ಪೂಜಾ ಗಾಂಧಿ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ?

WD
ಇತ್ತೀಚೆಗಷ್ಟೇ ಅರೆ ಬೆತ್ತಲೆಯಾಗಿ ಸುದ್ದಿ ಮಾಡಿದ ಮಳೆ ಹುಡುಗಿ ಪೂಜಾ ಗಾಂಧಿ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ? ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವೇ? ಅದಕ್ಕೆ ಕಾರಣ ರಾಜಕೀಯವೇ? ಜೆಡಿಎಸ್‌ನಲ್ಲಿ ತನ್ನ ರಾಜಕೀಯ ಭವಿಷ್ಯದ ಲೆಕ್ಕಾಚಾರ ಹಾಕಿದ್ದಾರೆಯೇ? ಹೌದು ಅಂತಿವೆ ಮೂಲಗಳು. ಆದರೆ ಪೂಜಾ ಗಾಂಧಿ ಮಾತ್ರ ನಿರಾಕರಿಸಿದ್ದಾರೆ!

ಪೂಜಾ ಗಾಂಧಿ ನಿಜಕ್ಕೂ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವೇ ಅಥವಾ ಅವರಿಗೆ ಆಫರುಗಳೇ ಬರುತ್ತಿಲ್ಲವೇ ಅನ್ನೋದು ಅಸ್ಪಷ್ಟ. ಆದರೆ ಇಂತಹ ವದಂತಿ ಹುಟ್ಟಿಕೊಂಡಿರುವುದು ಮಾತ್ರ ನಿಜ. ತನ್ನ ರಾಜಕೀಯ ಜೀವನವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿದ್ದಾರಂತೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಡಿದೆ.

ಸಿನಿಮಾ ಅನ್ನೋದು ನನಗೆ ತಾಯಿ ಬೇರು ಇದ್ದಂತೆ. ಅದನ್ನು ಬಿಟ್ಟರೆ ನನಗೆ ಬದುಕೇ ಇಲ್ಲ. ರಾಜಕೀಯಕ್ಕೆ ಸೇರಿದ ಕೂಡಲೇ ಸಿನಿಮಾ ಬಿಡಬೇಕೆಂಬ ನಿಯಮ ಎಲ್ಲಿದೆ? ನನ್ನ ಮಟ್ಟಿಗೆ ರಾಜಕೀಯ ಅನ್ನೋದು ಸಮಾಜ ಸೇವೆಗೆ ಒಂದು ಮಾರ್ಗ. ನಾನಿಲ್ಲಿ ಬಂದಿರೋದು ರಾಜಕೀಯ ಮಾಡಲು ಅಲ್ಲ. ಜನಸೇವೆಯೇ ನನ್ನ ಉದ್ದೇಶ ಎಂದು ಇಂತಹ ಮಾತುಗಳಿಗೆ ಪೂಜಾ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅದೆಲ್ಲ ಸರಿ, ನೀವು ಜೆಡಿಎಸ್ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಹಿರಿಯ ನಟಿ ಮಾಳವಿಕಾ ಕೂಡ ಸೇರಿಕೊಂಡಿದ್ದಾರಲ್ಲ? ನೀವಿನ್ನೂ ಅಲ್ಲಿ ಬೇರೂರಿಲ್ಲ. ಅಷ್ಟರಲ್ಲೇ ಇಂತಹ ಬೆಳವಣಿಗೆ ನಡೆದಿದೆ. ಮುಂದೆ ಆಂತರಿಕವಾಗಿ ಪೈಪೋಟಿಯೇನಾದರೂ ಇರಬಹುದೇ ಎಂದು ಪ್ರಶ್ನಿಸಿದರೆ, "ಇಲ್ಲ. ಹಾಗೇನಿಲ್ಲ. ನನ್ನ ಸ್ಪರ್ಧೆ ಸಿನಿಮಾದಲ್ಲಿ ಮಾತ್ರ, ರಾಜಕೀಯದಲ್ಲಿ ಇಲ್ಲ. ನನಗೆ ಯಾರೂ ಅಡ್ಡ ಬರೋದಿಲ್ಲ" ಎನ್ನುತ್ತಾರೆ.

ಅಂದ ಹಾಗೆ, ಜೆಡಿಎಸ್ ಸೇರಿದ ಮೇಲೆ ಪೂಜಾ ಗಾಂಧಿ ಇತ್ತೀಚೆಗಷ್ಟೇ ಇನ್ನೊಂದು ಗಾಸಿಪ್‌ಗೆ ತುತ್ತಾಗಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು ಪೂಜಾ ಗಾಂಧಿಗೆ ಮನೆ ಕೊಟ್ಟಿದ್ದಾರೆ ಎಂಬ ವದಂತಿ ಹರಡಿತ್ತು. ಅದೀಗ ತಣ್ಣಗಾಗಿದೆ. ಇನ್ನೊಂದು ವದಂತಿ ಹುಟ್ಟಿಕೊಂಡಿದೆ.

ಇಂತಹ ಹಲವು ಪ್ರಸಂಗಗಳನ್ನು ಎದುರಿಸಿರುವ ಪೂಜಾ ಗಾಂಧಿಯ 'ದಂಡುಪಾಳ್ಯ'ವೂ ವಿವಾದಕ್ಕೀಡಾಗಿತ್ತು. ಪೂಜಾ ಅರೆ ಬೆತ್ತಲೆಯಾಗಿದ್ದಾರೆ ಎಂದು ಕೆಲವರು ಪ್ರತಿಭಟಿಸಿದ್ದರು. ಇದಕ್ಕೆ ಪೂಜಾ ಪ್ರತಿಕ್ರಿಯಿಸುವುದು ಹೀಗೆ; ಅವರು ನಾನು ಅರೆಬೆತ್ತಲೆಯಾಗಿದ್ದೇನೆ ಎಂದು ಪ್ರತಿಭಟಿಸುವ ಬದಲು, ಜನರಿಗೆ ನೀರಿಲ್ಲ, ಕರೆಂಟ್ ಇಲ್ಲ, ಗ್ಯಾಸ್ ಇಲ್ಲ ಎಂದು ಪ್ರತಿಭಟಿಸಲಿ. ಆಗ ಅದಕ್ಕೊಂದು ಅರ್ಥ ಇರುತ್ತದೆ!

ವೆಬ್ದುನಿಯಾವನ್ನು ಓದಿ