಕೋಸ್ಕರ ರಾಜಿ ಮಾಡಿಕೊಂಡರು. ಗೆಳೆತನಕ್ಕೋಸ್ಕರ ಅರ್ಹರಲ್ಲದ ಕೆಲವರಿಗೆ ಕಾಲ್‌ಶೀಟ್ ಕೊಟ್ಟು ತಪ್ಪು ಮಾಡಿದ್ರು. ಅವರ ಪಾಲಿಗೆ ಅದೇ ತೊಂದರೆಯನ್ನು ತಂದೊಡ್ಡಿತು. ಇದನ್ನು ಎಷ್ಟೋ ಸಲ ಅವರು ಹೇಳಿಕೊಂಡಿದ್ದರು ಕೂಡ. ಇದೆಲ್ಲ ನಮಗೆ ಪಾಠ. ನಾವು ಕಲಿಯಬೇಕು.

ವೆಬ್ದುನಿಯಾವನ್ನು ಓದಿ