ನಡೆಯದ ದರ್ಶನ್ ಜಾದೂ - 'ಚಿಂಗಾರಿ' ಠುಸ್?

SUJENDRA


ಇಂತಹ ಮಾತುಗಳು ಗಾಂಧಿನಗರದ ಮಂದಿಗೆ ಮಾಮೂಲಿ. ಕೆಲವು ಸಿನಿಮಾಗಳು ಯಶಸ್ಸಿನ ಹಾದಿಯಲ್ಲಿದ್ದರೂ, ಯಶಸ್ಸಾದರೂ ಹೀಗೆ ಹೇಳುತ್ತಾರೆ. ಕಾರಣ, ಇನ್ನೊಬ್ಬರ ಗೆಲುವನ್ನು ಸಂಭ್ರಮಿಸಲು ಅವರಿಗೆ ಗೊತ್ತೇ ಇರುವುದಿಲ್ಲ, ಬದಲಿಗೆ ಕರುಬುತ್ತಾರೆ. ಇಲ್ಲೂ ಅದೇ ನಡೆದಿದೆಯೇ? ಗೊತ್ತಿಲ್ಲ. ಆದರೆ ಸ್ವತಃ ನಿರ್ಮಾಪಕರಿಂದ ಹಿಡಿದು ಹಲವರು, 'ದರ್ಶನ್ ಚಿಂಗಾರಿ ಠುಸ್' ಎಂದು ಹೇಳುತ್ತಿರುವುದಂತೂ ನಿಜ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿದ್ದಾಗಲೇ ಬಿಡುಗಡೆಯಾಗಿದ್ದ 'ಸಾರಥಿ' ಯಾರೂ ಊಹಿಸಲಾಗದರ ರೀತಿಯ ಯಶಸ್ಸು ಕಂಡಿತ್ತು. ಅದರ ಗೆಲುವೇ ಒಂದು ಅದ್ಭುತ. ಪತ್ನಿಯ ಕೇಸಿನಿಂದಾಗಿ ಸ್ಟಾರ್‌ಗಿರಿ ಕಳೆದುಕೊಂಡು ಖಳನಾಗಿದ್ದ ದರ್ಶನ್, ಒಮ್ಮಿಂದೊಮ್ಮೆಲೆ ಫೀನಿಕ್ಸ್‌‌ನಂತೆ ಧಿಗ್ಗನೆದ್ದಿದ್ದರು. ಅವರ ಸ್ಟಾರ್‌ಗಿರಿ ದುಪ್ಪಟ್ಟಾಗಿತ್ತು. ಬೇಡಿಕೆ ಮಿತಿ ಮೀರಿತ್ತು.

ಇದೇ ಕಾರಣದಿಂದ ಮಹದೇವು ನಿರ್ಮಾಣದ 'ಚಿಂಗಾರಿ'ಗೆ ಭಾರೀ ಬೇಡಿಕೆ ಸೃಷ್ಟಿಯಾಯ್ತು. ಅಂತಹ ಭರವಸೆಯನ್ನು ಸ್ವತಃ ನಿರ್ದೇಶಕ ಹರ್ಷ ಕೂಡ ವ್ಯಕ್ತಪಡಿಸಿದ್ದರು. ಅದೇ ಆಸೆಯಲ್ಲಿ ವಿತರಕ ಸಮರ್ಥ್ ವೆಂಚರ್ಸ್‌ನ ಪ್ರಸಾದ್ 'ಚಿಂಗಾರಿ'ಯನ್ನು ಬರೋಬ್ಬರಿ 9 ಕೋಟಿ ರೂಪಾಯಿಗಳಿಗೆ ಖರೀದಿಸಿ ಬಿಟ್ಟರು. ಆದರೆ ಈಗ ಅವರ ಗತಿ ಏನಾಗಿದೆ?

