ದರ್ಶನ್‌ಗೆ ಬರ್ತ್‌ಡೇ ಸಂಭ್ರಮ; ಪೊಲೀಸರ ತಕರಾರು

SUJENDRA


ನಾಲ್ಕಾರು ಬಾರಿ ಪೊಲೀಸ್ ಠಾಣೆಗೆ ಅಲೆದಾಡಿದರೂ ಅನುಮತಿ ಸಿಕ್ಕಿರಲಿಲ್ಲ. ನೀವು ಮನೆ ಮುಂದೆ ಹುಟ್ಟುಹಬ್ಬ ಮಾಡಬೇಡಿ, ಎಲ್ಲಾದರೂ ಸಭಾಂಗಣದಲ್ಲೋ ಅಥವಾ ಮೈದಾನದಲ್ಲೋ ಮಾಡಿ ಎಂಬ ಹಾಸ್ಯಾಸ್ಪದ ಸಲಹೆ ಪೊಲೀಸರಿಂದ ಬಂದಿತ್ತು. ಅದೇನೇ ಆದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ 35ನೇ ಹುಟ್ಟುಹಬ್ಬವನ್ನು ಮನೆಯಲ್ಲೇ ಧಾಮ್ ಧೂಮ್ ಆಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದರು. ಅಷ್ಟು ಹೊತ್ತಿಗೆ ಪೊಲೀಸರೂ ಅನುಮತಿ ಕೊಟ್ಟಿದ್ದಾರೆ. ಸಾವಿರಾರು ಅಭಿಮಾನಿಗಳು ಮನೆಗೆ ಬಂದು ಹಾರೈಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯಲ್ಲಿ ಮಧ್ಯರಾತ್ರಿಯೇ ಹುಟ್ಟುಹಬ್ಬದ ಸಂಭ್ರಮ (ಫೆಬ್ರವರಿ 16) ಶುರುವಾಗಿತ್ತು. ಸಾವಿರಾರು ಅಭಿಮಾನಿಗಳು ಅವರ ಮನೆಯ ಸುತ್ತ ನೆರೆದಿದ್ದರು. ರಾತ್ರಿ 12.00 ಗಂಟೆ ಹೊತ್ತಿಗೆ ದರ್ಶನ್ ಕೇಕ್ ಕತ್ತರಿಸಿದರೆ, ಅಭಿಮಾನಿಗಳು ಹೊರಗಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ರಾತ್ರಿ ಶುರುವಾದ ಅಭಿಮಾನಿಗಳ ಅಬ್ಬರ ಮಧ್ಯಾಹ್ನದವರೆಗೂ ಮುಂದುವರಿದಿದೆ. ಪಟಾಕಿ ಸಿಡಿಸುತ್ತಾ, ದರ್ಶನ್ ಪರ ಘೋಷಣೆಗಳನ್ನು ಕೂಗುತ್ತಾ, ಬ್ಯಾನರುಗಳನ್ನು ಹಿಡಿದು ಕುಣಿಯುತ್ತಾ ಅಭಿಮಾನಿಗಳು ತಮ್ಮ ಸಂತೋಷವನ್ನು ಹೊರ ಹಾಕುತ್ತಿದ್ದಾರೆ.

ಅಭಿಮಾನಿಗಳಿಗೂ ದರ್ಶನ್ ನಿರಾಸೆ ಮಾಡಿಲ್ಲ. ತನಗೆ ಶುಭ ಹಾರೈಸಲೆಂದು ಬಂದ ಪ್ರತಿಯೊಬ್ಬ ಅಭಿಮಾನಿಯನ್ನೂ ನೇರವಾಗಿ ಭೇಟಿ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಹಸ್ತಲಾಘವ ಮಾಡಿ, ಪ್ರೀತಿಯಿಂದ ಕೆನ್ನೆ ತಟ್ಟುತ್ತಿದ್ದಾರೆ. ಕೆಲವು ಅಂಗವಿಕಲರೂ ದರ್ಶನ್‌ಗೆ ಶುಭ ಹಾರೈಸಲು ಬಂದಿದ್ದು ವಿಶೇಷವಾಗಿ ಗಮನ ಸೆಳೆಯಿತು.

