ದರ್ಶನ್ ಗೋಮುಖ ವ್ಯಾಘ್ರ, ಸಹಾಯವನ್ನೇ ಮರೆತ!

SUJENDRA
ಹೀಗೆಂದು ಹಿಗ್ಗಾಮುಗ್ಗಾ ಝಾಡಿಸಿರುವುದು 'ಚಿಂಗಾರಿ' ನಿರ್ಮಾಪಕ ಮಹದೇವು. ಅವರನ್ನು 'ಚಿಂಗಾರಿ' ನಿರ್ಮಾಪಕ ಅನ್ನುವುದಕ್ಕಿಂತ, ಅಂದು ಚಾಲೆಂಜೇ ಇಲ್ಲದೆ ಜೈಲಿನಲ್ಲಿದ್ದ ದರ್ಶನ್‌ಗೆ ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿದ್ದ ಮಹದೇವು ಎಂದು ಕರೆಯುವುದೇ ಉತ್ತಮ. ಅಂತಹ ಮಹದೇವು ಅವರನ್ನು ದರ್ಶನ್ ಮರೆತಿದ್ದಾರಂತೆ. ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ಮಾಡಿದ್ದಾರಂತೆ!

ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ? ಇದು ನೊಂದಿರುವ ಮಹದೇವು ಮಾತುಗಳು. ಅಂದು ಜೈಲಿನಿಂದ ಬಿಡಿಸಿದಾಗ, ನೀವು ನನ್ನ ತಂದೆಯ ಸಮಾನ ಅಂತ ಇದೇ ದರ್ಶನ್ ನನ್ನನ್ನು ಕರೆದಿದ್ದರು. ಇದೇ ದರ್ಶನ್ ಈಗ ನನ್ನ ಮಗನನ್ನು "@!#%*+)#@" ಎಂದು ಹೀಯಾಳಿಸಿದ್ದಾರೆ, ಮನಸೋ ಇಚ್ಛೆ ಬೈಯ್ದಿದ್ದಾರೆ. ಕೆಟ್ಟ ಪದಗಳನ್ನು ಬಳಸಿದ್ದಾರೆ.

1.6 ಕೋಟಿ ಸಂಭಾವನೆ...
ಇನ್ಯಾವತ್ತೂ ನಾನು ದರ್ಶನ್ ಜತೆ ಸಿನಿಮಾ ಮಾಡೋದಿಲ್ಲ. ಸಿನಿಮಾ ಮಾಡೋದು ಬಿಡಿ, ಅವರ ಮುಖವನ್ನೇ ನೋಡುವುದು ನನಗೆ ಇಷ್ಟವಿಲ್ಲ. ಅದೇ ಕಾರಣದಿಂದ 'ಚಿಂಗಾರಿ' ಸಂತೋಷಕೂಟಕ್ಕೆ ನಾನು ಬರಲಿಲ್ಲ. ನನ್ನದೇ ನಿರ್ಮಾಣದ ಚಿತ್ರದ ಕಾರ್ಯಕ್ರಮಕ್ಕೆ ಬರದೇ ಇರಲು ಇದೇ ಕಾರಣ.

ಚಿಂಗಾರಿ ಚಿತ್ರ ಚೆನ್ನಾಗಿ ಮೂಡಿ ಬರಬೇಕೆಂದು ಏನೆಲ್ಲ ಮಾಡಿದೆ. ಅದಕ್ಕಾಗಿ ಒಂದು ವರ್ಷ ಒಂಭತ್ತು ತಿಂಗಳು ಕಾದೆ. ನನಗೆ ಇದರಿಂದ ಲಾಭವೂ ಆಯಿತು, ಆದರೆ ಮಾನಸಿಕ ನೆಮ್ಮದಿಯಿಲ್ಲ. ಅದಕ್ಕೆ ಕಾರಣ, ನನ್ನ ಮಗ ಮನು ಗೌಡನನ್ನು ದರ್ಶನ್ ನಿಂದಿಸಿರುವುದು. ದರ್ಶನ್‌ಗೆ ನಾನು ಸಂಭಾವನೆಯಾಗಿ 1.6 ಕೋಟಿ ರೂಪಾಯಿಗಳನ್ನು ಒಮ್ಮೆಲೇ ಕೊಟ್ಟಿದ್ದೇನೆ. ಆದರೂ ನನ್ನ ಬಗ್ಗೆ ದರ್ಶನ್ ಏನೆಲ್ಲಾ ಹೇಳಿಕೊಂಡು ಬಂದರು. ಅಂದು ಕಷ್ಟದಲ್ಲಿದ್ದಾಗ ಜಾಮೀನು ಕೊಟ್ಟು ಬಿಡಿಸಿದ ವ್ಯಕ್ತಿ ಇವರೇನಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.

ಹೊಟೇಲ್ ಬಿಲ್ ಕೊಟ್ಟಿದ್ದು ನಾನು...
ಚಿಂಗಾರಿ ಸಂತೋಷ ಕೂಟಕ್ಕೆ ನಾನು ಬರಲಿಲ್ಲ ಅನ್ನೋದನ್ನೇ ದೊಡ್ಡ ಸುದ್ದಿ ಮಾಡಲಾಯಿತು. ಬರಬೇಕಿತ್ತು, ಬರಲಿಲ್ಲ ಎಂಬುದನ್ನೇ ದೊಡ್ಡದು ಮಾಡಲಾಯಿತು. ಆದರೆ ಆ ಹೊಟೇಲ್ ಬಿಲ್ಲನ್ನು ಕೊಟ್ಟಿರುವುದು ಯಾರು ಎಂದು ಗೊತ್ತೇ? ಗೋಲ್ಡ್ ಫಿಂಚ್ ಹೊಟೇಲ್ ಬುಕ್ ಮಾಡಿಸಿದ್ದು ನಾನು, ಅದರ ಬಿಲ್ ಪಾವತಿ ಮಾಡಿದ್ದು ಕೂಡ ನಾನು. ನನಗೆ ದರ್ಶನ್ ಮುಖ ನೋಡುವುದು ಇಷ್ಟವಿರಲಿಲ್ಲ, ಅದಕ್ಕಾಗಿ ನಾನು ಬರಲಿಲ್ಲ.

ಪುನೀತ್ ಜತೆ ಮಾತ್ರ...
ಚಿಂಗಾರಿ ಮುಗಿದು ಹೋಯಿತು. ಇನ್ನೇನಾದರೂ ನಾನು ಸಿನಿಮಾ ಮಾಡುವುದಿದ್ದರೆ, ಅದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜತೆ ಮಾತ್ರ. ಅದಕ್ಕಾಗಿ ನಾನು ಮೂರು ವರ್ಷ ಕಾಯಲೂ ಸಿದ್ಧನಿದ್ದೇನೆ. ಆದರೆ ಯಾವತ್ತೂ ದರ್ಶನ್ ಜತೆ ಸಿನಿಮಾ ಮಾಡುವುದಿಲ್ಲ.

ವೆಬ್ದುನಿಯಾವನ್ನು ಓದಿ