ಮೂಲಗಳ ಪ್ರಕಾರ, ಸಮರ್ಥ್ ವೆಂಚರ್ಸ್ ಪ್ರಕಾಶ್ ಪ್ರಚಾರಕ್ಕೆಂದು 50 ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದಾರೆ. ಅಂದರೆ ಅವರ ವ್ಯವಹಾರದ ಒಟ್ಟು ಮೊತ್ತ 9.5 ಕೋಟಿ ರೂಪಾಯಿ ದಾಟಿದೆ. ಈ ಇಷ್ಟೂ ಹಣವೂ ಅವರಿಗೆ ಥಿಯೇಟರುಗಳಿಂದಲೇ ಬರಬೇಕಿತ್ತು. ಬಂದಿದೆಯೇ?

ಪ್ರಸಾದ್ ಅವರೇ ಹೇಳುವುದನ್ನು ನಂಬುವುದಾದರೆ, ಹೌದು. ಅವರಿಗೆ ನಷ್ಟವಾಗಿಲ್ಲ. ಈಗಲೂ ಚಿಂಗಾರಿ ಚೆನ್ನಾಗಿಯೇ ಓಡುತ್ತಿದೆ.

ಪ್ರಸಾದ್ ಮಾತೇ ನಿಜವೇ? ನಿರ್ಮಾಪಕ ಮಹದೇವು ಪ್ರಕಾರ, ಇಲ್ಲ. ಪ್ರಸಾದ್‌ಗೆ ಚಿತ್ರದಲ್ಲಿ ನಷ್ಟವಾಗಿದೆ. ಚಿಂಗಾರಿ ಅಷ್ಟೇನೂ ಚೆನ್ನಾಗಿ ಓಡುತ್ತಿಲ್ಲ. ಅವರ ಮಾತನ್ನು ಬಿಟ್ಟು, ಗಾಂಧಿನಗರದ ಪಂಡಿತರ ಲೆಕ್ಕಾಚಾರವನ್ನು ನೋಡುವುದಾದರೆ, ಪ್ರಸಾದ್‌ಗೆ ಎರಡೂವರೆ ಕೋಟಿ ರೂಪಾಯಿ ನಷ್ಟವಾಗಿದೆ.

ಅದು ಹೇಗೆ? ಇಲ್ಲಿದೆ ನೋಡಿ ಲೆಕ್ಕಾಚಾರ. ಚಿಂಗಾರಿ ಒಟ್ಟು 160ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿತ್ತು. ಚಿತ್ರ ತೆರೆಗೆ ಬಂದ ಐದು ವಾರದಲ್ಲಿ ಅದೀಗ 15ಕ್ಕೆ ಇಳಿದಿದೆ. ಈ ಆರಂಭದ ಐದು ವಾರಗಳಲ್ಲಿ ಚಿತ್ರದ ಒಟ್ಟು ಗಳಿಕೆ ಕೇವಲ ಏಳು ಕೋಟಿ ರೂಪಾಯಿಗಳು ಮಾತ್ರ. ಇಡೀ ಬೆಂಗಳೂರಿನಲ್ಲಿ ಚಿಂಗಾರಿ ಓಡುತ್ತಿರೋ ಚಿತ್ರಮಂದಿರಗಳು ಬೆರಳೆಣಿಕೆಯಷ್ಟು ಮಾತ್ರವೇ ಇದೆ. ಅಂದರೆ, ಇನ್ನು ಮುಂದಿನ ಗಳಿಕೆ ಲಕ್ಷಗಳಿಗೇ ಸೀಮಿತವಾಗಿ ಬಿಡುವುದು ಗ್ಯಾರಂಟಿ.

ಹಾಗಾಗಿ, ಚಿಂಗಾರಿ ಠುಸ್ ಅನ್ನೋದು ಗಾಂಧಿನಗರದ ಮಂದಿಯ ಲೆಕ್ಕಾಚಾರ. ಸಾರಥಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಮಾಡಿದ ಜಾದೂ ಇಲ್ಲಿ ಮತ್ತೆ ನಡೆದಿಲ್ಲ ಅಂತಾರವರು. ನೀವೇನಂತೀರಿ?

ವೆಬ್ದುನಿಯಾವನ್ನು ಓದಿ