ಈ ಎಲ್ಲಾ ಅಭಿಮಾನಿಗಳಿಗೂ ದರ್ಶನ್ ಊಟದ ವ್ಯವಸ್ಥೆ ಮಾಡಿದ್ದಾರೆ. ನನಗಾಗಿ ಇಷ್ಟೊಂದು ಕಷ್ಟಪಡುವ ಅಭಿಮಾನಿಗಳಿಗೆ ಒಂದು ಹೊತ್ತಿನ ಊಟ ಕೊಡುವುದೇ ನನ್ನ ಖುಷಿ ಎಂದಿದ್ದಾರೆ ದರ್ಶನ್. ಅಲ್ಲದೆ ಈಗ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದಕ್ಕೂ ಅಭಿಮಾನಿಗಳೇ ಕಾರಣ. ಐದಾರು ವರ್ಷಗಳ ಹಿಂದೆ ನನಗೆ ಹುಟ್ಟುಹಬ್ಬವೇ ಇರಲಿಲ್ಲ. ನನಗೇ ಗೊತ್ತಿರಲಿಲ್ಲ ಎಂದು ಹಳೆಯ ನೆನಪುಗಳನ್ನೂ ಇದೇ ಸಂದರ್ಭದಲ್ಲಿ ಹಂಚಿಕೊಂಡರು.

PR


ಪತ್ನಿಯಿಂದ ಜಾಗ್ವಾರ್ ಕಾರ್ ಗಿಫ್ಟ್...
34ನೇ ಹುಟ್ಟುಹಬ್ಬ ಆಚರಿಸಿದ ನಂತರ ದರ್ಶನ್ ವೈಯಕ್ತಿಕ ಜೀವನ ಮೂರಾಬಟ್ಟೆಯಾಗಿತ್ತು. ಪತ್ನಿ ವಿಜಯಲಕ್ಷ್ಮಿಯೇ ದರ್ಶನ್ ವಿರುದ್ಧ ದೂರು ನೀಡಿದ್ದರು. ಜೈಲಿಗೆ ಹೋಗಿ ಬಂದದ್ದೂ ಆಯ್ತು. ಈಗ ಅವರದ್ದು ಪುನರ್ಜನ್ಮ. ಹಳೆಯದೆಲ್ಲವನ್ನೂ ಮರೆತು ಹೊಸ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಇಬ್ಬರಿಗೂ ಸ್ವಲ್ಪ ಭಿನ್ನ ಅನುಭವ.

ಅದು ಸರಿಯೆಂಬಂತೆ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ದುಬಾರಿ ಕಾರು ಉಡುಗೊರೆ ನೀಡಿದ್ದಾರೆ. ನೀಲಿ ಬಣ್ಣದ ಹೊಚ್ಚ ಹೊಸ ಜಾಗ್ವಾರ್ ಕಾರನ್ನು ಖರೀದಿಸಿರುವ ಪತ್ನಿ, ಅದನ್ನೀಗ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರೀತಿಯಿಂದ ಪತಿಗೆ ನೀಡಿದ್ದಾರೆ.

ಯಾರ ಮನೆಯಲ್ಲಿಲ್ಲ ಸಮಸ್ಯೆ?
ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ದರ್ಶನ್ ಎತ್ತಿರುವ ಪ್ರಶ್ನೆಯಿದು. ನನ್ನ ಸಂಸಾರದಲ್ಲೂ ಸಮಸ್ಯೆ ಇತ್ತು. ಅದೀಗ ಪರಿಹಾರವಾಗಿದೆ. ಯಾರ ಮನೆಯಲ್ಲಿ ಸಮಸ್ಯೆ ಇಲ್ಲ? ನೀವೂ ಮದುವೆಯಾದರೆ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳುವ ಮೂಲಕ ಪತ್ರಕರ್ತರನ್ನೇ ಬೆಚ್ಚಿ ಬೀಳಿಸಿದರು.

ಈಗ ನಾನು ಪತ್ನಿ ವಿಜಯಲಕ್ಷ್ಮಿ ಜತೆ ನೆಮ್ಮದಿಯ ಜೀವನ ನಡೆಸುತ್ತಿದ್ದೇನೆ. ಹಳೆಯದೆಲ್ಲವನ್ನೂ ಮರೆತಿದ್ದೇನೆ. ಸಂಸಾರ ಎಂದ ಮೇಲೆ ಸಮಸ್ಯೆಗಳು ಇದ್ದೇ ಇರುತ್ತವೆ. ನನ್ನ ಜೀವನದಲ್ಲೂ ಅದೇ ನಡೆಯಿತು. ಆದರೆ ಮಾಧ್ಯಮಗಳಿಂದಾಗಿ ಅತಿರೇಕಕ್ಕೆ ಹೋಯಿತು. ಎಂದರು.

SUJENDRA


ಹಿಗ್ಗೋದಿಲ್ಲ, ಕುಗ್ಗೋದಿಲ್ಲ...
ನಾನು ಸೋತಾಗ ಕುಗ್ಗುವ ಅಥವಾ ಗೆದ್ದಾಗ ಹಿಗ್ಗುವ ವ್ಯಕ್ತಿತ್ವದವನಲ್ಲ. ಏನಿದ್ದರೂ ನೇರಾನೇರ. ನನ್ನನ್ನು ಮುಂಗೋಪಿ ಎಂದು ಬೇಕಾದರೂ ಕರೆಯಿರಿ. ಆದರೆ ಅಹಂಕಾರಿಯಲ್ಲ. ಒಳ್ಳೆಯವರಿಗೆ ಒಳ್ಳೆಯವ. ಕೆಟ್ಟವನಿಗೆ ಕೆಟ್ಟವ. ಅದೇ ನನ್ನ ಎರಡು ಮುಖಗಳು.

ಹೆಚ್ಚು ಕನಸುಗಳು ನನಗಿಲ್ಲ. ಕನಸುಗಳನ್ನು ಕಾಣೋದೇ ಇಲ್ಲ. ಅಂತಹ ಪಾತ್ರ ಬೇಕು, ಇಂತಹ ಪಾತ್ರ ಬೇಕು ಎಂಬ ಹಠವಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಬಂದದ್ದನ್ನು ಸ್ವೀಕರಿಸುತ್ತೇನೆ. ಯಾವುದೇ ಪಾತ್ರವಾದರೂ, ಕೊಟ್ಟದ್ದನ್ನು ಕಣ್ಮುಚ್ಚಿ ಸ್ವೀಕರಿಸಿ ನಟಿಸುತ್ತೇನೆ ಎಂದರು ದರ್ಶನ್.

PR


ಪೊಲೀಸರ ಕಿರಿಕ್....
ತನ್ನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಲು ದರ್ಶನ್ ಪೊಲೀಸರ ಅನುಮತಿ ಕೋರಿದ್ದರು. ಆದರೆ ಪೊಲೀಸರು ಮನೆಯ ಮುಂದೆ ಜನರನ್ನು ಜಮಾಯಿಸಲು ಅನುಮತಿ ನಿರಾಕರಿಸಿದ್ದರು. ಬೇರೆಲ್ಲಾದರೂ ಮಾಡಿಕೊಳ್ಳಿ ಎಂಬ ಬಿಟ್ಟಿ ಸಲಹೆಯೂ ಅವರಿಂದ ಬಂದಿತ್ತು.

ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಮುಂದಿಟ್ಟಿದ್ದ ಪೊಲೀಸರು, ಅನುಮತಿ ನೀಡಿರಲಿಲ್ಲ. ಆರಂಭದಲ್ಲಿ ಪಕ್ಕದ ಪೊಲೀಸ್ ಠಾಣೆಯಲ್ಲಿ ಅನುಮತಿ ಕೇಳಿದಾಗ ಸಿಕ್ಕಿರಲಿಲ್ಲ. ನಂತರ ಮೇಲಧಿಕಾರಿಗಳ ಬಳಿ ದರ್ಶನ್ ಹೋಗಿದ್ದರು. ಆದರೆ ಅಲ್ಲೂ ಅನುಮತಿಗೆ ಪೊಲೀಸರು ನಿರಾಕರಿಸಿದ್ದರು.

ಭಾರೀ ಸಂಖ್ಯೆಯ ಅಭಿಮಾನಿಗಳು ಮನೆ ಮುಂದೆ ನೆರೆದರೆ ಸಮಸ್ಯೆ ಸೃಷ್ಟಿಯಾಗಬಹುದು. ಹಾಗಾಗಿ ನೀವು ಮದುವೆ ಹಾಲಿನಲ್ಲೋ ಅಥವಾ ಎಲ್ಲಾದರೂ ಮೈದಾನದಲ್ಲಿ ಹುಟ್ಟುಹಬ್ಬವನ್ನು ಆಚರಿಸಿ. ಆಗ ನಾವು ನಿಮಗೆ ಭದ್ರತೆಯನ್ನು ಕೊಡುತ್ತೇವೆ ಎಂದು ಪೊಲೀಸರು ಸಲಹೆ ನೀಡಿದ್ದರು.

ಆದರೂ ನಿನ್ನೆ ಸಂಜೆಯ ಹೊತ್ತಿಗೆ ಪೊಲೀಸರು ಸಮಾಲೋಚನೆ ನಡೆಸಿದ ನಂತರ ಹುಟ್ಟುಹಬ್ಬ ಆಚರಿಸಲು ಅನುಮತಿ ನೀಡಿದ್ದಾರೆ. ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನೂ ಇಲಾಖೆ ನಿಯೋಜಿಸಿದೆ.

ವೆಬ್ದುನಿಯಾವನ್ನು ಓದಿ